ಪುಟ:ಪಾಲಿಗೆ ಬಂದ ಪಂಚಾಮೃತ.pdf/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



30

ಕನಸು

ಕೊಳ್ಳುವುದು; 'ಕಠೋರ ಮನಸ್ಕ' ಎಂಬ ಬಿರುದು ಸಂಪಾದಿಸುವುದು, ಮನೋವೃತ್ತಿ
ಯನ್ನೆ ಮೂಲಭೂತವಾಗಿ ಬದಲಾಯಿಸಿ, ತನ್ನ ವ್ಯಕ್ತಿತ್ವವನ್ನು ತನಗೆ ಬೇಕಾದಂತೆ
ತಾನೇ ರೂಪಿಸಿಕೊಳ್ಳುವುದು. ಹಾಗೆ ಮಾಡಲು ಮೊದಲ ಪ್ರಯೋಗಕ್ಷೇತ್ರ, ಸ್ವಂತ
ಮನೆಯೇ. ಆ ಪ್ರಯೋಗಕ್ಕೆ ಮೊದಲ ಮಿಕಗಳು, ಹೆಂಡತಿ ಮತ್ತು ಮಗುವೇ.
ಇಷ್ಟೆಲ್ಲ ನಡೆಯುತ್ತಿದ್ದರೂ ಏನೊಂದೂ ತಿಳಿಯದೆ ಆ ಬಡಪಾಯಿಗಳು ವಿಲಿ
ವಿಲಿ ಒದ್ದಾಡುವುದನ್ನು ನಿರೀಕ್ಷಿಸಿನೋಡುವುದು ಎಂತಹ ಸುಖ!....
__ಹಾಗೆ ಯೋಚಿಸುತ್ತ ಪುಟ್ಟಣ್ಣ ಒಂದು ಹೋಟೆಲಿಗೆ ನುಗ್ಗಿದ. ಅದು ಆ
ಬೀದಿಯ ಪ್ರಖ್ಯಾತ ಫಲಾಹಾರ ಮಂದಿರವಲ್ಲ-ಪುಟ್ಟ ಅಂಗಡಿ. ಒಮ್ಮೊಮ್ಮೆ ಅಂತಹ
ಕೆಳ ತರಗತಿಯ ಕಾಫಿ ಹೋಟೆಲುಗಳನ್ನು ಹೊಕ್ಕು ಕುಳಿತಿರುವುದು ಪುಟ್ಟಣ್ಣನ ಹೊಸ
ಅಭ್ಯಾಸ. ಹಣ ಎಲ್ಲಿ ಎಲ್ಲಿ ಯಾವ ಯಾವ ರೀತಿ ಬದುಕನ್ನು ಏರ್ಪಾಟುಗೊಳಿಸಿದೆ?
ಎಂದು ತಿಳಿಯುವ ಆಸೆ ಆತನಿಗೆ_ಜನರ ನಡೆನುಡಿ ವಿಚಾರಗಳನ್ನು ಹೆಚ್ಚು ಚೆನ್ನಾಗಿ
ತಿಳಿಯುವ ಆಸೆ.
ಅಲ್ಲಿ ಇದ್ದುದರಲ್ಲೇ ತನಗೆ ಬೇಕಾದ ತಿಂಡಿಯನ್ನು ಪುಟ್ಟಣ್ಣ ಆರಿಸಿದ. ಅದನ್ನು
ತಿನ್ನುತ್ತಿದ್ದಂತೆ, ಹಿಂದೆ ಹೆಂಡತಿಯ ಕೈಯಡುಗೆಯ ರುಚಿಯನ್ನೇ ತಾನು ಬಯಸು
ತ್ತಿದ್ದ ದಿನಗಳು ಅವನ ನೆನಪಿಗೆ ಬಂದುವು. ಮನುಷ್ಯ ಹುಚ್ಚನಾಗುವುದಕ್ಕೂ ಒಂದು
ಮಿತಿ ಬೇಕು_ಎಂದು ನಕ್ಕಿತು ಮನಸ್ಸು.
ಮನೆಯಲ್ಲಿ ಗಂಡ ಹೆಂಡಿರಿಬ್ಬರೇ ಉಳಿದಾಗಿನ ಕಾಲ. ಐದು ಗಂಟೆಯಾಗುವು
ದನ್ನೇ ಕಾಯುತ್ತಿದ್ದು ಆತ ನಿಮಿಷವೂ ತಡಮಾಡದೆ ಆಫೀಸು ಬಿಡುತ್ತಿದ್ದ.
ಒಂದು ದಿನ ಹೀಗಾಯಿತು. ಮೇಲಿನವರು ಪುಟ್ಟಣ್ಣನನ್ನು ತಡೆದು ಕೇಳಿದರು:
“ಸ್ವಲ್ಪ ಫ್ಯಾಕ್ಟರಿ ಕಡೆ ಹೋಗಿ ಬರ್ತೀರಾ? ಅದು ಯಾವುದೋ ಡಿಸೈನನ್ನ ನೀವು
ನೋಡಬೇಕಂತೆ.”
ಪುಟ್ಟಣ್ಣನಿಗೆ ಪೇಚಿಗಿಟ್ಟುಕೊಂಡಿತು. ಸಿನಿಮಾಕ್ಕೆ ಹೊರಡಲು ಗಂಡನಿಗಾಗಿಯೇ
ಕಾದಿದ್ದ ಹೆಂಡತಿ ಒಂದೆಡೆ; 'ಫ್ಯಾಕ್ಟರಿ ಕಡೆ ಹೋಗಿ ಬರ್ತೀರಾ?' ಎಂದು ಕೇಳುತ್ತಿದ್ದ
ಮೇಲಿನ ಅಧಿಕಾರಿ ಒಂದೆಡೆ. ನಾಲಗೆ ಏನು ಹೇಳಲಿ ಎಂದು ಮನಸ್ಸನ್ನು ಕೇಳಿತು
ಬಲಗೈ ಪ್ಯಾಂಟಿನ ಜೇಬಿನೊಳಕ್ಕೆ ಇಳಿದು ಬೆವರೊಡೆಯುತಿದ್ದ ಮುಖವನ್ನೊರೆಸಲು
ಕರವಸ್ತ್ರ ಹುಡುಕಿತು... ತಡವರಿಸುತ್ತ ಆತನೆಂದ:
“ಸಾರ್....ಆ ಕೆಲಸ ತುಂಬಾ ಅರ್ಜೆಂಟೇ ಸಾರ್? ನಾಳೆ ಬೆಳಗ್ಗೆ ...”
ಮಾತನ್ನು ಪೂರ್ತಿಮಾಡಲಾಗದೆ ಒದ್ದಾಡುತ್ತಿದ್ದ ಪುಟ್ಟಣ್ಣನನ್ನು ಕಂಡು ಆ
ಅಧಿಕಾರಿ ಗಟ್ಟಿಯಾಗಿ ನಕ್ಕು ಬಿಟ್ಟರು. ವಿಷಯ ತಿಳಿಯದೆ ಪುಟ್ಟಣ್ಣನ ಮುಖ
ವಿವರ್ಣವಾಯಿತು.
“ಓ ಹೋ ಹೋ...ಸರಿ_ಸರಿ...ನಾಳೆ ಮಾಡೋಣ ಅಂತೀರಾ? ಈಗ
ಪುರಸೊತ್ತಿಲ್ಲ ಅಲ್ಲ....?”