ಪುಟ:ನೋವು.pdf/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



ನೋವು

೭೯

ನಿಂದ ಆ ಕಣ್ಣುಗಳನ್ನು ಒರೆಸಿದರು. ಒರೆಸುತ್ತ ಸ್ವತಃ ತಮ್ಮ ಕಣ್ಣುಗಳೇ ತೇವಗೊಂಡುದನ್ನು
ನಾಗಮ್ಮ ಅರಿತರು. ಅವರು ಸುಭದ್ರೆಯನ್ನು ಎತ್ತಿ ಕೂಡಿಸಿ ಬೆನ್ನು ತೀಡಿದರು.
ಹೊರಗೆ ಅಂಗಳದಲ್ಲಿ ಮಬ್ಬುಗತ್ತಲು ಆವರಿಸಿದಂತೆ, ಎಲ್ಲವೂ ಮಸಕಾಗತೊಡಗಿತ್ತು.
"ಎಲಾ, ಕತ್ತಲಾಯ್ತಲ್ಲ! ಇನ್ನೂ ದನಗೋಳು ಅಟ್ಟಿಗೇ ಬಂದಿಲ್ಲ.... "ಎಂದು
ನಾಗಮ್ಮ ಧ್ವನಿ ತೆಗೆದು ಉದ್ಗರಿಸಿದರು.
ಇದ್ದಕ್ಕಿದ್ದಂತೆ ತಣ್ಣನೆ ಗಾಳಿ ಬೀಸಿತು.
"ಓ.. ಮಳೆ ಬತ್ತದೆ ಸುಬ್ಬೀ ! ಇದು ಮ್ವಾಡ!!"
"ಹೂಂ ಅತ್ತೆಮ್ಮ."
ನಾಗಮ್ಮ, ಯುವತಿಯರನ್ನು ನಾಚಿಸುವ ಉತ್ಸಾಹದಿಂದ, ಸುಭದ್ರೆಯನ್ನು ಹಿಡಿದು
ನಿಲ್ಲಿಸಿ ತಾವು ಎದ್ದರು. ಅವರ ಮುಖದ ಗೆರೆಗಳು ಮಾಯವಾದುವು. ಇನ್ನು ಉಳುಮೆ,
ಬಿತ್ತನೆ. ನಿರಂತರ ಚಟುವಟಿಕೆಯ ದಿನಗಳು.
ಮಳೆಯನ್ನು ಸ್ವಾಗತಿಸಲು ಸಿದ್ಧರಾಗುತ್ತ ನಾಗಮ್ಮ ಅಂದರು:
"ಉಲ್ಲು ಒರಗೇ ಬಿದ್ದವೆ. ಎತ್ಹಾಕ್ಬರ್ತೀನಿ ಸುಬ್ಬಿ."
ಹೊರಟ ಅವರನ್ನು ಅನುಸರಿಸುತ್ತ, "ನಾನೂ ಬಂದೇ," ಎಂದಳು ಸುಭದ್ರೆ.
ಮೋಡಗಳು ಮತ್ತಷ್ಟು ದಟ್ಟೈಸಿದುವು. ದನಕರುಗಳೂ ಹೋರಿಗಳೂ ಬಾಲ ನೆಟ್ಟಗೆ
ಮಾಡಿಕೊಂಡು ಕೊಟ್ಟಿಗೆಗೆ ಓಡಿಬಂದುವು.
"ಬಂದಿರಾ, ಬನ್ನಿ...." ಎಂದರು ನಾಗಮ್ಮ.
ದಿಬ್ಬದ ತಪ್ಪಲಲ್ಲಿ ಹುಲ್ಲಿನ ಒಣಕಡ್ಡಿಗಳನ್ನು ಆರಿಸಿ ತಿಂದು ಬೇಸತ್ತಿದ್ದ ಬಡಪಾಯಿಗಳು.
ಇನ್ನು ಕೆಲವೇ ದಿನಗಳಲ್ಲಿ ಸುತುಮುತ್ತೆಲ್ಲ ಹೇರಳ ಹಸಿರು. ಮುಂದಿನ ಆ ದಿನಗಳನ್ನು
ನೆನೆಸಿಕೊಂಡು ಸಂತುಷ್ಟರಾಗಿ ನಾಗಮ್ಮ ದನಕರುಗಳ ಮೈದಡವಿದರು.
ಸುಭದ್ರೆ ತನ್ನ ಪ್ರೀತಿಯ ಹಸುವಿನ ಕತ್ತು ತುರಿಸಿದಳು.
ದನಕರುಗಳನ್ನು ಮೇಯಿಸಲು ಒಯ್ದಿದ್ದ ಮಾದನ ಹಿರಿಯ ಮಗ ಅವುಗಳನ್ನು
ಕೊಟ್ಟಿಗೆಯಲ್ಲಿ ಕಟ್ಟಲು ನೆರವಾದ.
... ಸಂಜೆ ನದಿಯ ಕಡೆಗೆ ರಂಗಣ್ಣ ತಿರುಗಾಡುತ್ತ ಹೋಗಿದ್ದ. ಇನ್ನೂ ಹದಿನೈದು
ಇಪ್ಪತು ದಿನ ಹಳ್ಳಿಯಲ್ಲಿರಬೇಕು. ಹೊತ್ತು ಕಳೆಯುವುದು ಕಷ್ಟವಾಗಿತ್ತು. ಅವ
ನೆಂದುಕೊಂಡ: ಇದಕ್ಕೇ ಇರಬೇಕು, ಪದ್ಮನಂಥವರು ಕಥೆ ಪುಸ್ತಕ ಓದುವ ಅಭಾಸವಿಟ್ಟಿರು
ವುದು.
ಕಾಲೇಜಿನಲ್ಲಿ ಅವನ ಸಹಪಾಠಿಯೊಬ್ಬ–ವಸತಿಗೃಹದ ಒಡನಾಡಿ–ಬಹಳ ಓದು
ವಾತ. ಇಂಗ್ಲಿಷ್ ಭಾಷೆಯ ಅಗ್ಗದ ಕಾದಂಬರಿಗಳೆಂದರೆ ಅವನಿಗೆ ಇಷ್ಟ. ಹಳೆಯ ಪುಸ್ತಕ
ಗಳ ಅಂಗಡಿಯಿಂದಲೋ ದಿನಕ್ಕೆ ಪುಸ್ತಕಕ್ಕೆ ಹತ್ತು ಪೈಸೆ ಬಾಡಿಗೆ ಪಡೆಯುವ ಎರವಲು
ಭಂಡಾರಗಳಿಂದಲೋ ಪುಸ್ತಕಗಳನ್ನು ತರುತ್ತಿದ್ದ.
ಅವನು ಆಗಾಗ್ಗೆ ಹೇಳುವುದಿತ್ತು:
"ಇಂಥ ಪುಸ್ತಕಗಳನ್ನ ಓದೋದರಿಂದ್ಲೇ ಕಣಮ್ಮ ಲೈಫ್ ಗೊತ್ತಾಗೋದು."
ಬೇಸಗೆಯ ರಜಾದಲ್ಲಿ ಒಂದು ತನ್ನೊಡನಿರಲಿ ಎಂದು, ಆ ಗೆಳೆಯನನ್ನು ಕೇಳಿ ಆತನ