ವಿಷಯಕ್ಕೆ ಹೋಗು

ಪುಟ:ಪರಂತಪ ವಿಜಯ ೨.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಧ್ಯಾಯ ೬
೫೧

ಳನ್ನು ಸೂಕ್ಷ್ಮವಾಗಿ ತಿಳಿಯಿಸಿದನು. ಎಲ್ಲರೂ ಅತ್ಯಂತ ವಿಸ್ಮಿತರಾಗಿ "ಅನನುರೂಪವಾದ ಘಟನವನ್ನು ಮಾಡಿಸಬೇಕೆಂದು ಮನುಷ್ಯನು ಯೋಚಿಸಿದರೆ, ದೈವವು ಈ ರೀತಿ ವಿಘ್ನು ಮಾಡುವುದು ಕೂಡ ಉಂಟೆಂಬುದು ಈಗ ವ್ಯಕ್ತವಾಯಿತು.” ಎಂದು ಹೇಳಿಕೊಂಡು ಹೊರಟುಹೋದರು.


ಅಧ್ಯಾಯ ೬.



  ಪರಂತಪನು ಕಲ್ಪತರುವೆಂಬ ಹೋಟಲಿಗೆ ಹೋಗಿ, ಅಲ್ಲಿನ ಯಜಮಾನನನ್ನು ಕರೆದು, ಅದರಲ್ಲಿ ತನಗೆ ಅನುಕೂಲವಾದ ಕೊಟಡಿಗಳಿಗೆ ಬಾಡಿಗೆಯನ್ನು ನಿಷ್ಕರ್ಷೆ ಮಾಡಿ, ಅಲ್ಲಿ ತನ್ನ ಸಾಮಾನುಗಳನ್ನು ಇಟ್ಟು ಬೀಗಗಳನ್ನು ಹಾಕಿಕೊಂಡು, ಆರ್ಯಕೀರ್ತಿಯ ಮನೆಯನ್ನು ಕುರಿತು ಹೊರಟನು. ಅಲ್ಲಿಗೆ ಹೋಗಿ ಬಾಗಿಲನ್ನು ತಟ್ಟಿದ ಕೂಡಲೆ, ಒಬ್ಬ ಹೆಂಗಸು ಬಂದು ಬಾಗಿಲನ್ನು ತೆಗೆದಳು. ಕಾಮಮೋಹಿನಿಯ ವೃತ್ತಾಂತವನ್ನು ವಿಚಾರಿಸಿದ ಕೂಡಲೆ, ಅವಳು ಇವನನ್ನು ಒಳಕ್ಕೆ ಕರೆದುಕೊಂಡು ಹೋದಳು. ಅಲ್ಲಿ ಆರ್ಯಕೀರ್ತಿಯೂ ಅವಳ ತಂದೆತಾಯಿಗಳೂ ಕಾಮಮೋಹಿನಿಯೂ ಮಾತನಾಡುತಿದ್ದರು. ಪರಂತಪನನ್ನು ನೋಡಿದಕೂಡಲೆ, ಕಾಮಮೋಹಿನಿಯು ಧಡಿಲ್ಲನೆ ಎದ್ದು, ಆತನಿಗೆ ವಂದನೆಯನ್ನು ಮಾಡಿ, ಆತನನ್ನು ಕರೆದುಕೊಂಡು ಹೋಗಿ, ತನ್ನ ಸ್ನೇಹಿತಳಿಗೂ ಆಕೆಯ ತಾಯಿತಂದೆಗಳಾದ ಸತ್ಯವತೀ ಸತ್ಯಶರ್ಮರುಗಳಿಗೂ ಭೇಟಿಮಾಡಿಸಿದಳು.

ಸತ್ಯಶರ್ಮ- ಅಯ್ಯಾ! ಪರಂತಪ! ಕಾಮಮೋನಿಯು ನನ್ನ ಮಗಳಿಗೆ ಪರಮಾಪ್ತಳು. ಆದುದರಿಂದಲೇ, ಈಕೆಯು ನನಗೆ ಮಗಳ ಸಮಾನಳು. ಈಕೆಯು, ತನ್ನ ಸಾಕುತಂದೆಯಿಂದ ಗೊತ್ತುಮಾಡಲ್ಪಟ್ಟ ದುರಾತ್ಮನಾದ ಶಂಬರನನ್ನು ಮದುವೆಮಾಡಿಕೊಳ್ಳುವುದಿಲ್ಲವೆಂದು ದೃಢಸಂಕಲ್ಪ ಮಾಡಿ, ಸುಮಿತ್ರನ ಪೋಷಣೆಯನ್ನು ಪರಿತ್ಯಜಿಸಿ ಇಲ್ಲಿಗೆ ಬಂದು ಇದ್ದಾಳೆ. ಈಕೆ ಮಾಡುತ್ತಿದ್ದ ನಿನ್ನ ಗುಣಕಥನಗಳನ್ನು ಕೇಳಿ ಸಂತುಷ್ಟರಾಗುತ್ತಿದ್ದೆವು.