ಪುಟ:ಬೆಳಗಿದ ದೀಪಗಳು.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನರಗುಂದದ ಸಾವಿತ್ರಿಬಾಯಿ

ಶುಭಾಂಗಿಯಾದ ವನಿತೆಯೆಂದರೆ ಈ ಜಗತಲದಲ್ಲಿ ನಯನಾಭಿರಾಮವಾಗಿ ತೋರುವ ನವಕುಸುಮವಲ್ಲದೆ ಮತ್ತೊಂದಲ್ಲ. ಹೊಸ ಚಿಗುರಿನಿಂದೊಪ್ಪುವ ಕುಡಿವಳ್ಳಿಯಲ್ಲಿ ಹೊಂಬಣ್ಣದಿಂದೊಪ್ಪಿ ನಲಿದಾಡುವ ಅರಳುಮೊಗ್ಗೆಯ ಅಂದವನ್ನು ಕಂಡು ಮನಸೋತು ಬೆರಗಾಗಿ ನಿಂದಿರದವರಾರು ? ಆ ಪೊಗರೊಗುವ ಪೂವಿನ ತನಿಗಂಪಿನ ಸೊಂಪಿಗೆ ಮೆಚ್ಚಿ ತಲೆದೂಗದಿರುವವರಾದರೂ ಯಾರು ? ಅದರಂತೆಯೇ ಕೋಮಲಾಂಗಿಯ ಸರ್ವಾಂಗ ಸುಂದರಿಯ ಚಾರುತರ ವಿಲಾಸವತಿಯ ಮೃದುಭಾಷಿಣಿಯ ಸೌಜನ್ಯಯುತ ಕಲಂಕರಹಿತವಾದ ಆಚರಣದವಳೂ ಆದ ಲಲನಾಮಣಿಯನ್ನು ಕಂಡು ಆಶುಕವನ್ನು ಪಡೆಯದಿರುವ ಮನುಷ್ಯನು ಪಶುಸಮಾನನೇ. ಪ್ರೇಮ ಮಮತೆ ದಯಾಪರತೆಗಳ ಸುರುಚಿರವಾದ ಮೂರುತಿಯಾದ ಸೀಮಂತಿನಿಯು ಲೀಲಾವಿಲಾಸಗಳಿಂದ ನಲಿದಾಡಿ ಮೃದುಹಾಸಗೈಯುತ್ತೆ ಚಿಂತಾರಹಿತಳಾಗಿ ಸಂತೋಷದಿಂದ ಮೆರೆಯುತ್ತಿರಬೇಕಲ್ಲದೆ ಅವಳು ನಿಷ್ಟುರವಾದ ದುಃಸ್ಥಿತಿಗಿಡಾಗಿ ಕೊರಗಿ ಸೊರಗಿ ಅಕಾಲ ಮೃತ್ಯುವಿನ ತುತ್ತಾಗಿ ಹೋಗುತ್ತಿರುವ ನೋಟವು ಶೋಚನೀಯವಾದದ್ದಲ್ಲವೆ ? ಕಲ್ಲುಕಣಿಯಾಗಿರುವ ಪುರುಷನು ದುಃಖಸಾಗರದಲ್ಲಿ ಮುಳುಮುಳುಗಿ ಎದ್ದರೇನಾಗುವದು ? ಆದರೆ ಕೋಮಲೆಯರಾದ ಭಾಮಿನಿಯರಿಗೆ ಕಷ್ಟಕ್ಲೇಶಗಳ ಬಳಿ ತಗಲಿದರೆ ಸಾಕು, ಅವರು ಕಂದಿಕುಂದಿಹೋಗದಿರುವರೆ ? ಆದರೂ ಮಕರಂದಮಯವಾದ ಪುಷ್ಪಗಳಲ್ಲಿಯ ಸಾರವನ್ನು ಸಂಗ್ರಹಿಸುವಾಗ ಗಂದಿಗನು ಅವುಗಳನ್ನು ಹಿಂಡಿ ಹಿಪ್ಪೆ ಯಾಗಿ ಮಾಡುವಂತೆ, ಸುಚರಿತೆಯರ ಸುಭಾವಗಳನ್ನು ಪರೀಕ್ಷಿಸುವದಕ್ಕಾಗಿ ಪರಮಾತ್ಮನು ಅವರನ್ನು ಬಾಧೆಗೀಡುಮಾಡುವದುಂಟು. ದಮಯಂತಿ ತಾರಾಮತಿಯರೂ ಸೀತೆ ದೌಪದಿಯರ ಭಗವಂತನೊಡ್ಡಿದ ಪಣದಲ್ಲಿ ತಾವೇ ವಿಜಯವನ್ನು ಹೊಂದಿದರೆಂಬ ಮಾತುಗಳನ್ನು ನಾವು

ಪುರಾಣಗಳಲ್ಲಿ ಕೇಳುತ್ತೇವೆ. ಅಂಥ ಮಹಾಸತಿಯರು ಅರ್ವಾಚೀನವಾದ ಇತಿಹಾಸವನ್ನು ಅಲಂಕರಿಸಿದ ಉದಾಹರಣಗಳಾದರೂ ಆನೇಕವಾಗಿರುವವು.