ಪುಟ:ಪಾಲಿಗೆ ಬಂದ ಪಂಚಾಮೃತ.pdf/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಪಾಲಿಗೆ ಬಂದ ಪಂಚಾಮೃತ

129

"ಒಳ್ಳೇ ಪ್ರಶ್ನೆ! ಏನಿದ್ದೀತು ನೀವೇ ಹೇಳಿ. ನನ್ನ ಅಭಿಪ್ರಾಯವೇ! ಇಂಥ
ಮುಖ್ಯ ವಿಷಯದಲ್ಲೆಲ್ಲ ನಮ್ಮೊಳಗೆ ಭಿನ್ನಾಭಿಪ್ರಾಯ ಇರುತ್ತೇಂತ ತಿಳಿದಿರೇನು?"
ಸುನಂದೆಗೆ ಯಾರೋ ತನ್ನನ್ನು ಚುಚ್ಚಿ ನೋಯಿಸಿದ ಹಾಗಾಯಿತು. ತನ್ನೆ
ದುರಿಗಿದ್ದುದು ಸುಂದರ ಪುಷ್ಪೋದ್ಯಾನ. ತಾನೋ ಅದರ ಸುತ್ತಲಿನ ಮುಳ್ಳು ಬೇಲಿ
ಯಾಚೆಗಿನ ಕಳೆ ಹುಲ್ಲು...
ಟೀ ಬಂತು. ಬೆಳಗ್ಗೆ ಕಾಫಿ, ಮಧ್ಯಾಹ್ನ ಚಾ. ರುಚಿಯಾದದ್ದು. ಮನಸ್ಸಿ
ನೊಳಗಿನ ಎಲ್ಲಾ ಕಹಿ ಭಾವನೆಗಳನ್ನೂ ಮಧುರಗೊಳಿಸುವ ಸಾಮರ್ಥ್ಯ ಉಳ್ಳದ್ದು...
ಸುನಂದಾ ಅಂದಳು:
“ಹೀಗೆ ಕೇಳ್ದೇಂತ ಕೋಪಿಸ್ಕೋಬೇಡಿ."
“ಛೆ! ಛೇ! ಕೋಪ ಯಾಕೆ? ಹೀಗೆಲ್ಲಾ ಇವತ್ತು ಮಾತಾಡಿದೆವಲ್ಲಾಂತ ನನಗೆ
ಸಂತೋಷವೇ. ದಿನಾ ಇಂಥದೇ ವಿಷಯ ಏನಾದರೂ ಮಾತಾಡ್ತಿರೋಣ. ಮಾಡೋದು
ಏನೂ ಇಲ್ದೇ ಹೋದರೂ ಮಾತಾಡೋಕೆ ಏನಂತೆ?"
ಇಬ್ಬರೂ ನಕ್ಕರು. ಕುಸುಮಳದು ನಿರ್ಮಲವಾದ ನಗೆಯ ಹೊನಲು. ಸುನಂದೆ
ಯದು ನೋವಿನ ನಗೆಯ ತುಂತುರು....
ಮಗು ಅತ್ತಿತೆಂದು ಹುಡುಗಿ ಅದನ್ನು ರಮಿಸುತ್ತ ಎತ್ತಿಕೊಂಡು ಮೇಲಕ್ಕೆ
ಬಂದಳು. ತಾಯ ಮುಖ ನೋಡಿದೊಡನೆ ಮಗು ಅಳು ನಿಲ್ಲಿಸಿತು.
ಕುಸುಮಾ ಅಂದಳು:
"ತಾಯಿ ಅಂದರೆ ಎಷ್ಟೊಂದು ಪ್ರೀತಿ ನಿಮ್ಮ ಸರಸ್ವತಿಗೆ! ಮನೇಲಿ ತಂದೆ ಹತ್ತಿ
ರಕ್ಕೂ ಇವಳು ಹೋಗೋದಿಲ್ವೇನೋ?"

ಸೂಜಿಯಿಂದ ಚುಚ್ಚಿಸಿಕೊಳ್ಳುವುದು ಸುಲಭ. ಆದರೆ ಇಂಥ ಮಾತನ್ನು
ಕೇಳುವುದಲ್ಲ. ಬೈಗಳು ಎಂದು ತಿಳಿದಿದ್ದಾಗ ಮನಸಿಗೆ ಹೆಚ್ಚು ನೋವಾಗುವುದಿಲ್ಲ.
ಆದರೆ, ನೇರವಾಗಿ ಸರಳವಾಗಿ ಬ೦ದ ಮಾತುಗಳು ವಿಪರೀತಾರ್ಥಕ್ಕೆ ಎಡೆಗೊಟ್ಟಾಗ,
ಆಗುವ ಹಿಂಸೆ ಅಸಹನೀಯ.
—'ಮಾಡೋದು ಏನೂ ಇಲ್ದೇ ಹೋದರೂ ಮಾತಾಡೋಕೆ ಏನಂತೆ?'
—'ಮನೇಲಿ ತಂದೆ ಹತ್ತಿರಕ್ಕೂ ಇವಳು ಹೋಗೋದಿಲ್ವೇನೋ?'
ಸುನಂದೆ ಎದ್ದು ಮಗುವನ್ನೆತ್ತಿಕೊಂಡು ಮನೆಗೆ ಹೊರಟಳು.
"ಬರ್ರ್ತೀನಮ್ಮ. ಹೊತ್ತಾಯ್ತು."
"ಅದೇನು ಹೊತ್ತೋ? ಯಾವಾಗ್ಲೂ ಅವಸರ ನಿಮಗೆ."
"ಇನ್ನೊಂದಿವ್ಸ ಬರ್ರ್ತೀನಿ."
"ಇನ್ನೋಂದಿವಸವಲ್ಲ, ನಾಳೆ ಬನ್ನಿ; ಪ್ರತಿನಿತ್ಯವೂ ಬನ್ನಿ."
ಕೆಳಕ್ಕೆ ಇಳಿಯುತ್ತಿದ್ದಂತೆ ಕುಸುಮಾ, ಏನೋ ಯೋಚಿಸಿ ಹೇಳಿದಳು:

17