ಪುಟ:ಭಾರತ ದರ್ಶನ.djvu/೩೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೬೬

ಭಾರತ ದರ್ಶನ

ನಿಜವಾದರೂ ಅದರ ಹಿಂದೆ ಇನ್ನೂ ದೊಡ್ಡ ಉದ್ದೇಶವಿತ್ತು. ಬಡರೈತನೂ ಒಬ್ಬ ಮನುಷ್ಯ ಎಂದು ಭಾರತವು ಯೋಚಿಸುವುದಕ್ಕೂ ಕೆಲವು ನಗರಗಳ ಶೃಂಗಾರದ ಬೆಡಗುಬಿಟ್ಟರೆ ಉಳಿದುದೆಲ್ಲ ಸಂಕಟ ಮತ್ತು ಬಡತನದ ಬಾಳು ಎಂದು ಅರಿಯುವುದಕ್ಕೂ ಭಾರತದ ಸ್ವಾತಂತ್ರದ ಮತ್ತು ಪ್ರಗತಿಯ ನಿಜವಾದ ಒರೆಗಲ್ಲು ಇನ್ನಿಷ್ಟು ಜನರು ಕೋಟ್ಯಾಧೀಶ್ವರರನ್ನೂ, ಪ್ರಸಿದ್ದ ನ್ಯಾಯವಾದಿಗಳನ್ನೂ ಹೆಚ್ಚಿಸುವುದರಲ್ಲಿ ಅಲ್ಲ ; ಶಾಸನ ಸಭೆಗಳನ್ನು ನಿರ್ಮಿಸುವುದರಲ್ಲಿ ಅಲ್ಲ ; ಆದರೆ ರೈತನ ಜೀವನಮಟ್ಟ ಹೆಚ್ಚಿಸಿ ಅವನ ಪರಿಸ್ಥಿತಿ ಉತ್ತಮಗೊಳಿಸವುದರಲ್ಲಿ ಎಂಬ ಮೂಲ ಉದ್ದೇಶ ತಿಳಿದುಕೊಳ್ಳುವುದಕ್ಕೂ ಸಹಾಯವಾಯಿತು. ಬ್ರಿಟಿಷರು ಭಾರತದಲ್ಲಿ ಒಂದು ಹೊಸ ಜಾತಿಯನ್ನು ಸೃಷ್ಟಿಸಿದರು. ಜನತೆಯಿಂದ ದೂರವಾಗಿ ತನ್ನದೇ ಒಂದು ಪ್ರಪಂಚದಲ್ಲಿ ವಾಸಮಾಡುತ್ತಿದ್ದ ಇಂಗ್ಲಿಷ್ ಕಲಿತವರ ಜಾತಿ. ತನ್ನ ಅಸಮ್ಮತಿ ಸೂಚಿಸುವಾಗ ಸಹ ಬ್ರಿಟಿಷ್ ಅಧಿಕಾರಿಗಳ ಕಡೆಗೇ ನೋಡುತ್ತಿದ್ದರು. ಗಾಂಧೀಜಿ ಈ ಅಂತರವನ್ನು ಕಡಮೆಮಾಡಿ ಅವರ ದೃಷ್ಟಿಯನ್ನೂ ಅವರ ಜನತೆಯ ಕಡೆಗೆ ತಿರುಗಿಸಿದನು.

ಯಂತ್ರೋಪಕರಣಗಳ ಉಪಯೋಗದ ವಿಷಯದಲ್ಲಿ ಗಾಂಧಿಜಿಯ ಅಭಿಪ್ರಾಯವು ಕ್ರಮೇಣ ವ್ಯತ್ಯಾಸಗೊಳ್ಳುತ್ತಲಿತ್ತು. “ನಾನು ವಿರೋಧಿಸುವುದು ಯಂತ್ರದ ಮೋಹವನ್ನು, ಯಂತ್ರವನ್ನಲ್ಲ.” ಎಂದರು. “ಪ್ರತಿಯೊಂದು ಹಳ್ಳಿ ಮನೆಗೂ ವಿದ್ಯುಚ್ಛಕ್ತಿ ಒದಗಿಸುವುದಾದರೆ ಗ್ರಾಮಸ್ಥರು ತಮ್ಮ ಮುಟ್ಟು ಮತ್ತು ಕೈಕೆಲಸದ ಸಾಮಾನುಗಳನ್ನು ವಿದ್ಯುಚ್ಛಕ್ತಿಯ ಸಹಾಯದಿಂದ ನಡೆಸಲು ನನ್ನ ಅಡ್ಡಿ ಇಲ್ಲ, ಎಂದರು. ಇಂದು ನಾವು ಕಾಣುತ್ತಿರುವಂತೆ ದೊಡ್ಡ ದೊಡ್ಡ ಕಾರ್ಖಾನೆಗಳು ಐಶ್ವರ್ಯ ಮತ್ತು ಅಧಿಕಾರದ ಕೇಂದ್ರೀಕರಣಕ್ಕೆ ಸಹಾಯವಾಗುತ್ತವೆ. "ಕೆಲವರ ಕೈಯಲ್ಲಿ ಮಾತ್ರ ಅಧಿಕಾರ ಮತ್ತು ಐಶ್ವರ್ಯ ಕೇಂದ್ರೀಕೃತಮಾಡುವುದು ಮಹಾ ಅನ್ಯಾಯ ಮತ್ತು ಪಾಪ. ಈಗ ಯಂತ್ರಗಳ ಉಪಯೋಗವೆಲ್ಲ ಅದಕ್ಕಾಗಿ” ಎಂದರು. ರಾಷ್ಟ್ರದ ಸ್ವತ್ತಾಗಿ ನಡೆಸುವುದಾದರೆ, ಮತ್ತು ಮುಖ್ಯ ಗ್ರಾಮಕೈಗಾರಿಕೆಗಳ ಬೆಳವಣಿಗೆಗೆ ಅಡ್ಡ ಬಾರದಿದ್ದರೆ, ಅನೇಕ ದೊಡ್ಡ ಕೈಗಾರಿಕೆಗಳ ಮುಖ್ಯ ಸಣ್ಣ ಕೈಗಾರಿಕೆಗಳ ಮತ್ತು ಸಾರ್ವಜನಿಕೋಪಯುಕ್ತ ಕಾರ್ಯಗಳ ಅವಶ್ಯಕತೆಯನ್ನು ಒಪ್ಪಿಕೊಂಡರು. ಆರ್ಥಿಕ ಸಮಾನತೆಯ ಭದ್ರವಾದ ತಳಹದಿಯಮೇಲೆ ತಮ್ಮ ಪೂರ್ಣ ಕಾರ್ಯಕ್ರಮ ನಿರೂಪಿಸದಿದ್ದರೆ ಮರಳಿನಲ್ಲಿ ಮನೆ ಕಟ್ಟಿದಂತೆ ಎಂದು ತಮ್ಮ ಯೋಜನೆಯ ವಿಷಯ ನುಡಿದರು.

ಈ ರೀತಿ ಗ್ರಾಮೋದ್ಯೋಗಗಳ ಮತ್ತು ಸಣ್ಣ ಕೈಗಾರಿಕೆಗಳ ಉತ್ಸಾಹಗಳು ಮತ್ತು ಪ್ರೋತ್ಸಾಹಕರು ಸಹ ಕೆಲವು ದೊಡ್ಡ ಕೈಗಾರಿಕೆಗಳು ಅವಶ್ಯ ಮತ್ತು ಅನಿವಾರ ಎಂದು ಒಪ್ಪಿಕೊಳ್ಳುತ್ತಾರೆ; ಆದರೆ ಆದಷ್ಟು ಕಡಿಮೆ ಮಾಡಬೇಕೆನ್ನುತ್ತಾರೆ. ಅಂದರೆ ಎರಡು ಬಗೆಯ ವಸ್ತು ನಿರ್ಮಾಣ ಮತ್ತು ಆರ್ಥಿಕ ನೀತಿಯಲ್ಲಿ ಯಾವುದಕ್ಕೆ ಎಷ್ಟು ಪ್ರಾಮುಖ್ಯತೆ ಕೊಡಬೇಕು. ಮತ್ತು ಎಷ್ಟರಮಟ್ಟಿಗೆ ಒಂದನ್ನೊಂದು ಅವಲಂಬಿಸಿ ಇರಬೇಕು ಎಂಬುದೇ ಮುಖ್ಯ ಪ್ರಶ್ನೆ, ಇಂದಿನ ಪ್ರಪಂಚದ ಪರಿಸ್ಥಿತಿಯಲ್ಲಿ ಯಾವ ದೇಶವೇ ಆಗಲಿ ಕೈಗಾರಿಕೋದ್ಯಮದಲ್ಲಿ ಪೂರ್ಣ ಪ್ರಗತಿ ಹೊಂದಿ ಮತ್ತು ತನ್ನ ಪ್ರಕೃತಿದತ್ತ ಶಕ್ತಿಸಾಧನ ಸಂಪತ್ತನ್ನು ವಿಶೇಷ ಅಭಿವೃದ್ಧಿ ಪಡಿಸಿಕೊಳ್ಳದೆ ಇಂದಿನ ಅಂತರ ರಾಷ್ಟ್ರೀಯ ಪರಸ್ಪರಾವಲಂಬನೆಯಸಣ್ಣ ಚೌಕಟ್ಟಿನಲ್ಲಿ ರಾಜಕೀಯ ಮತ್ತು ಆರ್ಥಿಕ ಸ್ವಾತಂತ್ರ ಅನುಭವಿಸಲು ಅಸಾಧ್ಯವೆಂಬುದು ಸ್ಪಷ್ಟವಿದೆ. ಅಲ್ಲದೆ ಜೀವನದ ಪ್ರತಿಯೊಂದು ಅಂಗದಲ್ಲೂ ಜೀವನ ಮಟ್ಟದ ಉನ್ನತಿ ಅಥವ ಬಡತನದ ನಿವಾರಣೆ ಆಗಬೇಕೆಂದರೆ ಆಧುನಿಕ ಸಲಕರಣೆಗಳ ಸಹಾಯವಿಲ್ಲದೆ ಸಾಧ್ಯವಿಲ್ಲ. ಕೈಗಾರಿಕಾ ಪ್ರಗತಿ ಇಲ್ಲದ ದೇಶದಿಂದ ಪ್ರಪಂಚದ ಸಮತೋಲನ ಪದೇ ಪದೇ ಕೆಡುವುದಲ್ಲದೆ ಮುಂದುವರಿದ ಇತರ ರಾಷ್ಟ್ರಗಳ ದುರಾಶೆಯಿಂದ ಸುಲಿಗೆಯ ಮನೋಭಾವ ಹೆಚ್ಚುತ್ತದೆ. ರಾಜಕೀಯ ಸ್ವಾತಂತ್ರವಿದ್ದರೂ ಅದು ನೆಪಮಾತ್ರವಿದ್ದು ಇತರ ರಾಷ್ಟ್ರಗಳ ಆರ್ಥಿಕ ದಾಸ್ಯದಲ್ಲಿ ನರಳಬೇಕಾಗುತ್ತದೆ. ರಾಷ್ಟ್ರ ಜೀವನದ ವ್ಯಕ್ತಿತ್ವ ರಕ್ಷಣೆಗೆಂದು ಆರಂಭಿಸಿದ ಗ್ರಾಮ ಕೈಗಾರಿಕೆಗಳು ಸಹ ಈ ಆರ್ಥಿಕ ದಾಸ್ಯಕ್ಕೆ ಬಲಿಯಾಗುತ್ತವೆ. ಆದ್ದರಿಂದ ಕೇವಲ ಗ್ರಾಮ ಕೈಗಾರಿಕೆ ಮತ್ತು ಗೃಹಕೈಗಾರಿಕೆಗಳನ್ನೇ ನಂಬಿ ದೇಶದ ಆರ್ಥಿಕ ನೀತಿ