ಪುಟ:ಭಾರತ ದರ್ಶನ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಭಾರತ ಸಂಶೋಧನ

೧೦೫

ಆ ಆದರ್ಶವು ಸದಾಚಾರ ಮತ್ತು ಆತ್ಮಸಂಯಮದಿಂದ ಬಂದುದು. “ಯುದ್ದದಲ್ಲಿ ಸಾವಿರ ಜನರನ್ನು ಜೈಸಬಹುದು ಆದರೆ ತನ್ನನ್ನು ತಾನು ಗೆದ್ದವನೇ ನಿಜವಾದ ವೀರ,” “ಅಂತ್ಯಜ ಅಥವ ಬ್ರಾಹ್ಮಣನಾಗುವುದು ತನ್ನ ಹುಟ್ಟಿನಿಂದಲ್ಲ. ನಡತೆಯಿಂದ ಮಾತ್ರ ” ಪಾಪಕರ್ಮಿಯನ್ನು ಸಹ ನಿಂದಿಸಬಾರದು. ಏಕೆಂದರೆ “ಗಾಯದ ಮೇಲೆ ಮೆಣಸಿನ ಪುಡಿ ಹಾಕಿದಂತೆ ಕಠಿಣೋಕ್ತಿಯಿಂದ ತಪು. ಮಾಡಿದವನ ಮನಸ್ಸು ನೋಯಿಸದವರು ಯಾರು?” “ಇನ್ನೊಬ್ಬನನ್ನು ಜಯಿಸುವುದರಿಂದ ಅನಿಷ್ಟ ಪರಿಣಾಮಗಳಾಗುತ್ತವೆ” ಗೆಲುವಿನಿಂದ ದ್ವೇಷ ಹುಟ್ಟುತ್ತದೆ, ಏಕೆಂದರೆ ಸೋತವನು ದುಃಖಿಯಾಗುತ್ತಾನೆ.

ಯಾವ ಧರ್ಮದ ಅಧಿಕಾರವಾಣಿಯೂ ಇಲ್ಲದೆ ಯಾವ ದೇವರ ಅಥವ ಪರಲೋಕದ ಮಾತನ್ನೂ ಎತ್ತದೆ ಇದನ್ನೆಲ್ಲ ಆತನು ಉಪದೇಶ ಮಾಡಿದ. ವಿಚಾರ ತರ್ಕ ಮತ್ತು ಅನುಭವವೇ ಆತನ ಆಧಾರಸ್ತಂಭಗಳು. ಅವರವರ ಮನಸ್ಸೇ ಅವರಿಗೆ ಸತ್ಯದ ಅರಿವನ್ನುಂಟುಮಾಡುತ್ತದೆ ಎಂದು ಹೇಳಿದ. “ ನನ್ನ ಮೇಲಿನ ಗೌರವದಿಂದ ಒಪ್ಪಬೇಡಿ ; ಬೆಂಕಿಯಲ್ಲಿ ಚಿನ್ನವನ್ನು ಪುಟಕ್ಕಿಟ್ಟ೦ತೆ ಮೊದಲು ಪರೀಕ್ಷೆ ಮಾಡಿ ಒಪ್ಪಿರಿ” ಎಂದು ಹೇಳಿದನಂತೆ. ಸತ್ಯದ ಅಜ್ಞಾನವೇ ಎಲ್ಲ ದುಃಖಗಳ ಮೂಲ. ಒಬ್ಬ ದೇವರು ಅಥವ ಪರವಸ್ತು ಇದೆಯೋ ಇಲ್ಲವೋ ಏನೂ ಹೇಳುವುದಿಲ್ಲ. ಒಪ್ಪುವುದೂ ಇಲ್ಲ, ಇಲ್ಲವೆಂದು ನಿರಾಕರಿಸುವುದೂ ಇಲ್ಲ ; ನಿರ್ದಿಷ್ಟ ಜ್ಞಾನ ಎಲ್ಲಿ ಸಾಧ್ಯವಿಲ್ಲವೋ ಅಲ್ಲಿ ತೀರ್ಮಾನ ಹೇಳದಿರಬೇಕು. ಒಂದು ಪ್ರಶ್ನೆಗೆ ಉತ್ತರವಾಗಿ “ಪರವಸ್ತು ಎಂದರೆ ಜ್ಞಾನ ವಸ್ತು ಗಳಿಗೆ ಯಾರ ಸಂಬಂಧವೂ ಇಲ್ಲದ ಒಂದು ವಸ್ತು : ಎಂದರೆ ಜ್ಞಾತವಿಚಾರದಿಂದ ಅದರ ಅಸ್ತಿತವನ್ನು ದೃಢಪಡಿಸಲು ಸಾಧ್ಯವಿಲ್ಲ. ಇತರ ವಸ್ತುಗಳಿಗೆ ಸಂಬಂಧವಿರದ ವಸ್ತು ಒಂದಿದೆ ಎಂದು ತಿಳೆಯುವುದಾದರೂ ಹೇಗೆ. ವಿಶ್ವ ಪ್ರಪಂಚವೇ ನಮಗೆಲ್ಲ ತಿಳಿದಂತೆ ಪರಸ್ಪರ ಸಂಬಂಧಗಳ ಒಂದು ವ್ಯವಸ್ಥೆ. ಸಂಬಂಧವಿಲ್ಲದ ಅಥವ ಸ೦ಬ೦ಧಪಡಲಾರದ ಯಾವ ವಸ್ತುವೂ ನಮಗೆ ತಿಳಿದಿಲ್ಲ” ಎಂದು ಉತ್ತರಕೊಟ್ಟನಂತೆ. ಆದ್ದರಿಂದ ನಮ್ಮ ದೃಷ್ಟಿಗೆ ಗೋಚರವಾಗುವ ಮತ್ತು ನಮ್ಮ ನಿರ್ದಿಷ್ಟ ಜ್ಞಾನಕ್ಕೆ ಎಟುಕುವ ಮಿತಿಯನ್ನು ಮಾತ್ರ ಮೀರಬಾರದು.

ಇದೇ ರೀತಿ ಆತ್ಮ ವಿದೆಯೇ ಇಲ್ಲವೇ ಎಂಬ ವಿಷಯದಲ್ಲ ಬುದ್ದನು ಯಾವ ಸ್ಪಷ್ಟ ಅಭಿಪ್ರಾಯವನ್ನೂ ತಿಳಿಸಿಲ್ಲ, ತಿರಸ್ಕರಿಸಿಯೂ ಇಲ್ಲ, ಪುರಸ್ಕರಿಸಿಯೂ ಇಲ್ಲ. ಆ ಪ್ರಶ್ನೆ ಯನ್ನೇ ಚರ್ಚಿಸಲು ನಿರಾಕರಿಸುತ್ತಾನೆ. ಆಗಿನ ಭಾರತೀಯ ಮನೋಭಾವನೆಯೆಲ್ಲ ಆತ್ಮ, ಪರಮಾತ್ಮ, ಏಕತ್ವವಾದ ಏಕದೈವತಾವಾದ ಮುಂತಾದ ತಾತ್ವಿಕ ಕಲ್ಪನೆಗಳಲ್ಲಿಯೇ ಮಗ್ನ ವಾಗಿದ್ದ ಕಾಲದಲ್ಲಿ ಬುದ್ಧನು ಅದನ್ನೆಲ್ಲ ನಿರಾಕರಿಸಿದ್ದು ಒಂದು ಆಶ್ಚರ್ಯ. ಆದರೆ ಬುದ್ಧನು ಯಾವ ತಾತ್ವಿಕ ವಿಚಾರಕ್ಕೂ ಎಡೆಗೊಡಲಿಲ್ಲ. ಆದರೆ ಪ್ರಕೃತಿ ನಿಯಮದ ನಿತ್ಯತೆಯಲ್ಲಿ, ವಿಶ್ವ ಕರ್ತೃತ್ವದಲ್ಲಿ ಪೂರ್ವಾವಸ್ಥೆಯಿಂದ ಮುಂದಿನ ಪ್ರತಿ ಯೊಂದು ಅವಸ್ಥೆಯೂ ನಿಯಮಿತ ಎನ್ನು ವುದರಲ್ಲಿ ಸದ್ಗುಣಕ್ಕೂ, ಸುಖಕ್ಕೂ, ದುರ್ಗುಣಕ್ಕೂ ದುಃಖಕ್ಕೂ ಪರಸ್ಪರ ಸಂಬಂಧವಿದೆ ಎನ್ನುವುದರಲ್ಲಿ ಆತನು ನಂಬಿದ್ದನು.

ಅನುಭವ ಪ್ರಪಂಚದಲ್ಲಿ 'ಅದು ಇದೆ' “ ಅದು ಇಲ್ಲ' ಎಂಬ ಶಬ್ದಗಳನ್ನು ವಿವರಣೆಗಳನ್ನು ಉಪಯೋಗಿಸುತ್ತೇವೆ. ವಸ್ತುಗಳ ಬಾಹ್ಯ ಸ್ಥಿತಿಯನ್ನು ಬಿಟ್ಟು ಸ್ವಲ್ಪ ಹಿಂದೆ ಹೋದರೆ ಈ ಎರಡು ವಿವರಣೆಗಳೂ ತಪ್ಪು ಇರಬಹುದು ; ಪ್ರಾಯಶಃ ನಿಜ ಸ್ಥಿತಿಯನ್ನು ವಿವರಿಸಲು ನಮ್ಮ ಭಾಷೆ ಅಸಮರ್ಥವಿರಬಹುದು. ಸತ್ಯವು 'ಇದೆ' ಮತ್ತು 'ಇಲ್ಲ' ಎಂಬುದರ ಮಧ್ಯೆ ಅಥವ ಅವುಗಳೆರಡರ ಆಚೆ ಎಲ್ಲೋ ಇರಬಹುದು. ನದಿಯು ಸದಾ ಹರಿಯುತ್ತಲೇ ಇರುತ್ತದೆ ; ಕ್ಷಣಕ್ಷಣಕ್ಕೂ ಅದೇ ನದಿ ಯಾಗಿ ಕಂಡರೂ ನೀರು ಮಾತ್ರ ಪ್ರತಿಕ್ಷಣದಲ್ಲಿ ಬೇರೆಯಾಗುತ್ತದೆ. ಬೆಂಕಿಯೂ ಹೀಗೆಯೇ ಜ್ವಾಲೆ ಉರಿಯುತ್ತಲೇ ಇರುತ್ತದೆ. ಅದೇ ರೂಪ, ಅದೇ ಆಕೃತಿ, ಆದರೂ ಅದೇ ಜ್ವಾಲೆಯಲ್ಲ ; ಪ್ರತಿಕ್ಷಣವೂ ಪ್ರತ್ಯೇಕ, ಆದರೂ ಸರ್ವವೂ ಸದಾ ಪರಿವರ್ತನೆಯಾಗುತ್ತಲಿದೆ. ಈ ಬಹುಮುಖ ಜೀವನವಲ್ಲ ಯಾವುದೋ ಗಮ್ಯದೆಡೆಗೆ ಹರಿಯುವ ಅನಂತವಾಹಿನಿ, ವಾಸ್ತವಿಕ ಶಾಶ್ವತವೂ ಅಲ್ಲ.