ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

128

ಕನಸು



ಗಳನ್ನೆಲ್ಲ ಕೊಟ್ಟು ನ್ಯಾಯಸ್ಥಾನಕ್ಕೆ ಅರ್ಜಿ ಹಾಕಿ ಡೈವೋರ್ಸ್ ಪಡಕೊಂಡ್ಬಿಟ್ಟಳು.
ಏನ್ಹೇಳ್ತೀರೀ ಇದಕ್ಕೆ?"
ಕುಸುಮಾ ಹೇಳಿದ ಕಥೆಗೂ ಸುನಂದೆಯ ಬದುಕಿಗೂ ಯಾವ ಸಂಬಂಧವೂ
ಇರಲಿಲ್ಲ. ಆದರೂ ಆ ವಿವರ ಸುನಂದೆಯ ಲೋಕಾನುಭವವನ್ನು ಹೆಚ್ಚಿಸಿತು.
"ಧೈರ್ಯವಂತೆ! ಪರವಾಗಿಲ್ಲ!"
"ಒಳ್ಳೇ ಹೇಳಿದಿರಿ-ಆಕೆಗಿರೋ ಧೈರ್ಯ ಐಶ್ವರ್ಯದ್ದು. ಅಂಥಾದ್ದೆಲ್ಲಾ
ಆಯ್ತೂಂತ ಆ ಮಟ್ಟದಲ್ಲಿ ಯಾರೂ ನಗೋದಿಲ್ಲ. ಅವಳ ಹಣದ ಮೇಲೆ ಕಣ್ಣಿಟ್ಟು,
ನಾನು ಮುಂದೆ ನಾನು ಮುಂದೆ ಅಂತ, ಆಕೆಯ ಕೈ ಹಿಡಿಯೋಕೆ ಇನ್ನೆಷ್ಟೋ ಜನ
ಬರ್ತಾರೆ. ಆ ಸಮಾಜದಲ್ಲಿ ಅವಳ ಖ್ಯಾತಿ ಹೆಚ್ಚುತ್ತೆ. ಹೀಗೆಂದರೆ ನೀವು ನಂಬ್ತೀರೋ
ಇಲ್ಲವೋ..."
"ಯಾಕಮ್ಮ ನಂಬದಿರ್ಲಿ? ಅಂತೂ ಒಳ್ಳೇ ಕಾದಂಬರಿ ಇದ್ದ ಹಾಗಿದೆ ಈ
ವಿಷಯ."
ಕುಸುಮಾ ರಹಸ್ಯವನ್ನೇನೊ ಹೇಳುವಂತೆ ಸ್ವರ ತಗ್ಗಿಸಿ ಅಂದಳು:
"ಆಕೆ ನನ್ನ ಜತೇಲೇ ಓದ್ತಿದ್ಲು. ಉತ್ತರ ದೇಶದ ಜನ. ಇದು ನಡೆದದ್ದು
ಹೋದ ವರ್ಷ."
ತನ್ನ ಅಭಿಪ್ರಾಯಗಳನ್ನು ಸ್ಫುಟಗೊಳಿಸುತ್ತ ಸುನಂದಾ ಕೇಳಿದಳು:
"ಅಂತೂ ಈ ಸ್ವಾತಂತ್ರ್ಯವೆಲ್ಲ ಸುಪ್ಪತ್ತಿಗೆ ಮೇಲೆ ಹೊರಳೋರಿಗೆ ಮತ್ತು
ಗಟಾರದಲ್ಲಿ ಮಲಗೋರಿಗೆ ಮಾತ್ರ-ಅಲ್ವೇನ್ರಿ?"
"ಸರಿ ಹೇಳಿದ್ರಿ...ಸುಪ್ಪತ್ತಿಗೆ ಮೇಲೆ ಹೊರಳೋರು-ಗಟಾರದಲ್ಲಿ ಮಲ
ಗೋರು; ನೀವು ಹೇಳಿರೋ ರೀತಿ ಸೊಗಸಾಗಿದೆ."
ದೊರಗಾದ ಹಳೆಯ ಹಾಸಿಗೆಯ ಮೇಲೆ ಮಲಗುವ ಜಾತಿಗೆ ಸೇರಿದ ಸುನಂದಾ,
ಆ ಹೊಗಳಿಕೆಯನ್ನು ಕೇಳಿ ನಕ್ಕಳು. ಆ ಸಂಭಾಷಣೆಯಲ್ಲಿ ಆಸಕ್ತಿ ಹೆಚ್ಚಾಗಿ, ಆಕೆ
ಕೇಳಿದಳು:
"ಕುಸುಮಾ, ಒಂದು ಕೇಳ್ತೀನಿ, ಹೇಳ್ತೀರಾ?"
"ಏನು?"
"ಈ ವಿವಾಹ ವಿಚ್ಛೇದನದ ವಿಷಯದಲ್ಲಿ ನಿಮ್ಮ ಸ್ವಂತ ಅಭಿಪ್ರಾಯವೇನು?"
ಒಂದು ಕ್ಷಣ ಕುಸುಮಾ ಸುಮ್ಮನಿದ್ದಳು. ಬಳಿಕ ನಕ್ಕು ನುಡಿದಳು:
"ವಿವಾಹ ವಿಚ್ಛೇದನದ ತತ್ವ ನನಗೆ ಒಪ್ಪಿಗೆ. ಆದರೆ ಅದನ್ನು ಆದ ಅನ್ಯಾಯ
ಸರಿಪಡಿಸೋಕೆ ಉಪಯೋಗಿಸ್ಬೇಕು. ಹೊಸ ಅನ್ಯಾಯ ಮಾಡೋದಕ್ಕಲ್ಲ."
ಪ್ರಶ್ನೆಯನ್ನು ಮೊದಲೆ ಮನಸ್ಸಿನಲ್ಲಿ ರೂಪಿಸಿ ಸುನಂದಾ ಕೇಳಿದಳು:
"ಈ ವಿಷಯದಲ್ಲಿ ನಿಮ್ಮ ಗಂಡನ ಅಭಿಪ್ರಾಯವೇನ್ರೀ?"
ಕುಸುಮಳಿಗೆ ನಗು ಬಂತು.