ಪುಟ:ಭಾರತ ದರ್ಶನ.djvu/೩೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊನೆಯ ಅಂಕ ೨

೩೫೫

ಪ್ರತಿನಿಧಿಗಳೂ ಇದ್ದರು. ಕಾಂಗ್ರೆಸೇತರ ಪ್ರಾಂತಗಳಾದ ಬಂಗಾಲ, ಪಂಜಾಬ್, ಸಿಂಧ ಮತ್ತು ಪ್ರಮುಖ ಸಂಸ್ಥಾನಗಳಾದ ಹೈದರಾಬಾದ್, ಮೈಸೂರು, ಬರೋಡ, ತಿರುವಾಂಕೂರು, ಭೂಪಾಲ್‌ನಿಂದ ಪ್ರತಿನಿಧಿಗಳನ್ನು ಸೇರಿಸಿದೆವು. ಭಾರತ ಸರಕಾರ ತನ್ನ ಪ್ರತಿನಿಧಿಗಳನ್ನು ಕಳುಹದೆ ಅಸಹಕಾರ ತೋರಿದುದನ್ನು ಬಿಟ್ಟರೆ ಯಾವ ರಾಜಕೀಯ ಮಿತಿಯಾಗಲಿ, ಅಧಿಕಾರಿಗಳು ಅನಧಿಕಾರಿಗಳು ಎಂಬ ಭೇದವಾಗಲಿ ಅಡ್ಡಿ ಬಾರದೆ ಈ ಸಮಿತಿಯು ಪೂರ್ಣಪ್ರಾತಿನಿಧ್ಯ ಉಳ್ಳುದಾಗಿತ್ತು. ಕಾಸಿಗೆ ಕಾಸು ಲೆಕ್ಕ ಹಾಕುವ ವಣಿಕ ಶ್ರೇಷ್ಠರೂ, ತಾತ್ವಿಕ ಭಾವನೆಯ ಅರ್ಥಶಾಸ್ತ್ರಜ್ಞರೂ, ಸಮಾಜವಾದಿಗಳೂ, ಸಾಮ್ಯವಾದಿಗಳೂ ಇದ್ದರಲ್ಲದೆ ಪ್ರಾಂತ ಸರಕಾರಗಳ ಮತ್ತು ಸಂಸ್ಥಾನಗಳ ಕೈಗಾರಿಕಾ ಶಾಖೆಯ ಮುಖ್ಯ ಅಧಿಕಾರಿಗಳೂ, ಕೈಗಾರಿಕಾ ನಿಪುಣರೂ ಇದ್ದರು.

ಎಲ್ಲ ಬಗೆಯ ಅಭಿಪ್ರಾಯವೂ ಅಲ್ಲಿ ಪ್ರತಿಬಿಂಬಿತವಾಗಿತ್ತು. ಕೆಲಸ ಯಶಸ್ವಿಯಾಗಿ ಮುಂದುವರಿಯುತ್ತದೆಯೇ ಎಂದು ಸಂಶಯ ಬಂದಿತು. ಬಹಳ ಯೋಚನೆ ಮಾಡಿ, ಅನುಮಾನದಿಂದ ನಾನು ಅಧ್ಯಕ್ಷನಾಗಲು ಒಪ್ಪಿದೆ. ಈ ಕೆಲಸವು ನನಗೆ ಬಹಳ ಪ್ರಿಯವಾದುದರಿಂದ ಹಿಂದೇಟು ಹಾಕಲು ಮನಸ್ಸು ಒಪ್ಪಲಿಲ್ಲ.

ಯಾವ ಕಡೆ ತಿರುಗಿದರೂ ತೊಂದರೆಯೇ ಇತ್ತು. ನಿಜವಾದ ಯೋಜನೆ ನಿರೂಪಿಸಲು ಸಾಕಾದಷ್ಟು ಅಂಕಿ ಅಂಶಗಳ ಸಂಗ್ರಹವಿರಲಿಲ್ಲ. ಇದ್ದ ಅಂಕಿ ಅಂಶಗಳೇ ಅತ್ಯಲ್ಪ, ಸರಕಾರ ಸಹಕರಿಸುವಂತೆ ಇರಲಿಲ್ಲ. ಪ್ರಾಂತ ಸರಕಾರಗಳು ಸ್ನೇಹಪರವಿದ್ದು ಸಹಾನುಭೂತಿ ತೋರಿದರೂ ಅವುಗಳಿಗೆ ಸಮಗ್ರ ಭಾರತದ ರಾಷ್ಟ್ರೀಯ ಯೋಜನೆಯಲ್ಲಿ ಆಸಕ್ತಿ ಇರಲಿಲ್ಲ. ನಮ್ಮ ಕೆಲಸವೆಲ್ಲ ಅವರಿಗೆ ದೂರದ ಕನಸಾಗಿ ಕಂಡಿತು. ಅವರ ಸಮಸ್ಯೆಗಳೇ, ತೊಂದರೆಗಳೇ ಅವರಿಗೆ ಬೇಕಾದಷ್ಟು ಇದ್ದವು. ಕಾಂಗ್ರೆಸ್ಸಿನ ತೀರ್ಮಾನದಂತೆಯೇ ಸಮಿತಿಯು ರಚನೆಯಾಗಿದ್ದರೂ ಕಾಂಗ್ರೆಸ್ಸಿನ ಕೆಲವು ಪ್ರಮುಖ ವ್ಯಕ್ತಿಗಳಿಗೆ ಅದು ಬೇಡದ ಮಗುವಾಗಿತ್ತು. ಹೇಗೆ ಬೆಳೆದು ತನ್ನ ಮುಂದಿನ ಕಾಠ್ಯ ರೂಪಿಸುತ್ತದೆ ನೋಡೋಣ ಎಂದು ಅನುಮಾನಪಟ್ಟಿದ್ದರು. ದೊಡ್ಡ ವ್ಯಾಪಾರಸ್ಥರೂ ಸಂಶಯಾತ್ಮಕ ದೃಷ್ಟಿಯಿಂದ ನೋಡಿ ಟೀಕೆ ಮಾಡುತ್ತಿದ್ದರು. ಆದರೆ ಪ್ರಾಯಶಃ ಹೊರಗೆ ಇರುವುದಕ್ಕಿಂತ ಸಮಿತಿಯ ಒಳಗೆ ಇದ್ದು ತಮ್ಮ ಹಿತರಕ್ಷಣೆ ಮಾಡಿಕೊಳ್ಳುವುದು ಮೇಲೆಂದು ಬಂದಿದ್ದರು.

ಸಮಾಜದ ಆರ್ಥಿಕ ರಚನೆಯಲ್ಲಿ ಪರಿಣಾಮಕಾರಿಯಾದ ಬದಲಾವಣೆಗಳಾಗಬೇಕಾದರೆ ಶಕ್ತಿಯುತವೂ, ಲೋಕಪ್ರಿಯವೂ ಆದ ಸ್ವತಂತ್ರ ರಾಷ್ಟ್ರೀಯ ಸರಕಾರ ಇದ್ದರೆ ಮಾತ್ರ ಸಮಗ್ರ ರಾಷ್ಟ್ರೀಯ ಯೋಜನೆ ಸಾಧ್ಯವೆಂದು ಸ್ಪಷ್ಟವಾಯಿತು. ಆದ್ದರಿಂದ ರಾಷ್ಟ್ರದ ಸ್ವಾತಂತ್ರ ಸಾಧನೆ ಮತ್ತು ಪರದಾಸ್ಯದಿಂದ ಬಿಡುಗಡೆ ಎಲ್ಲ ಯೋಜನೆಗೆ ಮುಂಚೆ ಅಗತ್ಯವೆನಿಸಿತು. ನಮ್ಮ ಕೆಳಮಟ್ಟದ ಸಾಮಾಜಿಕ ಜೀವನ ಪದ್ಧತಿಗಳು, ಸಂಪ್ರದಾಯಶರಣ ದೃಷ್ಟಿ, ಮೊದಲಾಗಿ ಇನ್ನೂ ಅನೇಕ ತೊಂದರೆಗಳಿದ್ದವು. ಎಂದಿದ್ದರೂ ಅವುಗಳನ್ನು ಎದುರಿಸಬೇಕಾಗಿತ್ತು. ಯೋಜನೆ ಏನಿದ್ದರೂ ವರ್ತಮಾನ ಕಾಲಕ್ಕಲ್ಲ, ಅನಿರ್ದಿಷ್ಟ ಭವಿಷ್ಯ ಕಾಲಕ್ಕೆ ಆದ್ದರಿಂದ ಅದರಲ್ಲಿ ಒಂದು ಅನಿಶ್ಚಿತ ನೋಟವಿತ್ತು. ಆದರೂ ಪ್ರಸಕ್ತ ಕಾಲದ ಆಧಾರದ ಮೇಲೆಯೇ ಅದನ್ನು ಯೋಚಿಸಬೇಕು ಮತ್ತು ಆ ಭವಿಷ್ಯಕಾಲವೂ ನಮಗೆ ದೂರ ಎನಿಸಲಿಲ್ಲ. ಇರುವ ವಿಷಯ ಸಂಗ್ರಹಮಾಡಿ, ಸರಿಯಾಗಿ ಅನುಗೊಳಿಸಿ ಯೋಜನೆಯ ರೂಪು ರೇಖೆ ಸಿದ್ಧಗೊಳಿಸಿದರೆ ಮುಂದಿನ ನಿಜವಾದ ಕಾರ್ಯಶೀಲ ಯೋಜನೆಯ ತಯಾರಿಕೆಗೆ ಸಿದ್ದತೆಮಾಡಿದ್ದಂತೆ ಆಗುವುದೆಂದೂ ಈ ಮಧ್ಯೆ ಪ್ರಾಂತ ಸರಕಾರಗಳು ಮತ್ತು ಸಂಸ್ಥಾನಗಳು ಯಾವ ರೀತಿ ಮುಂದುವರಿದು ತಮ್ಮ ಪ್ರಕೃತಿದತ್ತ ಸಂಪತ್ತನ್ನು ಅಭಿವೃದ್ಧಿಗೊಳಿಸಬಹುದೆಂದು ಸಲಹೆ ಮಾಡಬಹುದೆಂದೂ ಯೋಚಿಸಿದೆವು. ಯೋಜನೆ ರೂಪಿಸಲು ಯತ್ನಿಸಿದ್ದೂ, ರಾಷ್ಟ್ರದ ವಿವಿಧ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಯಾವ ರೀತಿ ಒಂದಕ್ಕೊಂದು ಹೊಂದಿಕೊಳ್ಳುತ್ತವೆ ಎಂದು ಯೋಚಿಸಿದ್ದೂ ನಮಗೂ ಮತ್ತು ಸಾರ್ವಜನಿಕರಿಗೂ ಒಂದು ಉತ್ತಮ ಶಿಕ್ಷಣವಾಯಿತು. ಜನರು ತಮ್ಮ ಯೋಚನೆ ಮತ್ತು ಕಾರ್ಯನೀತಿಯಲ್ಲಿ ಹಳೆಯ