ವಿಷಯಕ್ಕೆ ಹೋಗು

ಪುಟ:ಭಾರತ ದರ್ಶನ.djvu/೩೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕೊನೆಯ ಅಂಕ ೨
೩೨೫

ನೋವಿಗಿಂತ ಹೆಚ್ಚಿನ ನೋವು ಬೇರೊಂದಿಲ್ಲ. ಹೃದಯದಲ್ಲಿ, ಮನಸ್ಸಿನಲ್ಲಿ ಅಥವ ನೀವು ಬೇರೆಲ್ಲಿ ಎಂದರೂ ಸರಿ, ಅಂತೂ ನನಗೆ ಬಾಧೆಯಾಗಿದೆ' ಎಂಬ ಮಾತುಗಳಂತೆ ಗಾಂಧೀಜಿಯನ್ನು ಕಾಣುತ್ತಾರೆ.

೨. ಗಾಂಧೀಜಿ ನಾಯಕತ್ವದ ಕಾರ್ಯಶೀಲ ಕಾಂಗ್ರೆಸ್

ಗಾಂಧೀಜಿ ಕಾಂಗ್ರೆಸ್ ಪ್ರವೇಶಮಾಡಿದ ತತ್‌ಕ್ಷಣವೇ ಅದರ ಅಂಗರಚನೆ ಪೂರ್ಣ ಬದಲಾಯಿಸಿದರು. ಪ್ರಜಾ ಸತ್ತೆಯ ಜನತಾ ಸಂಸ್ಥೆಯನ್ನಾಗಿ ಮಾಡಿದರು. ಮುಂಚೆಯೂ ಅದು ಪ್ರಜಾ ಸತ್ತಾತ್ಮಕವಿತ್ತು, ಆದರೆ ಉನ್ನತವರ್ಗದ ಸ್ವಲ್ಪ ಜನರಿಗೆ ಮಾತ್ರ ಮತಾಧಿಕಾರವಿತ್ತು. ಈಗ ಅದು ರೈತರ ಸಂಸ್ಥೆಯಾಗಿ ಹೊಸರೂಪ ತಾಳಿ ಅಲ್ಪ ಸ್ವಲ್ಪ ಮಧ್ಯಮವರ್ಗದವರಿಂದ ಕೂಡಿದ ಒಂದು ದೊಡ್ಡ ಬಂಡಾಯದ ಸಂಸ್ಥೆಯಾಯಿತು. ಈ ಚಳುವಳಿಯ ಸ್ವರೂಪ ಇನ್ನೂ ಬೆಳೆಯುವದರಲ್ಲಿ ಇತ್ತು. ಸಂಘಟಿತ ವಾಗಿ ಅಲ್ಲದಿದ್ದರೂ ವೈಯಕ್ತಿಕವಾಗಿ ಕೈಗಾರಿಕಾ ಶ್ರಮಜೀವಿಗಳೂ ಬಂದು ಸೇರಿದರು.

ಶಾಂತಿ ಮಾರ್ಗದ ಚಳವಳಿಯೇ ಈ ಸಂಸ್ಥೆಯ ಮುಖ್ಯ ತಳಹದಿ ಮತ್ತು ಗುರಿಯಾಯಿತು. ಇದು ವರೆಗೆ ಭಾಷಣಗಳು ಮತ್ತು ನಿರ್ಣಯಗಳು ಅಥವ ಹಿಂಸಾತ್ಮಕ ಚಳವಳಿ ಎರಡೇ ಮಾರ್ಗಗಳಿದ್ದವು, ಇವೆರಡನ್ನೂ ಬದಿಗಿಡಲಾಯಿತು. ಕಾಂಗ್ರೆಸ್ಸಿನ ಮೂಲತತ್ವಕ್ಕೆ ವಿರುದ್ಧ ವಾದ ಹಿಂಸಾತ್ಮಕ ಚಳವಳಿಯನ್ನು ಸ್ಪಷ್ಟ ವಿರೋಧಿಸಲಾಯಿತು. ಪೂರ್ಣಶಾಂತಿಯುತವಾದರೂ ಅನ್ಯಾಯಕ್ಕೆಂದೂ ತಲೆಬಾಗದ ಮತ್ತು ಅದರಿಂದ ಬರುವ ಎಲ್ಲ ನೋವು ಮತ್ತು ಕಷ್ಟವನ್ನು ಸಂತೋಷದಿಂದ ಅನುಭವಿಸಲು ಸಿದ್ಧ ಇರುವ ಒಂದು ಹೊಸಕಾರ್ಯ ವಿಧಾನ ಕಂಡುಹಿಡಿದರು. ಗಾಂಧಿಯೊಬ್ಬ ವಿಚಿತ್ರ ಶಾಂತಿದೂತ, ಏಕೆಂದರೆ ಅವರ ಪ್ರತಿಕೆಲಸದಲ್ಲೂ ಶಕ್ತಿಪೂರ್ಣ ಕಾರ್ಯಪಟುತ್ವ, ಅದೃಷ್ಟಕ್ಕೆ ಅಥವ ಅನ್ಯಾಯಕ್ಕೆ ಎಂದೂ ಶರಣು ಹೋದವರಲ್ಲ. ಶಾಂತಿಯಿಂದ, ಗಾಂಭೀರದಿಂದ ಅದನ್ನೆಲ್ಲ ಸಂಪೂರ್ಣ ಎದುರಿಸುವುದೇ ಅವರ ಕಾರ್ಯನೀತಿ.

ಆ ಕಾರನೀತಿ ಎರಡು ವಿಧವಾಯಿತು. ಪರಕೀಯರ ಆಡಳಿತ ಎದುರಿಸಿ ವಿರೋಧಿಸುವುದು ಒಂದು; ಜನಜೀವನದಲ್ಲಿ ಹರಡಿದ್ದ ಸಾಮಾಜಿಕ ದೋಷಗಳ ನಿರ್ಮೂಲ ಮತ್ತೊಂದು. ಈ ರೀತಿ ಶಾಂತಿಯುತ ದಾರಿಯಲ್ಲಿ ಭಾರತ ಸ್ವಾತಂತ್ರ್ಯ ಗಳಿಸಬೇಕೆಂಬ ಕಾಂಗ್ರೆಸ್ಸಿನ ಮೂಲಧೇಯವಲ್ಲದೆ ರಾಷ್ಟ್ರದ ಐಕಮತ್ಯ, ಅಲ್ಪ ಸಂಖ್ಯಾತರ ಪ್ರಶ್ನೆಯ ನಿವಾರಣೆ ದಲಿತರ ಉದ್ದಾರ ಮತ್ತು ಅಸ್ಪೃಶ್ಯತಾ ನಿವಾರಣೆ ಸಹ ಕಾಂಗ್ರೆಸ್ಸಿನ ಮುಖ್ಯ ಕಾರ್ರಂಗಗಳಾದವು.

ಭಯ, ದರ್ಪ ಮತ್ತು ಒಪ್ಪಿಯೇ ಒಪ್ಪದೆಯೋ ದೊರೆತ ಜನರ ಸಹಕಾರ ಮತ್ತು ಬ್ರಿಟಿಷ್ ಆಡಳಿತವನ್ನೇ ನಂಬಿದ್ದ ಅಧಿಕಾರವರ್ಗ ಇವೇ ಬ್ರಿಟಿಷ್ ಆಡಳಿತದ ಆಧಾರ ಸ್ತಂಭಗಳೆಂದು ಅರಿತು ಕೊಂಡು ಗಾಂಧಿಜಿ ಈ ಆಧಾರ ಸ್ತಂಭಗಳನ್ನು ಉರುಳಿಸಲು ಯತ್ನಿಸಿದರು. ಬಿರುದು ಬಾವಲಿ ಕಿತ್ತೆಸೆ ಯಿರಿ ಎಂದರು. ಬಿರುದಾಂಕಿತರ ಸಹಾನುಭೂತಿ ಹೆಚ್ಚು ದೊರೆಯದಿದ್ದರೂ ಬ್ರಿಟಿಷರ ಬಿರುದುಗಳಿಗೆ ಜನರಲ್ಲಿದ್ದ ಗೌರವ ಮಾಯವಾಯಿತು ; ಮತ್ತು ಅವು ಅವನತಿಯ ಲಾಂಛನಗಳಾದವು. ವ್ಯಕ್ತಿಯ ಅಂತಸ್ತು ಮತ್ತು ಬೆಲೆಯಲ್ಲಿ ಹೊಸ ದೃಷ್ಟಿ ಹುಟ್ಟಿತು. ವೈಸರಾಯ್ ದರ್ಬಾರ್ ಮತ್ತು ರಾಜರುಗಳ ಅಲಂಕಾರ ಮತ್ತು ಆಡಂಬರಕ್ಕಿದ್ದ ಗೌರವ ಇದ್ದಕ್ಕಿದ್ದಂತೆ ಮಾಯವಾಗಿ ಜನರ ದಾರಿದ್ರ, ಮತ್ತು ಸಂಕಟದ ಎದುರು ಅದು ತುಂಬ ನಾಚಿಕೆಗೇಡು, ಅಸಹ್ಯ ಎಂಬ ಭಾವನೆ ಹುಟ್ಟಿತು. ಶ್ರೀಮಂತರು ಶ್ರೀಮಂತಿಕೆಯಿಂದ ಮೆರೆಯುವುದನ್ನು ಬಿಟ್ಟರು. ಹೊರಗಡೆಯಾದರೂ ಅನೇಕರು ಸರಳ ಉಡುಪು ಧರಿಸಿ ಸಾಮಾನ್ಯ ಜನರಂತೆ ಕಾಣಲಾರಂಭಿಸಿದರು.

ಇದಕ್ಕೆಲ್ಲ ತೀರ ಭಿನ್ನ ವಿದ್ದ ಸಂಪ್ರದಾಯದಲ್ಲಿ ಬೆಳೆದು ಬಂದ ಹಳೆಯ ಮಂದಗಾಮಿ ಕಾಂಗ್ರೆಸ್ ನಾಯಕರಿಗೆ ಈ ನೂತನ ರೀತಿ ನೀತಿಗಳೂ ಜನತಾ ಚಳುವಳಿಯೂ ಸರಿಬೀಳಲಿಲ್ಲ. ಆದರೆ ದೇಶಾದ್ಯಂತ ಮೂಡಿದ ಈ ಹೊಸ ಭಾವನೆ ಮತ್ತು ಹುರುಪಿನಿಂದ ಅವರಲ್ಲೂ ಕೆಲವರು ತಪ್ಪಿಸಿಕೊಳ್ಳಲಾಗಲಿಲ್ಲ. ಕಾಂಗ್ರೆಸ್‌ನಿಂದ ದೂರ ಸರಿದ ಕೆಲವರಲ್ಲಿ ಜನಾಬ್ ಎಂ. ಎ. ಜಿನ್ನಾ ಒಬ್ಬರು. ಆತ ಕಾಂಗ್ರೆಸ್ ಬಿಟ್ಟದ್ದು