ವಿಷಯಕ್ಕೆ ಹೋಗು

ಪುಟ:ಪರಂತಪ ವಿಜಯ ೨.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೭೨
ಪರಂತಪ ವಿಜಯ

ಕಲಾವತಿ- ಅದನ್ನು ತಿಳಿದುಕೊಳ್ಳಬೇಕೆಂಬ ಅಭಿಪ್ರಾಯವು ನನಗಿಲ್ಲ. ಅನುರೂಪನಾದ ಪತಿಯನ್ನು ಸೇರಿ ಅವಳು ಇಲ್ಲಿಂದ ಹೊರಟು ಹೋಗಿ ಸುಖವಾಗಿ ಬಾಳಲಿ ಎಂಬುದೇ ನನ್ನ ಮುಖ್ಯಾಶಯವು.


ಪರಂತಪ- ಹೀಗೆ ನೀನು ಬಯಸುವುದಕ್ಕೆ ಕಾರಣವೇನು?


ಕಲಾವತಿ- ಬೇರೆ ಯಾವ ಕಾರಣವೇಕೆ? ಅವಳಿಗೆ ಶಂಬರನಲ್ಲಿ ಸ್ವಲ್ಪವೂ ಅನುರಾಗವಿಲ್ಲ; ಅವಳ ತಂದೆಯು ಅವಳನ್ನು ಶಂಬರನಿಗೇ ಕೊಟ್ಟು ವಿವಾಹ ಮಾಡಬೇಕೆಂದಿದ್ದಾನೆ. ಅದು ಅವಳಿಗೆ ಸರ್ವಾತ್ಮನಾ

ಇಷ್ಟವಿಲ್ಲ.

ಪರಂತಪ- ಹಾಗಾದರೆ, ನಿನಗೆ ಶಂಬರನನ್ನು ವರಿಸುವುದರಲ್ಲಿ ಇಷ್ಟ ವುಂಟೋ?

ಕಲಾವತಿ- ನನಗೇನೋ ಇಷ್ಟವುಂಟು. ನಮ್ಮ ಮಾವನೂ ಅವನನ್ನು ಬಹಳವಾಗಿ ಶ್ಲಾಘಿಸಿರುವನು.

ಪರಂತಪ- ಹಾಗಾದರೆ ನಿಶ್ಚಿಂತಳಾಗಿರು. ಕಾಮಮೋಹಿನಿಯು ಶಂಬರನನ್ನು ಎಂದಿಗೂ ಒಪ್ಪತಕ್ಕವಳಲ್ಲ. ನೀನು ಸರ್ವಪ್ರಯತ್ನದಿಂದಲೂ ಅವನಿಗೆ ಅನುರಾಗವುಂಟಾಗುವಂತೆ ಮಾಡಿಕೋ. ಕಾಮಮೋಹಿನಿಯು ಎಂದಿಗೂ ನಿನ್ನ ಪ್ರಯತ್ನವನ್ನು ಮುರಿಯತಕ್ಕವಳಲ್ಲ; ಇನ್ನೂ ಬೇಕಾದ ಸಹಾಯವನ್ನು ಮಾಡಿಕೊಡುವಳು.

ಕಲಾವತಿ - ಹಾಗಿದ್ದರೆ, ಆ ವಿಷಯದಲ್ಲಿ ನಾನು ಪ್ರಯತ್ನಿಸುವೆನು. ನಿಮ್ಮಿಬ್ಬರ ಸಹಾಯದಿಂದಲೇ ಈ ಕೆಲಸವು ನಡೆಯಬೇಕಾಗಿರುವುದು. ನೀನೇ ಕಾಮಮೋಹಿನಿಗೆ ಅನುರೂಪನಾದ ವರನು. ನಿಮ್ಮ ವಿವಾಹಕ್ಕೆ ತಕ್ಕ ಸಹಾಯವನ್ನು ಕೈಲಾದಮಟ್ಟಿಗೂ ನಾನು ಮಾಡುವೆನು, ನನ್ನ ಮಾವನಾದರೋ ಬೆಳಗ್ಗೆ ಏಳು ಘಂಟೆಯ ಮೇಲೆ ಏಳುವನು. ನಾನು ಐದು ಘಂಟೆಗೆ ಮೊದಲೇ ನಿತ್ಯವೂ ಎದ್ದು ವ್ಯಾಯಾಮವ್ಯಾಜದಿಂದ ಇಲ್ಲಿಗೆ ಬರುವೆನು. ಈ ಯೆರಡು ವಿವಾಹಗಳು ನಡೆಯುವವರೆಗೂ, ನನ್ನಿಂದಾಗ ಬೇಕಾದ ಸಹಾಯ ಯಾವುದಿದ್ದರೂ ನಡೆಸಿಕೊಡುವೆನು. ನಿತ್ಯವೂ ಈ ಹೊತ್ತಿಗೆ ಸರಿಯಾಗಿ ನೀನು ಬಂದರೆ ಇಲ್ಲಿ ಸಿಕ್ಕುವೆನು.

ಪರಂತಪ-ನೀನು ನಮ್ಮಲ್ಲಿಟ್ಟಿರುವ ಪ್ರೀತಿಗಾಗಿ ನಾವು ಬಹಳ ಕೃತಜ್ಞರಾಗಿರುತ್ತೇವೆ. ಆದರೆ, ನಿನ್ನ ನಿಸರ್ಗವಾದ ಈ ಪ್ರೀತಿಯೇ ನಮ್ಮ