ಪುಟ:ಪರಂತಪ ವಿಜಯ ೨.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಅಧ್ಯಾಯ ೧



ಮಾಧವ- ನನ್ನ ದುಃಖವು ಅತಿದುಸ್ಸಹವಾದುದು ಆದರೂ, ನೀನು ಸ್ವಕೀಯನಾದುದರಿಂದ, ನಿನ್ನೊಡನೆ ಹೇಳುವೆನು,ಕೇಳು. ನನ್ನ ಹಿರಿಯಣ್ಣನು, ಕಾಮಮೋಹಿಸಿಯೆಂಬ ಒಬ್ಬ ಅನಾಥೆಯಾದ ಹುಡುಗಿಯನ್ನು ತಂದು ಸಾಕುತಿರುವನು. ಇವಳು, ತನ್ನ ರೂಪ ಲಾವಣ್ಯ ಸಂಪತ್ತುಗಳಿಂದ ರತಿಯನ್ನೂ ಜರಿಯುವಂತೆ ತೋರುವಳು. ಇವಳ ಬುದ್ಧಿ ಚಾತುರ್ಯವನ್ನು ನೋಡಿದರೆ, ಸರಸ್ವತಿಯೇ ಈ ರೂಪದಿಂದ ಅವತರಿಸಿರುವಳೆಂಬ ಭಾವವು ನೆಲೆಗೊಳ್ಳುವುದು. ಬ್ರಹ್ಮನು ತನ್ನ ಕೌಶಲ್ಯವನ್ನೆಲ್ಲ ವ್ಯಯಮಾಡಿ ಈ ಸ್ತ್ರೀರತ್ನವನ್ನು ಸೃಷ್ಟಿಸಿರುವನೇ ಹೊರತು ಮತ್ತೆ ಬೇರೆಯಿಲ್ಲ. ನನ್ನಣ್ಣನು ಪೋಷಣಾರ್ಥವಾಗಿ ಇವಳನ್ನು ತಂದಾರಭ್ಯ, ನನ್ನ ಅನುರಾಗವು ಇವಳಲ್ಲಿಯೇ ನೆಲೆಗೊಂಡಿತು. ದೈವಗತಿಯಿಂದ ಇವಳಿಗೂ ನನ್ನಲ್ಲಿ ಅನುರಾಗವಂಕುರಿಸುತಿದ್ದಿತು. ಆದರೆ, ನಮ್ಮಿಬ್ಬರ ಪರಸ್ಪರಾನುರಾಗವು ಸಫಲವಾಗುವುದಕ್ಕೆ ಮುಂಚೆಯೇ, ನನ್ನ ಹಿರಿಯಣ್ಣನ ಮಗನಾದ ಶಂಬರನು ದುರ್ಭೋಧನೆ ಮಾಡಿ, ಇವಳಿಗೆ ನನ್ನಲ್ಲುಂಟಾಗಿದ್ದ ಅನುರಾಗವನ್ನು ನಿರ್ಮೂಲ ಮಾಡಿದನು. ಹಸ್ತಗತಳಾಗಿದ್ದ ಈ ಸ್ತ್ರೀಯು, ನನ್ನಲ್ಲಿ ಪರಾಙ್ಮುಖಳಾದಳು. ಇವಳಿಗೆ ನನ್ನಲ್ಲಿ ಅನುರಾಗವು ಕಡಮೆಯಾದಷ್ಟೂ, ನನಗೆ ಐಶ್ವರ್ಯದಲ್ಲಿಯೂ ಪ್ರಾಣದಲ್ಲಿಯೂ ಜುಗುಪ್ಸೆ ಹೆಚ್ಚಾಗುತ ಬಂದಿತು. ಇದಲ್ಲದೆ, ನನಗೆ ಮುಖ್ಯವಾದ ಮತ್ತೊಂದು ಸಂಕಲ್ಪವಿರುವುದು. ಏನೆಂದರೆ :-ಒಂದುವೇಳೆ ನಾನು ಸತ್ತರೂ, ನನ್ನ ಅಪರಿಮಿತವಾದ ಧನವೆಲ್ಲವೂ ನನ್ನ ಮನೋರಥಭಂಗವನ್ನು ಮಾಡಿದ ಆ ನೀಚನಾದ ಶಂಬರನಿಗೆ ಸೇರುವುದು. ನಮ್ಮ ಹಿರಿಯಣ್ಣನಾದ ಸುಮಿತ್ರನಿಗೂ ಬೇಕಾದಷ್ಟು ಧನವಿರುವುದು. ಆದರೆ, ಅವನಿಗೆ ಸಂತಾನವಿಲ್ಲದ ಕಾರಣ, ನನ್ನ ದ್ರವ್ಯದ ಮೇಲೆ ಅವನಿಗೆ ಆಸೆಯಿಲ್ಲ. ಆದುದರಿಂದ, ಈ ನನ್ನ ಐಶ್ವರ್ಯವನ್ನೆಲ್ಲ ತನ್ನ ಸ್ವಾಧೀನಪಡಿಸಿಕೊಳ್ಳಬೇಕೆಂದು, ಶಂಬರನು ಬಹು ಸಾಹಸಮಾಡುತಿರುವನು. ಅದುಕಾರಣ, ನನ್ನ ಆಸ್ತಿಯಲ್ಲಿ ಲೇಶಮಾತ್ರವಾದರೂ, ಆ ದುರಾತ್ಮನಿಗೆ ಸೇರದಂತೆ ಮಾಡುವುದೇ ನನ್ನ ಮುಖ್ಯೋದ್ದೇಶವಾಗಿರುವುದು. ಇದಲ್ಲದೆ, ನನಗೆ ಸೇರಿದ ರತ್ನಾಕರವೆಂಬ ದೇಶದಲ್ಲಿ ಚಿನ್ನದ ಗಣಿಗಳೂ ರತ್ನದ ಗಣಿಗಳೂ ಅನೇಕವಾಗಿದ್ದರೂ, ನನಗೆ ದ್ರವ್ಯಸಂಪಾದನೆ