ವಿಷಯಕ್ಕೆ ಹೋಗು

ಪುಟ:ಪರಂತಪ ವಿಜಯ ೨.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಧ್ಯಾಯ ೭
೬೧

ಅಥವಾ, ಈ ಪ್ರಯತ್ನದಲ್ಲಿಯೇ ಪ್ರಾಣವನ್ನಾದರೂ ಬಿಡುವೆನು. ' ಎಂದು ಹೇಳಿದನು.
ಸುಮಿತ್ರ- ಅಯ್ಯಾ! ಪುತ್ರನೇ! ದುಡುಕಬೇಡ; ದುಡುಕಬೇಡ. ಮಾಧವನ ಆಸ್ತಿಯೂ ಹೋಗಲಿ; ಕಾಮಮೋಹಿನಿಯೂ ಹೋಗಲಿ. ನನಗೆ ಗಂಡುಮಕ್ಕಳಿಲ್ಲ. ನನ್ನ ಸ್ವತ್ತಿಗೆಲ್ಲ ನೀನೇ ಬಾಧ್ಯನಾಗಿರು. ನನ್ನ ಸೋದರ ಸೊಸೆಯಾದ ಕಲಾವತಿಗೆ ನಿನ್ನಲ್ಲಿ ಅನುರಾಗವುಂಟಾಗುವಂತೆ ಮಾಡಿರುತ್ತೇನೆ. ನನ್ನ ಆಸ್ತಿಯನ್ನೆಲ್ಲ ಅವಳ ಹೆಸರಿಗೆ ಉಯಿಲು ಬರೆದಿರುತ್ತೇನೆ. ಅವಳನ್ನು ಪರಿಗ್ರಹಿಸಿ, ನನ್ನ ಆಸ್ತಿಯನ್ನೆಲ್ಲ ಅನುಭವಿಸಿ ಕೊಂಡು ಸುಖವಾಗಿ ಬಾಳು. ಪ್ರಬಲರಲ್ಲಿ ವಿರೋಧವನ್ನು ಬೆಳಸಬೇಡ.
ಶಂಬರ- ನನ್ನ ಭಾಗಕ್ಕೆ, ನನ್ನ ತಂದೆಯ ಸಹೋದರರಾದ ನೀವಿಬ್ಬರೂ ಮಿತ್ರರಾಗಿ ಪರಿಣಮಿಸಲಿಲ್ಲ. ಮಾಧವನು, ತನ್ನ ಅಸ್ತಿಯನ್ನೆಲ್ಲ ಅಜ್ಞಾತ ಕುಲಗೋತ್ರನಾದ ಪರಂತಪನಿಗೆ ಒಪ್ಪಿಸಿದನು. ನೀನು ನಿನ್ನ ಆಸ್ತಿಯನ್ನೆಲ್ಲ ಕಲಾವತಿಗೆ ಕೊಟ್ಟೆ. ನನ್ನ ತಂದೆಯಾದರೂ, ನನಗೆ ಅನ್ನವಸ್ತ್ರಗಳಿಗೂ ಗತಿಯಿಲ್ಲದಂತೆ, ತನ್ನ ಸರ್ವಸ್ವವನ್ನೂ ದ್ಯೂತ ವ್ಯಭಿಚಾರಗಳಲ್ಲಿ ಕಳೆದು, ಅಕಾಲ ಮರಣವನ್ನು ಹೊಂದಿ, ನನ್ನ ಭಾಗಕ್ಕೆ ಶತ್ರುವಾಗಿ ಪರಿಣಮಿಸಿದನು. ನಿನ್ನ ವಂಶದಲ್ಲಿ ಹುಟ್ಟಿದ ನನಗೆ ಈರೀತಿ ನಿರ್ಗತಿಯಾಯಿತು. ಕಲಾವತಿಯಲ್ಲಿ ನನಗೆ ಅನುರಾಗವಿಲ್ಲ. ನಿನ್ನ ಆಸ್ತಿಯೂ ನನಗೆ ಅವಶ್ಯಕವಿಲ್ಲ. ನನ್ನ ಮನಸ್ಸಿಗೆ ತೋರಿದಂತೆ ನಾನು ನಡೆದುಕೊಳ್ಳುವೆನು.
ಸುಮಿತ್ರ- ಎಲೈ ಶಂಬರನೆ! ದುಡುಕಬೇಡ; ದುಡುಕಬೇಡ. ನಿಧಾನಿಸು. ಮಾಧವನು ಮಾಡಿದ ಕೆಲಸವು ಪೂರಯಿಸಿಹೋಯಿತು. ಅವನ ಆಸ್ತಿಯು ಪುನಃ ನಿನಗೆ ಸೇರಲಾರದು. ಆದರೆ, ನಾನು ನನ್ನ ಆಸ್ತಿ ನನ್ನ ಜೀವನಾನಂತರ ಕಲಾವತಿಗೆ ಸೇರತಕ್ಕುದೆಂದು ಉಯಿಲು ಬರೆದಿರುತ್ತೇನೆ. ಈ ಸಂಗತಿ ಅವಳಿಗೆ ಚೆನ್ನಾಗಿ ತಿಳಿಯದು. ಅವಳನ್ನು ನೀನು ಮದುವೆ ಮಾಡಿಕೊಂಡಪಕ್ಷದಲ್ಲಿ, ಈ ವುಯಿಲನ್ನು ರದ್ದು ಮಾಡಿ, ನಿನ್ನನ್ನೇ ನನ್ನ ಆಸ್ತಿಗೆಲ್ಲ ಬಾಧ್ಯನನ್ನಾಗಿ ಮಾಡುತ್ತೇನೆ. ಚಿಂತಿಸಬೇಡ; ಚೆನ್ನಾಗಿ ಪರ್ಯಾಲೋಚಿಸು.