ಪುಟ:ಪಾಲಿಗೆ ಬಂದ ಪಂಚಾಮೃತ.pdf/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



ಬಾಗಿಲು ತಟ್ಟಿದ ಸದ್ದಾಯಿತು. ಜತೆಯಲ್ಲೇ, ಕರೆದ ಸ್ವರ ಕೇಳಿಸಿತು.
"ಅಮ್ಮಾ, ಅಮ್ಮಾ!"
ತೊಟ್ಟಿಲು ತೂಗುತ್ತಿದ್ದ ಸುನಂದಾ ಬಾಗಿಲ ಬಳಿಗೆ ನಡೆದು ಬಂದು ಅಗಣಿ ತೆಗೆದಳು.
ಸ್ನೇಹಪರವಲ್ಲದ ಮುಖಮುದ್ರೆಯೊಡನೆ ಅಗಸರವನು ಅಲ್ಲಿ ನಿಂತಿದ್ದ.
"ಏನಪ್ಪಾ ?"
ಆತನೆಂದ:
"ಅಂಗಡೀ ಕಡೆ ಬತ್ತೀನಿ ಅಂದ ರಾಯ್ರು ಬರಲೇ ಇಲ್ವಲ್ರಮ್ಮಾ. ಇಂಗಾದರೆ ಎಂಗೆ?"
ಸುನಂದಾ ಪ್ರಯತ್ನಪೂರ್ವಕವಾಗಿ ನಗೆಯ ಮುಖವಾಡ ಧರಿಸಿದಳು.
"ಬರಲೇ ಇಲ್ವೇನು? ಮರೆತರೂಂತ ಕಾಣುತ್ತೆ. ಇವತ್ತು ಜ್ಞಾಪಿಸ್ತೀನಿ."
ಆದರೆ ಅಗಸನ ಪಾಲಿಗೆ ಇಂತಹ ಉತ್ತರ ಅಪರಿಚಿತವಾಗಿರಲಿಲ್ಲ.
"ಎಷ್ಟು ದಿನಾಂತ ಸುಮ್ನಿರಾಕಾತದೆ_ನೀವೇ ಹೇಳ್ರಮ್ಮಾ..."
ಹೌದು,_ಎಷ್ಟು ದಿನದಿಂದ ಹೀಗೆ? ಒಂದು ತಿಂಗಳಾಯಿತೆ? ಎರಡೆ?
ಮನೆಯಾಕೆಯ ಮೌನ ಕಂಡು ಅಗಸರವನೇ ಮಾತು ಮುಂದುವರಿಸಿದ:
"ಈಗ ನಮ್ಮಂಗಡೀಲಿ ಬಟ್ಟೆ ಆಕೋದೂ ಬುಟ್ಬುಟ್ರಿ...."
ಆ ಮಾತಿನಲ್ಲಿ ನೋವಿನ ಧ್ವನಿಯಿತ್ತು ಬಟ್ಟೆ ಹಾಕುವುದನ್ನಾದರೂ ನಿಲ್ಲಿಸದೇ ಇದ್ದಿದ್ದರೆ ಅಗಸರವನು ಹಣಕ್ಕಾಗಿ ಅಷ್ಟು ತಗಾದೆ ಮಾಡುತ್ತಲೂ ಇರಲ್ಲಿಲ್ಲ.
ಏನನ್ನು ಹೇಳಬೇಕೆಂದು ತಿಳಿಯದೆ ಸುನಂದೆಗೆ ತಡವರಿಸಿತು. ಆದರೆ ಸುಧಾರಿಸಿಕೊಂಡು ಆಕೆ ಎಂದಳು:
"ಬೇರೆ ಅಂಗಡೀಲೂ ಎಲ್ಲೂ ಹಾಕ್ತಾ ಇಲ್ಲವಪ್ಪಾ. ಕೆಲಸದವಳೇ ಒಗೀತಾಳೆ."
ಅರ್ಧ ನಿಜ,ಅರ್ಧ ಸುಳ್ಳು. ಬೇರೆ ಅಗಸರವನನ್ನೇನೂ ಗೊತ್ತುಮಾಡಿರಲಿಲ್ಲ. ಆದರೆ ಈಗ ಬಟ್ಟೆ ಒಗೆಯುತ್ತಿದ್ದುದೆಲ್ಲ ಕೆಲಸದವಳಲ್ಲ_ಸುನಂದೆಯೇ.
ಪಕ್ಕದ ಬೀದಿಯಲ್ಲೇ ಅಂಗಡಿ ಇಟ್ಟಿದ್ದ ಅಗಸರವನು ಒಳ್ಳೆಯವನಾಗಿದ್ದ. ಸುನಂದಾ ಮದುವೆಯಾಗಿ ಗಂಡನ ಮನೆಗೆ ಬಂದ ಆ ಎರಡು ವರ್ಷಗಳಲ್ಲಿ ಆತ ನಂಬಿಕೆಯಿಂದಲೇ ನಡೆದುಕೊಂಡಿದ್ದ. ಸಾಮಾನ್ಯವಾಗಿ ಸುನಂದೆಯ ಗಂಡ ಹಣ ಕೊಡುವುದು ತಡವಾಗುತ್ತಿರಲಿಲ್ಲ. ಒಮ್ಮೊಮ್ಮೆ ತಡವಾದರೂ ಅಗಸರವನು ಆಗ್ರಹ ತೊಡುತ್ತಿರಲಿಲ್ಲ.