ಪುಟ:ಪರಂತಪ ವಿಜಯ ೨.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಪರಂತಪ ವಿಜಯ



ಅವಳ ಪ್ರಸನ್ನತೆ ನಂಬತಕ್ಕುದಲ್ಲ. ಈ ದಿವಸವೆನಾದರೂ ಆ ದುಷ್ಟನೇ ಗೆದ್ದ ಪಕ್ಷದಲ್ಲಿ, ನೀನು ಬಹು ಶೋಚನಿಯವಾದ ಅವಸ್ಥೆಗೆ ಗುರಿಯಾಗುವೆ. ಆದುದರಿಂದ, ನೀನು ಮಾಡಿಕೊಂಡಿರುವ ಶಪಥವನ್ನು ಸರ್ವಥಾ ಬಿಟ್ಟು ಬಿಡುವುದೇ ಒಳ್ಳೆಯದು. ಇದಲ್ಲದೆ, ನಾನು ಇವನ ಸಿಗ್ರಹಾರ್ಥವಾಗಿಯೇ ಇಲ್ಲಿಗೆ ಬಂದಿರುವೆನಾದುದರಿಂದ, ಈ ಕಾಲದಲ್ಲಿ ನೀನು ಇವನೊಡನೆ ದ್ಯೂತವಾಡಿ ಸರ್ವಸ್ವವನ್ನೂ ಕಳೆದುಕೊಂಡು ನಿರ್ಗತಿಕನಾಗಬೇಡ.

ಮಾಧವ-ಈ ದ್ಯೂತದಲ್ಲಿ ಸೋಲುವೆನೆಂಬ ಭಯವು ಲೇಶವಾದರೂ ನನಗಿಲ್ಲ. ನಾನು ಧರ್ಮದ್ಯೂತವಿಶಾರದನೆಂಬ ಬಿರುದನ್ನು ಪಡೆದವನು. ಆದರೆ, ನಾನು ಹಿಂದಿನ ಆಟದಲ್ಲಿ ಸ್ವಲ್ಪ ಔದಾಸೀನ್ಯದಿಂದ ಸೋತೆನೇ ಹೊರತು, ಅಜ್ಞತೆಯಿಂದ ಸೋತವನಲ್ಲ. ಈ ರಾತ್ರಿಯೆನೋ ನಾನು ಗೆಲ್ಲುವುದೇ ದಿಟ. ಅಥವಾ ಒಂದುವೇಳೆ ಸೋತು ನಿರ್ಗತಿಕನಾದರೂ, ಅದೂ ನನಗೆ ಅಭಿಮತವೇಸರಿ. ಏಕೆಂದರೆ, -ಇನ್ನು ಮುಂದೆ ಜೀವಿಸಬೇಕೆಂಬ ಕುತೂಹಲವು ನನಗೆ ಸ್ವಲ್ಪವೂ ಇಲ್ಲ. ಈ ಕ್ಷಣವೇ ಅತ್ಮಹತ್ಯೆ ಮಾಡಿಕೊಂಡು ಪ್ರಾಣವನ್ನು ಕಳೆದುಕೊಳ್ಳುವುದರಲ್ಲಿ ಸಿದ್ಧನಾಗಿರುವೆನು. ನನಗೆ ದುಸ್ಸಹವಾದ ಒಂದು ಕ್ಲೇಶವುಂಟಾಗಿದೆ. ಇದು ಯಾವಾಗ ತಪ್ಪುವುದೋ ಎಂದು ಪರಿತಪಿಸುತಿರುವ ನನಗೆ, ನನ್ನ ಮನಸ್ಸಿನಲ್ಲಿರುವ ಕ್ಲೇಶದ ನಿವಾರಣೆಗೆ ಮರಣವಿನಾ ಇನ್ಯಾವ ಉಪಾಯವೂ ತೋರದಿರುವುದರಿಂದ, ಆ ಮರಣವನ್ನೇ ಎದುರು ನೋಡುತ್ತಿರುವೆನು.

ಪರಂತಪ-ನಿನ್ನ ಈ ಶಪಥವು ನನಗೆ ಬಹಳ ಸಂಕಟಕರವಾಗಿರುವುದು. ನಿನಗೆ ಪ್ರಾಣದಲ್ಲಿಯೂ ಜುಗುಪ್ಸೆಯುಂಟಾಗುವಷ್ಟು ಕ್ಲೇಶವೆನೋ ಗೊತ್ತಾಗಲಿಲ್ಲ. ಏನು ಹೋದರೂ ಹೋಗಲಿ, "ಜೀವನ್ ಭದ್ರಾಣಿ ಪಶ್ಯತಿ" ಎಂಬಂತೆ ಪ್ರಾಣರಕ್ಷಣೆಯನ್ನು ಮಾಡಿಕೊಂಡಿದ್ದರೆ, ಕಾಲಾನು ಕಾಲದಲ್ಲಿ ಇಹಪರಗಳಲ್ಲಿ ಸಕಲವಾದ ಇಷ್ಟಾರ್ಥಗಳನ್ನೂ ಪಡೆಯಬಹುದೆಂದು ಹಿರಿಯರು ಹೇಳಿರುವರು. ಇದು ನಿನಗೆ ತಿಳಿಯದ ಅಂಶವಲ್ಲ. ನಿನಗೆ ಮರಣವನ್ನು ಎದುರುನೋಡುವಷ್ಟು ದುಃಖಾತಿಶಯವೇನು? ಹೇಳು. ಸಾಧ್ಯ ವಾದರೆ ಅದಕ್ಕೆ ತಕ್ಕ ಪ್ರತೀಕಾರವನ್ನು ಪರ್ಯಾಲೋಚಿಸೋಣ.