ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

115

ತಿಂದ್ಮೇಲೆ ಮರ್ಯಾದೆಯಾಗಿ ಬಾಯ್ಮುಚ್ಚಿ ಬಿದ್ದಿರ್ಬೇಕು.”
ಗದ್ದಲವಾದರೆ ರಾಧಮ್ಮನ ಮನೆಯವರು ಏಳಬಹುದೆಂದು, ಪಕ್ಕದಲ್ಲಿದ್ದ ಬಡ
ಸಂಸಾರಕ್ಕೆ ಕೇಳಿಸಬಹುದೆಂದು, ಸುನಂದಾ ಸುಮ್ಮನಾದಳು.

****

ಆ ರಾತ್ರೆ ಮುಂಜಾವದವರೆಗೂ ಸುನಂದೆಗೆ ನಿದ್ದೆ ಬರಲಿಲ್ಲ. ತನ್ನ ಬದುಕಿನ
ಕಥೆ ಅಲ್ಲಿಗೆ ಆಯಿತೆಂದೇ ಆಕೆ ತಿಳಿದಳು. ಪಿಶಾಚಿಗಳೆಲ್ಲ ಅಬಲೆಯಾದ ತನ್ನ ಸುತ್ತಲೂ
ಕೈ ತಟ್ಟಿ ಕುಣಿಯುತ್ತಿದ್ದಂತೆ ಆಕೆಗೆ ಅನಿಸಿತು.
ಸಾವಿರದ ಒಂದನೆಯ ಸಾರೆ ಆಕೆ ತನ್ನನ್ನೆ ಕೇಳಿಕೊಂಡಳು:
“ಹೀಗೆ ಬದುಕುವುದಕ್ಕಿಂತ ಸಾಯುವುದಲ್ಲವೆ ಮೇಲು?”
ಅಡುಗೆಮನೆಯ ಕಿಟಿಕಿ ಎತ್ತರವಾಗಿತ್ತು. ಅದರ ಸರಳುಗಳಿಗೆ ಸೀರೆ ಕಟ್ಟಿ ತನ್ನ
ಕೊರಳಿಗೆ ಬಿಗಿದು ಸುತ್ತಿದರೆ ಸಾವು ಬರುವುದು. ಆತನಿಗೆ ಯಾವ ತೊಂದರೆಯೂ
ಇಲ್ಲ. ಶವವನ್ನು ಹಾಸಿಗೆಯ ಮೇಲೆ ಮಲಗಿಸಿಟ್ಟು ಆಕೆಗೆ ಕಾಹಿಲೆಯೆಂದು ಪುಕಾರು
ಹುಟ್ಟಿಸಿ, 'ಅಕಸ್ಮಾತ್ತಾಗಿ ಸತ್ತಳು'-ಎಂದು ಜಾಹೀರು ಮಾಡುವುದಕ್ಕೂ ಆತ
ಸಮರ್ಥನೇ. ಅಥವಾ ತಾನೇ ಬರೆದಿಡಬಹುದು-ತನ್ನ ಮರಣಕ್ಕೆ ಜವಾಬ್ದಾರಳು
ತಾನೇ ಎಂದು... ಆದರೆ ಹಾಗೆ ಯಾಕೆ ಬರೆಯಬೇಕು?....ಆತನ ವಿಷಯವಾಗಿ ತಾನು
ಯಾಕೆ ಕನಿಕರ ತೋರಬೇಕು? ಈ ರೀತಿ ಕ್ರೂರ ಪಶುವಾಗಿ ವರ್ತಿಸಿದ ಆತ ಸಂಕಷ್ಟ
ಅನುಭವಿಸಲಿ. ಜೈಲಿಗೆ ಹೋಗಲಿ ಬೇಕಾದರೆ. ಆ ವಿಷಯದಲ್ಲಿ ತಾನು ಮೃದುವಾಗಿ
ಯಾಕಿರಬೇಕು?...
ಮತ್ತೆ ಮತ್ತೆ ಅದೇ ಯೋಚನೆ. ಆ ಯೋಚನೆಯೇ ಸರಿ ಎಂಬ ಅಭಿಪ್ರಾಯ.
ಅದರಂತೆಯೇ ನಡೆಯಬೇಕು ಎಂಬ ಉತ್ಕಟೇಚ್ಛೆ.
...ಮಗು ತೊಟ್ಟಿಲಲ್ಲಿ ಅತ್ತಿತ್ತ ಹೊರಳಿ ಮೆಲ್ಲನೆ ಅತ್ತಿತು.
'ಮೂರು ಗಂಟೆಯಾಯ್ತು ಹಾಗಾದರೆ'
—ಎಂದು ಸುನಂದಾ ಎದ್ದು ಕುಳಿತು ತೊಟ್ಟಿಲು ತೂಗಿದಳು. ಹಿಂದೆ
ಸಾಮಾನ್ಯವಾಗಿ ಮೂರು ಗಂಟೆಯ ಹೊತ್ತಿಗೆ ಮಗು ಎದ್ದಾಗಲೆಲ್ಲ ಅದಕ್ಕೆ ಹಾಲು
ಕೊಡಬೇಕಾಗುತ್ತಿತ್ತು. ಈಗ ಅದರ ಅಗತ್ಯವಿರಲಿಲ್ಲ. ಅಭ್ಯಾಸ ಬಲದಿಂದ ಆ
ಹೊತ್ತಿಗೇ ಎಚ್ಚರಾಗುತ್ತಿತ್ತಾದರೂ ಸ್ವಲ್ಪ ತೊಟ್ಟಿಲು ತೂಗಿದೊಡನೆ ಮತ್ತೆ ನಿದ್ದೆ
ಹೋಗುತಿತ್ತು.
ಈ ಸಲವೂ ಮಗು ನಿದ್ದೆ ಹೋಯಿತು.
ಸುನಂದಾ ಹೊದಿಕೆ ಹೊದ್ದುಕೊಂಡು ಗೋಡೆಗೊರಗಿ ಹಾಗೆಯೇ ಕುಳಿತಳು.
ಈ ಮಗು ಮತ್ತು ತಾನು. ಅದು ತನ್ನದೇ ಮಾಂಸದೊಂದು ತುಣುಕು.
ತಾನು ಹೊರಟು ಹೋದರೆ ಅದರ ಗತಿ ಏನಾಗುವುದು? ಅದನ್ನು ಯಾರು ಸಾಕು
ವರು? ಆ ಮನುಷ್ಯನೆ? ಆತ ಒಂದು ದಿನವೂ ಅದರ ಪಾಲನೆ ಮಾಡಲಾರ. ಅದನ್ನು