ಪುಟ:ಪಾಲಿಗೆ ಬಂದ ಪಂಚಾಮೃತ.pdf/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪಾಲಿಗೆ ಬಂದ ಪಂಚಾಮೃತ

75

“ಹಾಗಲ್ಲ ಸುನಂದಾ....ಆದರೂ ಒಮ್ಮೊಮ್ಮೆ ಯಾರಿಗಾದರೂ ಹಾಗಾಗೋ
ದಿಲ್ವೆ? ಸಣ್ಣ ಕಾರಣಕ್ಕೇನೆ ವಿರಸ ಶುರುವಾಗಿ ಬಲಿತುಕೊಳ್ಳುತ್ತೆ."
“ಅದು ನಿಜ. ನಮ್ಮ ವಿಷಯದಲ್ಲಿ ಹಾಗಾಗಿಲ್ಲ ರಾಧಮ್ಮ. ನಾನು ಸರಿಯಾಗೇ
ನಡಕೊಂಡಿದೀನಿ. ಮಗುವಾಗೋದು ಅವರಿಗೇ ಇಷ್ಟವಿಲ್ಲ.”
ವಿಚಿತ್ರ ಮನುಷ್ಯ-ಎಂಬ ಪದ ಮತ್ತೊಮ್ಮೆ ರೂಪುಗೊಂಡರೂ ಅದನ್ನು
ಆಡದೆ ರಾಧಮ್ಮನೆಂದರು:
“ಹಾಗೂ ಇರಬಹುದು. ಗಂಡಸರ ಮನಸ್ಸು ತಿಳಿಯೋದೇ ಕಷ್ಟ.”
ಕ್ಷಣಕಾಲ ಮೌನವಾಗಿದ್ದು, ನೇರವಾಗಿ ರಾಧಮ್ಮನನ್ನು ದಿಟ್ಟಿಸಿ ನೋಡಿ,
ಸುನಂದಾ ಕೇಳಿದಳು:
“ನಿಮ್ಮ ಗಂಡಸರ ಮನಸ್ಸು ತಿಳಿಯೋದು ನಿಮಗೆ ಕಷ್ಟವಾಗಿದೆಯೆ ರಾಧಮ್ಮ?”
ಆ ಪ್ರಶ್ನೆ ಕೇಳಿ ರಾಧಮ್ಮ ನಕ್ಕರು. ಮತ್ತೆ ಗಂಭೀರವಾಗಿ ಅವರೆಂದರು:
“ಆ ವಿಷಯದಲ್ಲಿ ನಾನು ಪುಣ್ಯವಂತೆ. ಒಪ್ತೀನಿ.”
ಸಂಭಾಷಣೆಗೆ ಮತ್ತೊಮ್ಮೆ ಮೌನದ ಕೊಂಡಿ ಬಿತ್ತು.
ಯೋಚಿಸುತ್ತ ಕುಳಿತ ರಾಧಮ್ಮ ಕೇಳಿದರು:
“ಈಗ ಏನ್ಮಾಡ್ಬೇಕೂಂತಿದೀರಾ?”
“ಏನು ಮಾಡ್ಲಿ ಹೇಳಿ?”
“ತವರು ಮನೆಗೆ ಹೋಗಿ ಸ್ವಲ್ಪ ದಿವಸ ಇರ್ತೀರೇನು?”
ಆ ಯೋಚನೆಯನ್ನು ತಾನೂ ಎಷ್ಟೋ ಸಾರೆ ಮಾಡಿದ್ದ ಸುನಂದಾ ಮೆಲು
ಧ್ವನಿಯಲ್ಲಿ ಉತ್ಸಾಹವಿಲ್ಲದೆ ಅಂದಳು:
“ಹೋಗಬಹುದು. ಆದರೆ ಏನು ಪ್ರಯೋಜನ? ಎಷ್ಟು ದಿನಾಂತ ಅಲ್ಲಿ
ಇರೋಕಾಗ್ತದೆ? ಇಲ್ಲೇ ಇದ್ದರೆ, ಈ ಮಹಾನುಭಾವನಿಗೆ ಏನಾಗ್ತಿದೆ ಅನ್ನೋದನ್ನಾ
ದರೂ ನೋಡಬಹುದು. ಅಲ್ಲಿದ್ದರೆ, ಒಂದೂ ತಿಳೀದೆ ಮನಸ್ಸಿನ ಸಂಕಟ ಹೆಚ್ಚಾಗುತ್ತೆ.”
“ಅದು ನಿಜ.”
“ಅಲ್ದೆ, ನನ್ನ ತಂಗಿಗಿನ್ನೂ ವರ ಗೊತ್ತಾಗಿಲ್ಲ. ನಾನೂ ಅಲ್ಲಿಗೆ ಹೋಗಿ ನಿಂತು
ಕೊಂಡರೆ ಏನಾದರೂ ಕಿಂವದಂತಿ ಹುಟ್ಟಿ, ಅವರಿಗೆಲ್ಲ ಹಿಂಸೆಯಾಗೋದು ಖಂಡಿತ.”
ತನ್ನ ಸಂಕಟದ ಸಮಯದಲ್ಲೂ ಇನ್ನೊಬ್ಬರ ಯೋಚನೆ ಮಾಡುವ ಆ ಮನೋ
ವೃತ್ತಿ ಕಂಡು ರಾಧಮ್ಮ ಮೂಕರಾದರು.
ಸುನಂದೆಯೇ ಮಾತು ಮುಂದುವರಿಸಿದಳು:
“ಮೊದಲ್ನೇ ಸಾರೆ ಹೀಗೆ ಆದಾಗ ತವರುಮನೆಗೆ ಹೋಗ್ತೀನೀಂತ ನಾನೇ
ನಿಮ್ಜತೇಲಿ ಪ್ರಸ್ತಾಪಿಸಿದ್ದೆ. ಆಗ 'ದುಡುಕಬಾರ್ದೂಂ'ತ ನೀವು ಹೇಳಿದ್ರಿ. ಈ ಸಲ
ನಾನೇ, ಹೋಗೋದಿಲ್ಲ-ಅನ್ತಾ ಇದೀನಿ. ಇಷ್ಟರಲ್ಲೆ ತುಂಬಾ ವಯಸ್ಸಾದೋಳ
ಹಾಗೆ ಮಾತಾಡ್ತಿದೀನಿ, ಅಲ್ಲ?”