ಪುಟ:ಪರಂತಪ ವಿಜಯ ೨.djvu/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಧ್ಯಾಯ ೯

೮೩


ಖರ್ಚಾಗಿರಬಹುದೆಂದು ಅತ್ಯಾಶ್ಚರ್ಯಪಡುತ್ತ, ಎಲ್ಲಾ ಕಟ್ಟಡಗಳನ್ನೂ ಒಂದೊಂದಾಗಿ ಪರೀಕ್ಷಿಸುತ್ತಿದ್ದರು. ಇದೆಲ್ಲವೂ ಪೂರಯಿಸುವುದರೊಳಗಾಗಿ, ರಾತ್ರಿ ಹನ್ನೆರಡು ಗಂಟೆಯ ಹೊತ್ತಾಯಿತು.
ಪರಂತಪ- ಅಯ್ಯಾ! ಅರ್ಥಪರನೆ! ಈ ಕಟ್ಟಡವನ್ನು ಹತ್ತಿ ಇಳಿದು ಬಹಳ ಆಯಾಸವಾಗಿರುವುದು. ಇಲ್ಲೆಲ್ಲಾದರೂ ಸ್ವಲ್ಪ ವಿಶ್ರಮಿಸಿಕೊಳ್ಳೋಣವೇ?
ಅರ್ಥಪರ- ಚೆನ್ನಾಯಿತು! ಚೆನ್ನಾಯಿತು!! ಈ ಪ್ರದೇಶವು ಭೂತ ಪ್ರೇತ ಪಿಶಾಚಾದಿಗಳಿಗೆ ಮುಖ್ಯಾಶ್ರಯವಾದುದು. ಈ ಮಧ್ಯರಾತ್ರಿಯಲ್ಲಿ - ಪಿಶಾಚಗಳು ಸಂಚರಿಸುವ ವೇಳೆಯಲ್ಲಿ - ಇಲ್ಲಿರತಕ್ಕುದು ಸರ್ವಥಾ ತರವಲ್ಲ. ಇದಕ್ಕಿಂತ, ಕಾಡಿನಲ್ಲಾದರೂ ಮಲಗಬಹುದು.
ಪರಂತಪ - ಇದೇನು - ವಿದ್ಯಾವಂತನಾಗಿಯೂ ಲೋಕ ವ್ಯವಹಾರಜ್ಞನಾಗಿಯೂ ಇರುವ ನೀನೇ ಈ ರೀತಿಯಲ್ಲಿ ಹೆದರುವೆ? ಯುಕ್ತಾಯುಕ್ತ ವಿವೇಕವಿಲ್ಲದ ಎಳೆಯ ಮಕ್ಕಳ ರೀತಿಯಲ್ಲಿ, ವಿವೇಕಶೂನ್ಯವಾದ ಮಾತುಗಳನ್ನು ಆಡುವೆಯಲ್ಲಾ!
ಅರ್ಥಪರ-ಹಾಗೋ? ಹಾಗಾದರೆ ನಾನು ಹೇಳುವುದು ನಿಜವೋ ಸುಳ್ಳೋ ಎಂಬುದು, ನಿನಗೆ ಇನ್ನು ಕ್ಷಣಕಾಲದೊಳಗಾಗಿ ವ್ಯಕ್ತವಾಗುವುದು.

ಹೀಗೆ ಮಾತನಾಡುತ್ತಿರುವಷ್ಟರಲ್ಲಿಯೇ, ಶಂಬರನ ಸಹಾಯದಿಂದ ಅರ್ಥಪರನು ಮೊದಲೇ ನಿರ್ಮಿಸಿದ್ದ ಮನುಷ್ಯ ಮುಖವುಳ್ಳುದಾಗಿಯೂ ಸರ್ಪಾಕಾರವಾಗಿಯೂ ಇರುವ ಒಂದಾನೊಂದು ಯಂತ್ರವು, ಅತ್ಯಾರ್ಭಟದೊಡನೆ ಪರಂತಪನ ಅಭಿಮುಖವಾಗಿ ಬಂದಿತು. ಅರ್ಥಪರನು ಭಯವನ್ನು ನಟಿಸುತ ದೂರಕ್ಕೆ ಓಡಿಹೋಗಲು, ಪರಂತಪನು ಬಾರುಮಾಡಿದ ಪಿಸ್ತೂಲನ್ನು ಹಾರಿಸಿದನು. ಕೂಡಲೇ ಶಂಬರನಿಂದ ನಿಯಮಿತರಾದ ಕೆಲ ಭಟರು ಹಿಂದುಗಡೆಯಿಂದ ಬಂದು ಅವನ ಕೈಲಿದ್ದ ಪಿಸ್ತೂಲನ್ನು ಕಿತ್ತುಕೊಂಡು, ಕೈಕಾಲುಗಳಿಗೆ ಸಂಕಲೆಯನ್ನು ಹಾಕಿ, ಶಂಬರನ ಬಳಿಗೆ ಕರೆದುಕೊಂಡು ಹೋದನು. ಆಗ ಪರಂತಪನು ಸ್ವಲ್ಪ ಹೊತ್ತು ದಿಗ್ಭ್ರಾಂತನಾಗಿದ್ದು, ಕೂಡಲೇ ಚೇತರಿಸಿಕೊಂಡು, ಶಂಬರನನ್ನೂ ಅವನ ದೂತ