ಪುಟ:ಭಾರತ ದರ್ಶನ.djvu/೨೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೯೪

ಭಾರತ ದರ್ಶನ

ಅವಲಂಬಿಸಿ ಬ್ರಿಟಿಷ್ ಆಡಳಿತ ಅಂಗಗಳಾಗುವುದರಿಂದ ಅವರನ್ನು ನಂಬಬಹುದು ಎಂದು ಅನುಭವದಿಂದ ತಿಳಿದಿತ್ತು. ದಂಗೆಯ ಮೊದಲು ಕೆಳದರ್ಜೆಯ ನೌಕರರೆಲ್ಲರೂ ಬಂಗಾಲಿಗಳಾಗಿದ್ದರು, ಆಡಳಿತ ಮತ್ತು ಸೈನ್ಯ ಇಲಾಖೆಗಳಲ್ಲಿ ಗುಮಾಸ್ತರಾಗಿ ಅಥವಾ ಇತರ ಕೆಲಸಗಳಿಗಾಗಿ ಬ್ರಿಟಿಷ್ ಅಧಿಕಾರಿ ವರ್ಗಕ್ಕೆ ಸೇರಿ ಉತ್ತರ ಹಿಂದೂಸ್ಥಾನದಲ್ಲೆಲ್ಲ ಹರಡಿದ್ದರು. ಆದ್ದರಿಂದ ಸಂಯುಕ್ತ ಪ್ರಾಂತ್ಯ ದೆಹಲಿ ಮತ್ತು ಪಂಜಾಬಿನ ಆಡಳಿತ ಮತ್ತು ಸೈನ್ಯ ಇಲಾಖೆಯ ಕೇಂದ್ರಗಳಲ್ಲಿ ಬಂಗಾಲಿಗಳ ಅಗ್ರಹಾರಗಳು ಬೆಳೆದವು. ಈ ಬಂಗಾಲಿಗಳು ಬ್ರಿಟಿಷ್ ಸೈನ್ಯ ಹೋದ ಕಡೆಯಲ್ಲೆಲ್ಲ ಹಿಂಬಾಲಿಸಿ ಅವರ ನಂಬಿಕೆಯ ಸೇವಕರಾದರು. ದಂಗೆಕಾರರು ಇವರನ್ನು ಬ್ರಿಟಿಷ್ ಆಡಳಿತದ ಅಂಗವೆಂದು ಭಾವಿಸಿ ದ್ವೇಷಿಸಲಾರಂಭಿಸಿದರು ಮತ್ತು ಕುಚೋದ್ಯ ಮಾಡಿದರು.

ನಿಜವಾದ ಅಧಿಕಾರ, ಕಾರ್ ನಿರೂಪಣ ನೀತಿ ಎಲ್ಲ ಇಂಗ್ಲಿಷರ ಕೈಯಲ್ಲೇ ಕೇಂದ್ರೀಕೃತವಾಗಿ ಆಡಳಿತಯಂತ್ರದ ಕೆಳಮಟ್ಟದಲ್ಲಿ ಮಾತ್ರ ಭಾರತೀಯರನ್ನು ನೇಮಿಸುತ್ತ ಬಂದರು. ಭಾರತದ ಆಡಳಿತವರ್ಗದ ಭಾರತೀಕರಣವು ಆರಂಭವಾದುದು ಈ ರೀತಿ, ಇಂಗ್ಲಿಷ್ ವಿದ್ಯಾಭ್ಯಾಸವು ಹರಡಿದಂತೆ ಆಡಳಿತವರ್ಗದ ಅಧಿಕಾರ ಸ್ಥಾನಗಳು ಬಂಗಾಲಿಗಳ ಮಾಸಲು ಸ್ವತ್ತಾಗಿ ಉಳಿಯದೆ ಆಡಳಿತ ವರ್ಗದ ನ್ಯಾಯಾಂಗ ಮುಂತಾದ ಸ್ಥಾನಗಳಿಗೆ ಇತರ ಭಾರತೀಯರೂ ಕಾಲಿಟ್ಟರು. ಬ್ರಿಟಿಷರ ಆಡಳಿತ ಭದ್ರತೆಗೆ ಈ ಭಾರತೀಕರಣ ಬಹಳ ಸಹಾಯವಾಯಿತು. ಪ್ರತಿಯೊಂದು ಕಡೆಯ ಆಡಳಿತ ವರ್ಗದ ಒಂದು ಪಡೆಯ ಪಾಳೆಯವೂ ಸಿದ್ಧವಾಯಿತು. ಯುದ್ಧ ಮಾಡುವ ಸೈನ್ಯಕ್ಕಿಂತ ಈ ಅಧಿಕಾರಿಗಳ ತಂಡ ಹೆಚ್ಚು ಪ್ರಯೋಜನಕಾರಿಯಾಯಿತು. ಈ ಅಧಿಕಾರಿವರ್ಗದಲ್ಲಿ ಸಹ ಅನೇಕರು ದಕ್ಷರೂ, ದೇಶಾಭಿಮಾನವುಳ್ಳವರೂ, ರಾಷ್ಟ್ರೀಯ ಭಾವನೆಯವರೂ ಇದ್ದರು. ಅಂದರೆ ವೈಯಕ್ತಿಕವಾಗಿ ದೇಶಾಭಿಮಾನವಿದ್ದರೂ ಸೈನಿಕನಂತೆ ಅವರಿಗೂ ಒಂದು ಆಡಳಿತದ ನಿಯಮವಿತ್ತು, ಬಿಗಿ ಇತ್ತು. ಅವಿಧೇಯತೆ, ದ್ರೋಹ, ಅಥವ ದಂಗೆ ಎದ್ದರೆ ಕ್ರೂರ ಶಿಕ್ಷೆಯು ಕಾದಿತ್ತು. ಈ ರೀತಿ ಒಂದು ಆಡಳಿತ ವರ್ಗದ ಸೃಷ್ಟಿಯಾಯಿತಲ್ಲದೆ ಅದರಲ್ಲಿನ ಅಧಿಕಾರದ ಆಸೆಯಿಂದ ಇತರರಲ್ಲಿ ಸಹ ಹೆಚ್ಚು ಹೆಚ್ಚಾಗಿ ಅನೀತಿ ಬೆಳೆಯಿತು, ಅಧಿಕಾರದಲ್ಲಿ ಒಂದು ಗೌರವ ಮತ್ತು ಭದ್ರತೆ ಇದ್ದವು. ಕೊನೆಯಲ್ಲಿ ಜೀವನಾಂಶ ದೊರೆಯುತ್ತಿತ್ತು. ತನ್ನ ಮೇಲಣ ಅಧಿಕಾರಿಯ ಕೃಪೆಯೊಂದು ಇದ್ದರೆ ಉಳಿದ ಲೋಪಗಳೇನಿದ್ದರೂ ಗಮನಕ್ಕೆ ಬರುತ್ತಿರಲಿಲ್ಲ. ಈ ಆಡಳಿತ ವರ್ಗವು ಬ್ರಿಟಿಷ್ ಅಧಿಕಾರಿಗಳಿಗೂ ಜನರಿಗೂ ಮಧ್ಯಸ್ಥಗಾರರಾದರು, ಅವರೂ ತಮ್ಮ ಅಧಿಕಾರ ದರ್ಪದಿಂದ ತಮ್ಮ ಕಳ ಅಧಿಕಾರಿಗಳ ಮತ್ತು ಜನರ ವಿಧೇಯತೆಯನ್ನು ಅಪೇಕ್ಷಿಸಬಹುದಿತ್ತು.

ಇತರ ಉದ್ಯಮಗಳ ಅವಕಾಶವಿಲ್ಲದೆ, ಜೀವನಕ್ಕೆ ಮಾರ್ಗವಿಲ್ಲದೆ ಸರಕಾರಿ ನೌಕರಿಗೆ ಒಂದು ವಿಶೇಷ ಪ್ರಾಮುಖ್ಯತೆ ದೊರೆಯಿತು. ನ್ಯಾಯವಾದಿಗಳೂ, ವೈದ್ಯರೂ ಆಗಲು ಕೆಲವರಿಗೆ ಅವಕಾಶವಿದ್ದರೂ ಹೆಚ್ಚು ಸಂಪಾದನೆಯ ಭರವಸೆ ಇರಲಿಲ್ಲ. ಕೈಗಾರಿಕೆಗಳು ಇರಲೇ ಇಲ್ಲ. ವ್ಯಾಪಾರವೆಲ್ಲ ತಲೆತಲಾಂತರದಿಂದ ಒಂದೇ ವರ್ಗದ ಕೈಯಲ್ಲಿತ್ತು. ಅವರಿಗೆ ಅದರಲ್ಲಿ ವಿಶೇಷ ಪರಿಶ್ರಮವೂ ಇತ್ತು; ತಮ್ಮಲ್ಲಿ ಪರಸ್ಪರ ಸಹಾಯವನ್ನೂ ಮಾಡುತ್ತಿದ್ದರು. ಹೊಸ ವಿದ್ಯಾಭ್ಯಾಸದಿಂದ ವ್ಯಾಪಾರ ಅಥವ ಕೈಗಾರಿಕೆಗೆ ಯೋಗ್ಯತೆ ದೊರೆಯಲಿಲ್ಲ; ಅದರ ಮುಖ್ಯ ಉದ್ದೇಶವೇ ಸರಕಾರಿ ನೌಕರಿ, ವಿದ್ಯಾಭ್ಯಾಸ ಪದ್ಧತಿಯೇ ಸಂಕುಚಿತವಿದ್ದುದರಿಂದ ಉದ್ಯೋಗಶಿಕ್ಷಣ ಪಡೆಯಲು ಅವಕಾಶವೂ ಬಹಳ ಕಡಮೆ ಇತ್ತು. ಸಾಮಾಜಿಕ ಸೇವಾಕ್ಷೇತ್ರ ಯಾವುದೂ ಇರಲಿಲ್ಲ. ಉಳಿದುದು ಸರಕಾರಿ ನೌಕರಿ ಒಂದೇ ಕಾಲೇಜುಗಳ ಪದವೀಧರರು ತಂಡೋಪತಂಡವಾಗಿ ಬರಲಾರಂಭಿಸಿದುದರಿಂದ ಸರಕಾರದ ಆಡಳಿತಶಾಖ ಬೆಳೆಯುತ್ತಿದ್ದರೂ ಅವರೆಲ್ಲರಿಗೂ ಸ್ಥಾನ ಕಲ್ಪಿಸಲು ಸಾಧ್ಯವಾಗದೆ ಪ್ರಚಂಡ ಪೈಪೋಟಗೆ ಆರಂಭವಾಯಿತು. ಸರಕಾರವು ತಮಗೆ ಬೇಕಾದವರನ್ನು ಆರಿಸುವಂತೆ ನಿರುದ್ಯೋಗ ಪದವೀಧರರೂ ಇತರರೂ ಒಂದು ಸಂಘವನ್ನು ಏರ್ಪಡಿಸಿಕೊಂಡರು. ಇದರಿಂದ ಅಧಿಕಾರದಲ್ಲಿರು ನವರ ಭದ್ರತೆಗೂ ಸಂಚಕಾರ ಬಂದಿತು. ಈ ರೀತಿ ಬ್ರಿಟಿಷ್ ಸರಕಾರ ಭಾರತದಲ್ಲಿ ಒಂದು ದೊಡ್ಡ