ವಿಷಯಕ್ಕೆ ಹೋಗು

ಪುಟ:ಪರಂತಪ ವಿಜಯ ೨.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಧ್ಯಾಯ ೫
೪೭

ಸುಮಿತ್ರ - ಅಯ್ಯ! ಪರಂತಪನೆ! ನಿನ್ನನ್ನು ಪುತ್ರನಿರ್ವಿಶೇಷವಾಗಿ ನಾನು ನೋಡುತ್ತಿದ್ದೆನು. ನೀನೇ ಮಾಧವನೆಂಬುದಾಗಿ ತಿಳಿದುಕೊಂಡು, ನಿನ್ನಲ್ಲಿ ಭ್ರಾತೃವಾತ್ಸಲ್ಯವನ್ನು ಇಟ್ಟಿರುವೆನು. ನನ್ನ ವಿಷಯದಲ್ಲಿಯೂ ನೀನು ಸೌಹಾರ್ದವುಳ್ಳವನಾಗಿರಬೇಕಾದುದು ಅವಶ್ಯಕವಲ್ಲವೆ ?

ಪರಂತಪ - ಇದೇನು ಹೀಗೆ ಹೇಳುವೆ? ಈಗ ನಿನ್ನ ಭಾವನೆ ಹೇಗಾದರೂ ಇರಲಿ; ನನಗೆ ನಿನ್ನ ಪಿತೃಭಕ್ತಿಯು ಅಕೃತ್ರಿಮವಾಗಿರುವುದು. ಈ ರೀತಿಯಲ್ಲಿ ನೀನು ಮಾತನಾಡುವುದು ನನಗೆ ಬಹಳ ವ್ಯಥೆಯನ್ನುಂಟು ಮಾಡುತ್ತದೆ.

ಸುಮಿತ್ರ - ನನ್ನಲ್ಲಿ ನಿನಗಿರತಕ್ಕ ವಿಶ್ವಾಸವು ಅಕೃತ್ರಿಮವಾಗಿದ್ದರೆ, ಈಗ ಕಾಮಮೋಹಿನಿ ಯೆಲ್ಲಿರುವಳು?-ಹೇಳು.

ಪರಂತಪ - ಅವಳಿಗೆ ಆಪ್ತರಾದವರ ಬಳಿಯಲ್ಲಿರುವಳು.

ಸುಮಿತ್ರ - ಅವಳನ್ನು ಚಿಕ್ಕಂದಿನಿಂದ ಸಾಕಿ ಸಲುಹಿ ಚಿಕ್ಕವಳನ್ನು ದೊಡ್ಡವಳನ್ನಾಗಿ ಮಾಡಿದ ನನಗಿಂತಲೂ ಆಪ್ತರು ಯಾರಿರುವರು ?

ಪರಂತಪ - ಇದಕ್ಕೆ ಉತ್ತರವನ್ನು ಅವಳೇ ಕೊಡಬೇಕು.

ಸುಮಿತ್ರ - (ಹುಬ್ಬುಗಳನ್ನು ಗಂಟುಹಾಕಿಕೊಂಡು, ಕಣ್ಣುಗಳಲ್ಲಿ ಕಿಡಿಗಳನ್ನು ಉದರಿಸುತ್ತ ಸರ್ವಾವಯವಗಳನ್ನೂ ನಡಗಿಸುತ) ಏನೆಂದೆ? ಈ ಪ್ರಶ್ನೆಗೆ ಅವಳೇ ಉತ್ತರಕೊಡಬೇಕೆ? ಅವಳಿಗೆ ದುರ್ಬೋಧನೆಯನ್ನು ಮಾಡಿ ಇಲ್ಲಿಂದ ರವಾನಿಸಿದ ನಿನಗೆ ಈ ಪ್ರಶ್ನೆಗೆ ಉತ್ತರ ಕೊಡುವುದು ಅಸಾಧ್ಯವೋ ? ಅವಳಿರುವ ಸ್ಥಳವನ್ನು ನೀನು ಬಲ್ಲೆ. ಕೂಡಲೇ ಅವಳನ್ನು ತೋರಿಸಿದರೆ ಸರಿ ; ಇಲ್ಲದಿದ್ದರೆ ನಿನ್ನ ದೌರಾತ್ಮ್ಯಕ್ಕೆ ತಕ್ಕ ಫಲವನ್ನು ಈಗಲೇ ಅನುಭವಿಸುವೆ.

ಪರಂತಪ - ಅವಳು ಇರತಕ್ಕೆ ಸ್ಥಳವನ್ನು ನಾನು ಬಲ್ಲೆನು. ಆದರೂ ಅದನ್ನು ನಾನು ತೋರಿಸುವುದಿಲ್ಲ. ನಿನ್ನ ಮನೆಗೆ ಬಂದಾರಭ್ಯ, ನಾನು ದೊಡ್ಡ ಮನಷ್ಯನಂತೆ ಇದ್ದೆನೇ ಹೊರತು, ದುರಾತ್ಮನಂತೆ ಎಂದಿಗೂ ನಡೆದು ಕೊಳ್ಳಲಿಲ್ಲ ; ದೌರಾತ್ಮ್ಯದ ಫಲವನ್ನು ನಾನು ಅನುಭವಿಸತಕ್ಕವನೂ ಅಲ್ಲ.

ಸುಮಿತ್ರ - ನೀನು ದುರಾತ್ಮನು ಮಾತ್ರವೇ ಅಲ್ಲ; ಕೃತಘ್ನುನು ಕೂಡ ಅಹುದು. ನೀನು ನನ್ನ ಮನೆಗೆ ಬಂದು, ನನ್ನಿಂದ ಸತ್ಕೃತನಾಗಿ,