ಪುಟ:ಪೈಗಂಬರ ಮಹಮ್ಮದನು.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

V, ಉನ್ನತಿಯ ಅಂಕುರ ತಂದೆಗಳಿಲ್ಲದ ಇಬ್ಬರು ಬಾಲಕರು ಮಹಮ್ಮದನಿಗೆ ಸಮರ್ಪಿಸಿದರು. ಈ ಸೋದರರ ಓಜಸ್ವಿತೆಯನ್ನೂ ಉದಾರ ಬುದ್ಧಿಯನ್ನೂ ಮತಾಭಿ ಮಾನವನ್ನೂ ಕಂಡು ಮಹಮ್ಮದನು ತಲೆದೂಗಿದನು. ತನ್ನ ವರ್ಚಸ್ಸು ಅವರ ಮೇಲೆ ಬಿದ್ದುದೇ ಅದಕ್ಕೆ ಕಾರಣವೆಂಬುದು ಅವನಿಗೆ ಗೋಚರ ವಾಯಿತೋ ಇಲ್ಲವೋ ಎಂಬುದು ನಮಗೆ ತಿಳಿಯದು. ಆ ಬಾಲಕರು ನಿವೇಶನವನ್ನು ಉಚಿತವಾಗಿ ಕೊಡಲು ಸಿದ್ದರಾಗಿದ್ದರೂ ಅವರು ತಬ್ಬಲಿ ಗಳೆಂಬ ಕನಿಕರದಿಂದ ಮಹಮ್ಮದನು ಅವರಿಗೆ ಅದರ ಬೆಲೆಯನ್ನು ಸಲ್ಲಿಸಿ ದನು. ಕೂಡಲೆ ಕಟ್ಟಡದ ಕೆಲಸವನ್ನು ಪ್ರಾರಂಭಿಸಿ ಮಹಮ್ಮದನು ತಾನು ಗುರುವೆಂಬ ಹೆಮ್ಮೆಯನ್ನು ಹಚ್ಚಿಕೊಳ್ಳದೆ, ತನ್ನ ಶಿಷ್ಯರು ತನ್ನನ್ನು ಎಷ್ಟು ತಡೆದರೂ ಲಕ್ಷಿಸದೆ, ಇತರರೊಡನೆ ತಾನೂ ಸೇರಿ ಕಟ್ಟಡದ ಕೆಲಸವನ್ನು ಮಾಡಿದನು. ಭಗವಂತನ ಸೇವೆ ಮಾಡುವುದರಲ್ಲಿ ಎಲ್ಲರೂ ಒಂದೇ ಎಂಬ ತತ್ವವನ್ನು ಕಾರ್ಯ ರೂಪದಲ್ಲಿ ಎಲ್ಲ ಕಡೆಗೂ ಸಾರುವುದಕ್ಕಾಗಿಯೇ ಆತನು ತಳಹದಿ ಮೊದಲ್ಗೊಂಡು ಕಟ್ಟಡದ ಕೆಲ ಸವು ಪೂರೈಸುವವರೆಗೂ ಇತರರೊಡನೆ ಸಾಮಾನ್ಯನಂತೆ ನಿಂತು ಕೆಲಸ ಮಾಡಿದನು. ಮಸೀದಿಯ ಕಟ್ಟಡವೂ, ಮಹಮ್ಮದನ ಸರಳತೆಗೆ ತಕ್ಕಂತೆ, ಆಡಂಬರವಿಲ್ಲದೆ ಇದ್ದಿತು ; ಗೋಡೆಗಳನ್ನು ಕಲ್ಲು ಇಟ್ಟಿಗೆ ಮಣ್ಣುಗಳಿಂದ ಕಟ್ಟಿ ಮಾಳಿಗೆಗೆ ಮಾತ್ರ ಖರ್ಜೂರದ ಗರಿಯನ್ನು ಹೊದಿಸಿದ್ದರು. ವಾಸಕ್ಕೆ ಸ್ಥಳವಿಲ್ಲದ ಅನಾಥರ ಉಪಯೋಗಕ್ಕಾಗಿ ಆ ಮಸೀದಿಯ ಒಂದು ಭಾಗವನ್ನು ಮಹಮ್ಮದನು ಬಿಡಿಸಿಕೊಟ್ಟಿದ್ದನು. ಆ ಮಸೀದಿಯಲ್ಲಿ ಇಸ್ಲಾಂ ಮತಕ್ಕನುಸಾರವಾಗಿ ಪ್ರಾರ್ಥನೆ ನಡೆಯುತ್ತಿದ್ದಿತು. ಮಹಮ್ಮದನು ತನ್ನ ಶಿಷ್ಯರನ್ನೂ ಇತರರನ್ನೂ ಸಭೆ ಸೇರಿಸಿ ಅವರೆಲ್ಲರಿಗೂ ಅಲ್ಲಿ ಉಪದೇಶ ಮಾಡುತ್ತಿದ್ದನು. ದೀನರಿಗೆ ಸಹಾಯ ಮಾಡುವ ವಿಷಯದಲ್ಲಂತು ಎಷ್ಟು ಬೋಧಿಸಿದರೂ ಅವನ ಮನಸ್ಸಿಗೆ ದಣಿವಾಗದು. ಈ ವಿಷಯದಲ್ಲಿ ಅವನು ಹೇಳಿದ ಉಪದೇಶ ವಾಕ್ಯವನ್ನು ಮಾನ್ಯರಾದ ಸೈಯದ್ ಅಮೀರ್ ಆಲಿಯವರ ಗ್ರಂಥದಿಂದ ಇಲ್ಲಿ ಉದ್ಧರಿಸಿ ಬರೆದಿದೆ:- ಭಗವಂತನು ಸೃಷ್ಟಿಸಿರುವ ಪ್ರಾಣಿಗಳ ವಿಷಯದಲ್ಲಿ ಯಾವನು ದಯೆಯನ್ನು ತೋರಿಸುವುದಿಲ್ಲವೋ ಅವನನ್ನು