ಪುಟ:ಭಾರತ ದರ್ಶನ.djvu/೩೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೊನೆಯ ಅಂಕ ೩

೩೮೯

ಗೌರ್ನರನ ಏಕಾಧಿಪತ್ಯಕ್ಕೆ ಹೋಯಿತು. ವಾಯವ್ಯ ಪ್ರಾಂತ್ಯದಲ್ಲಿ ಬಹುಮತವಿಲ್ಲದ ಮಂತ್ರಿಮಂಡಲ ರಚಿಸಿದ್ದರಿಂದ ಶಾಸನ ಸಭೆಯ ಅಧಿವೇಶನವನ್ನೇ ಕರೆಯಲಿಲ್ಲ. ಪಂಜಾಬ ಮತ್ತು ಸಿಂಧ ಪ್ರಾಂತಗಳಲ್ಲಿ ಸೆರೆಮನೆಯಿಂದ ಹೊರಗಿದ್ದ ಕಾಂಗ್ರೆಸ್ ಸದಸ್ಯರು ಶಾಸನ ಸಭೆಗಳಿಗೆ ಹೋಗದಂತೆ ಅಥವ ಯಾವ ಸಾರ್ವಜನಿಕ ಕಾರ್ಯಗಳಲ್ಲೂ ಭಾಗವಹಿಸದಂತೆ ಅವರ ಮೇಲೆ ವಿಶೇಷ ನಿರ್ಬಂಧಕ ಆಜ್ಞೆ ಹೇರಲಾಗಿತ್ತು. ೧೯೪೫ರ ಆದಿಭಾಗದಲ್ಲಿ ವಾಯವ್ಯಪ್ರಾಂತ್ಯದ ಹಣಕಾಸಿನ ಅಧಿವೇಶನ ಸೇರಿದೊಡನೆ ಮಂತ್ರಿಮಂಡಲದ ಮೇಲೆ ಅವಿಶ್ವಾಸದ ಸೂಚನೆ ಬಹುಮತದಿಂದ ಅಂಗೀಕೃತವಾಗಿ ಡಾ. ರ್ಖಾ. ಸಾಹೇಬರ ನೇತೃತ್ವದಲ್ಲಿ ಕಾಂಗ್ರೆಸ್ ಮಂತ್ರಿಮಂಡಲ ಏರ್ಪಟ್ಟಿತು.

೪. ಮತ್ತೊಮ್ಮೆ ಕಾಂಗ್ರೆಸ್ ಸಹಕಾರ ಹಸ್ತ : ಬ್ರಿಟಿಷ್ ಸರ್ಕಾರದ ನಕಾರ :
ವಿನ್ಸ್ಟನ್ ಚರ್ಚಿಲ್ :

ಎಂಟು ಪ್ರಾಂತಗಳಲ್ಲಿ ನಿರಂಕುಶಾಧಿಕಾರದ ಏಕಾಧಿಪತ್ಯವೆಂದರೆ ಮಂತ್ರಿಮಂಡಲದ ಬದಲಾವಣೆಯಲ್ಲಿ ಆಗುವಂತೆ ಮೇಲಿನ ಅಧಿಕಾರವರ್ಗದ ಬದಲಾವಣೆ ಮಾತ್ರ ಎಂದಲ್ಲ. ಒಟ್ಟು ರಾಜ್ಯಾಡಳಿತದ ಭಾವನೆ ಮತ್ತು ರೀತಿ ನೀತಿಗಳಲ್ಲೇ ಪ್ರಬಲ ಪರಿಣಾಮಕಾರಕ ವ್ಯತ್ಯಾಸಗಳಾದವು. ಕಾರ್ಯಾಂಗ ಮತ್ತು ಅಧಿಕಾರಿವರ್ಗದ ಮೇಲೆ ಒಂದು ಅಂಕುಶದಂತೆ ಇದ್ದ ಶಾಸನ ಸಭೆಗಳು ಮತ್ತು ಇತರ ಸಾರ್ವಜನಿಕ ತಡೆಗಳು ನಿರ್ನಾಮವಾದವು. ಗೌರ್ನರ್ ಮೊದಲುಗೊಂಡು ಸಿವಿಲ್ ಸರ್ವಿಸ್ ಮತ್ತು ಪೋಲೀಸ್ ಅಧಿಕಾರಿಗಳವರೆಗೆ ಎಲ್ಲರೂ ಸಾರ್ವಜನಿಕರನ್ನು ತೃಣೀಕರಿಸಿ ನೋಡತೊಡಗಿದರು. ಕಾಂಗ್ರೆಸ್ ಸರಕಾರಗಳು ಅಧಿಕಾರಕ್ಕೆ ಬರುವ ಮುಂಚೆಗಿಂತ ಈಗ ಪರಿಸ್ಥಿತಿ ಇನ್ನೂ ಕೀಳಾಯಿತು. ವಿಧಾನ ದೃಷ್ಟಿಯಿಂದ ಹತ್ತೊಂಭತ್ತನೆಯ ಶತಮಾನದ ನಿರಂಕುಶಾಧಿಕಾರಕ್ಕೆ ಹಿಂದಿರುಗದಂತಾಯಿತು. ಕಾರ್ಯತಃ ಪರಿಸ್ಥಿತಿ ಇನ್ನೂ ಕಠಿನವಾಯಿತು. ಹಿಂದಿನ ವಿಶ್ವಾಸ ಮತ್ತು ತಂದೆಮಕ್ಕಳೆಂಬ ಭಾವನೆ ಮಾಯವಾಗಿತ್ತು. ತಾನಾಗಿ ಕುಸಿದು ಬೀಳುತ್ತಿರುವ ಅಧಿಕಾರ ದರ್ಪದ ಭಯ ಮತ್ತು ಆಕ್ರೋಶಗಳು ಬ್ರಿಟಿಷ್ ಅಧಿಕಾರಿ ವರ್ಗವನ್ನು ಕವಿದಿದ್ದವು. ಎರಡು ವರ್ಷ ಮೂರು ತಿಂಗಳು ಕಾಂಗ್ರೆಸ್ ಸರಕಾರ ಸಹಿಸಿ ಕಷ್ಟವಾಗಿತ್ತು. ಮಾತನಾಡಿದರೆ ತಾವು ಸೆರೆಮನೆಗೆ ಅಟ್ಟುತ್ತಿದ್ದವರಿಂದ ಆಡಳಿತ ನೀತಿ ಹೇಳಿಸಿಕೊಂಡು ಅವರ ಆಜ್ಞಾಧಾರಕರಾಗಬೇಕಾಗಿ ಬಂದುದು ಅವರ ಮೈಗೆ ಒಗ್ಗಿರಲಿಲ್ಲ. ಹಿಂದಿನ ದರ್ಪ ಪ್ರದರ್ಶಿಸುವುದು ಮಾತ್ರವಲ್ಲದೆ ಈ ತುಂಟರಿಗೆ ತಕ್ಕ ಬುದ್ಧಿಯನ್ನೂ ಕಲಿಸಬೇಕಾಗಿತ್ತು. ಪ್ರಜಾಪ್ರಭುತ್ವ ವಿಷಯದಲ್ಲಿ ಆಸಕ್ತಿ ತೋರಿಸಿದವನು ಹೊಲದ ರೈತ, ಕಾರ್ಖಾನೆಯ ಕೂಲಿ, ಉದ್ಯೋಗಿ, ವ್ಯಾಪಾರಿ, ಕೈಗಾರಿಕೋದ್ಯಮಿ, ಯುವಕ ಯುವತಿ, ಕೆಳದರ್ಜೆಯ ನೌಕರ, ಉನ್ನತ ಭಾರತೀಯ ಅಧಿಕಾರಿ, ಯಾರೇ ಇರಲಿ ಅವರೆಲ್ಲರಿಗೆ ಬ್ರಿಟಿಷ್ ಆಡಳಿತ ದರ್ಪ ಇನ್ನೂ ಜೀವಂತ ಇದೆ, ಮರೆಯುವಂತಿಲ್ಲ ಎಂದು ತೋರಿಸಬೇಕಾಗಿತ್ತು. ಅವರೆಲ್ಲರ ಭವಿಷ್ಯ ಮತ್ತು ಲಾಭನಷ್ಟ ನಿರ್ಧರಿಸುವವರು ಬ್ರಿಟಿಷ್ ಆಡಳಿತಗಾರರು, ನಾಲ್ಕು ದಿನ ಬಂದು ಹೋದ ಈ ಕಾಂಗ್ರೆಸ್ ಭಿಕಾರಿಗಳಲ್ಲ ಎಂದು ತೋರಿಸಬೇಕಾಗಿತ್ತು. ಮಂತ್ರಿಗಳ ಕೈ ಕೆಳಗೆ ಕಾರ್ಯದರ್ಶಿ ಗಳಾಗಿದ್ದವರು ಈಗ ಗೌರ್ನರ್ ಕೆಳಗೆ ಆಡಳಿತಗಾರರಾಗಿ ಹಿಂದಿನ ಅಧಿಕಾರ ಠೀವಿಯಿಂದ ಮೆರೆಯಲಾರಂಭಿಸಿದರು. ಜಿಲ್ಲಾಧಿಕಾರಿಗಳು ತಮ್ಮ ತಮ್ಮ ಜಿಲ್ಲೆಗಳ ಪಾಳೆಯಗಾರರಾದರು. ತಪ್ಪು ಮಾಡಿದರೂ ಉನ್ನತ ಅಧಿಕಾರಿಗಳು ತಮ್ಮನ್ನು ಕೈ ಬಿಡದೆ ಬೆನ್ನು ತಟ್ಟುವರೆಂದು ಪೋಲಿಸರು ತಮ್ಮ ಹಳೆಯ ದಾರಿ ಹಿಡಿದರು. ಯುದ್ಧದ ಕಾರ್ಗತ್ತಲೆಯ ಮಬ್ಬು ಎಲ್ಲವನ್ನೂ ಮುಸುಕಿತು.

ಕಾಂಗ್ರೆಸ್ ಸರಕಾರ ಟೀಕೆ ಮಾಡುತ್ತಿದ್ದವರು ಸಹ ಈ ಪರಿಸ್ಥಿತಿಯಿಂದ ಭಯಗೊಂಡರು. ಅವರಿಗೆ ಈಗ ಕಾಂಗ್ರೆಸ್ ಸರಕಾರಗಳ ಗುಣವಿಶೇಷಗಳ ಅರಿವುಬಂದು ರಾಜಿನಾಮೆ ಕೊಡಬಾರದಾಗಿತ್ತೆಂದರು. ಏನೇ ಆಗಲಿ ಅಧಿಕಾರದಲ್ಲಿ ಇರಬೇಕಾಗಿತ್ತೆಂದರು, ಮುಸ್ಲಿಂ ಲೀಗ್ ಸದಸ್ಯರು ಸಹ ಭಯಗ್ರಸ್ತರಾದರು.