ಪುಟ:ಭಾರತ ದರ್ಶನ.djvu/೪೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೮೪

ಭಾರತ ದರ್ಶನ

ಕೊಡಲಾಗುತ್ತಿದೆ. ರಷ್ಯದಿಂದ ಪೂರ್ಣಭಿನ್ನ ಪರಿಸ್ಥಿತಿ ಇರುವ ಭಾರತಕ್ಕೆ ಅದು ಅನ್ವಯಿಸುವುದಿಲ್ಲ. ಆ ಹಕ್ಕಿಗೆ ಯಾವ ವ್ಯವಹಾರಿಕ ಬೆಲೆಯೂ ಇಲ್ಲ. ಭಾರತದ ಇಂದಿನ ಭಾವೋದ್ರಿಕ್ತ ವಾತಾವರಣದಲ್ಲಿ ಬಲಾತ್ಕಾರವಿಲ್ಲ. ಬಿಡುಗಡೆಗೆ ಅವಕಾಶವಿದೆ ಎಂಬ ಭರವಸೆ ಬಹಳ ಅವಶ್ಯವಿರುವುದರಿಂದ ಭವಿಷ್ಯದ ದೃಷ್ಟಿಯಿಂದ ಅದಕ್ಕೆ ಒಪ್ಪಿದರೂ ಒಪ್ಪಬಹುದು. ಒಂದು ರೀತಿ ಕಾಂಗ್ರೆಸ್ ಆಗಲೇ ಈ ತತ್ವ ಒಪ್ಪಿದೆ, ಆದರೆ ಈ ಹಕ್ಕು ಕೇಳುವ ಮುಂಚೆ ಈ ಮೊದಲೇ ತಿಳಿಸಿದ ಎಲ್ಲ ಸಾಮಾನ್ಯ ಸಮಸ್ಯೆಗಳನ್ನು ಮುಂಜಾಗ್ರತೆಯಿಂದ ಯೋಚಿಸಿ ನಿರ್ಧಾರಕ್ಕೆ ಬರುವ ಅವಶ್ಯಕತೆ ಇದೆ. ಅಲ್ಲದೆ ವಿಭಜನೆಯಲ್ಲಿ, ಪಾಲಿನಲ್ಲಿ ಆರಂಭದಲ್ಲಿ ಸ್ವಾತಂತ್ರ್ಯದ ಸಸಿ ಕಂದಿಸುವ ಮತ್ತು ಸ್ವತಂತ್ರ ರಾಷ್ಟ್ರೀಯ ರಾಜ್ಯ ಸ್ಥಾಪನೆಗೆ ಅಡ್ಡಿ ಬರುವ ವಿನಾಶಕಾರಕ ಘೋರ ಅಪಾಯವಿದೆ. ಸಹಿಸಲಸಾಧ್ಯವಾದ ಸಮಸ್ಯೆಗಳು ಉದ್ಭವಿಸಿ ಮುಖ್ಯ ಪ್ರಶ್ನೆಯನ್ನು ಹಿಂದಕ್ಕೆ ತಳ್ಳುತ್ತವೆ. ಎಲ್ಲೆಲ್ಲೂ ವಿಚ್ಛೇದನ ಭಾವನೆ ಹರಡುತ್ತದೆ. ಒಟ್ಟಿಗೆ ಒಗ್ಗಟ್ಟಿನಿಂದ ಬಾಳಲು ಸಿದ್ಧವಿದ್ದ ಇತರ ಪಂಗಡಗಳು ಸಹ ತಮಗೂ ಪ್ರತ್ಯೇಕ ರಾಷ್ಟ್ರಗಳನ್ನೋ ಅಥವ ಇತರರ ಹಕ್ಕು ಮೊಟಕುಮಾಡಿ ವಿಶೇಷ ಹಕ್ಕು ಕೊಡಿರೆಂದೋ ಕೇಳುತ್ತಾರೆ. ದೇಶೀಯ ಸಂಸ್ಥಾನಗಳ ಸಮಸ್ಯೆ ಇನ್ನೂ ಕಠಿನವಾಗುತ್ತದೆ; ಅವುಗಳಿಗೆ ಹೊಸ ಜೀವದಾನ ದೊರೆಯುತ್ತದೆ. ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳ ಪರಿಹಾರ ಇನ್ನೂ ಕಠಿನವಾಗುತ್ತದೆ. ಈ ಎಲ್ಲ ಪ್ರಳಯಾಂತಕ ಪ್ರಶ್ನೆಗಳ ಪರಿಹಾರವಾಗಿ ಒಂದು ಸ್ವತಂತ್ರ ರಾಷ್ಟ್ರ ಬದುಕಬಹುದೆಂದು ಊಹಿಸುವುದು ಸಹ ಕಷ್ಟ; ಬದುಕಿದರೂ ಅನೇಕ ಅಪರಿ ಹಾರ ಸಮಸ್ಯೆಗಳ, ವೈಪರೀತ್ಯಗಳ ಭಾರದಿಂದ ಕುಸಿದ ಒಂದು ಕರುಣಾಜನಕ ವ್ಯಂಗ್ಯಚಿತ್ರವಾಗುತ್ತದೆ.

ಭಾರತದಿಂದ ಪ್ರತ್ಯೇಕವಾಗುವ ಅಧಿಕಾರ ಉಪಯೋಗಿಸುವ ಮುಂಚೆ ನ್ಯಾಯವಾಗಿ ವಿಧಾಯಕವಾಗಿ, ಅಧಿಕಾರ ನಡೆಸುವ, ಸ್ವತಂತ್ರ ಭಾರತ ಮೊದಲು ಅಸ್ತಿತ್ವದಲ್ಲಿ ಬರಬೇಕು, ಪರಕೀಯ ಶಕ್ತಿಗಳು ಇಲ್ಲಿಂದ ಕಾಲು ಕಿತ್ತ ಮೇಲೆ, ನಿಜವಾದ ಸಮಸ್ಯೆಗಳು ದೇಶದ ಎದುರು ನಿಂತಾಗ ಇಂದಿನ ಭಾವೋನ್ಮಾದಕ್ಕೆ ಬಲಿಬಿದ್ದು ಮುಂದೆ ವ್ಯಸನಕರ ದುಷ್ಪರಿಣಾಮಗಳಿಗೆ ಒಳಗಾಗದಂತೆ ವಾಸ್ತವಿಕ ದೃಷ್ಟಿಯಿಂದ ನಿಷ್ಪಕ್ಷಪಾತ ಬುದ್ಧಿಯಿಂದ ಆ ಪ್ರಶ್ನೆ ಯೋಚಿಸಲು ಅವಕಾಶವಾಗಬಹುದು. ಆದ್ದರಿಂದ ಸ್ವತಂತ್ರ ಭಾರತದ ಸ್ಥಾಪನೆಯ ನಂತರ ಹತ್ತು ವರ್ಷಗಳ ಒಂದು ಮಿತಿ ಕಲ್ಪಿಸಬಹುದು. ಅನಂತರ ವಿಧಾಯಕ ರೀತಿಯಲ್ಲಿ ಸಂಬಂಧಪಟ್ಟ ಪ್ರದೇಶದ ಜನರು ಸ್ಪಷ್ಟ ಇಷ್ಟವಿದ್ದರೆ ಆ ಭಾಗ ಪ್ರತ್ಯೇಕವಾಗಬಹುದು.

ಭಾರತದ ಇಂದಿನ ಪರಿಸ್ಥಿತಿಯಿಂದ ನಮ್ಮಲ್ಲಿ ಅನೇಕರಿಗೆ ಬಹು ಬೇಸರವಾಗಿದೆ. ಏನಾದರೂ ಒಂದು ಮಾರ್ಗ ಕಂಡುಹಿಡಿಯಲು ಕಾತರರಿದ್ದೇವೆ. ಇದುವರೆಗೆ ಕತ್ತು ಹಿಸುಕಿ ಉಸುರುಗಟ್ಟಿರುವ ಸ್ಥಿತಿಯಿಂದ ಸ್ವಲ್ಪ ಉಸಿರಾಡಲು ಅವಕಾಶ ಸಿಕ್ಕಿತೆಂದು ಆಸೆಪಟ್ಟು, ಕೈಗೆಸಿಕ್ಕ ಯಾವ ಹುಲ್ಲುಕಡ್ಡಿ ಯಾದರೂ ಹಿಡಿದು ಕೊಳ್ಳೋಣವೆಂದು ಕೆಲವರು ಸಿದ್ಧರಿದ್ದೇವೆ. ಅದು ಸ್ವಾಭಾವಿಕ ಸರಿ. ಆದರೂ ಕೋಟ್ಯಂತರ ಜನರಹಿತ ಮತ್ತು ಪ್ರಪಂಚ ಶಾಂತಿಯ ಭವಿಷ್ಯದ ಪ್ರಶ್ನೆಗಳಿಗೆ ಸಂಬಂಧಿಸಿದ ಈ ಜೀವ ಸಾವಿನ ಪ್ರಶ್ನೆಗಳನ್ನು ಉನ್ಮಾದಗ್ರಸ್ತ ಮನಸ್ಸಿನಿಂದ, ಜೂಜುಗಾರಿಕೆ ದೃಷ್ಟಿಯಿಂದ ಬಿಡಿಸಲೆತ್ನಿ ಸುವುದರಲ್ಲಿ ಬಹಳ ಅಪಾಯವಿದೆ. ಭಾರತದಲ್ಲಿ ನಾವು ಸದಾ ವಿನಾಶದ ಅಂಚಿನಲ್ಲಿ ವಾಸಮಾಡುತ್ತಿದ್ದೇವೆ. ಕಳೆದ ವರ್ಷ ಬಂಗಾಲ ಮತ್ತು ಇತರ ಕಡೆಗಳಲ್ಲಿ ಆದಂತೆ ಅನೇಕಬಾರಿ ವಿಪತ್ತಿಗೆ ಈಡಾಗಿದ್ದೇವೆ. ಬಂಗಾಲ ಕಾಮ ಮತ್ತು ಅದರ ಪರಿಣಾಮಗಳು ಹಿಡಿತಕ್ಕೆ ತರಲಾಗದಿದ್ದ ಅಥವ ಮುನ್ನೆಚ್ಚರಿಕೆಯಿಂದ ನಿವಾರಿಸಲಾಗದಿದ್ದ ದುರಂತ ಆಕಸ್ಮಿಕಗಳಲ್ಲಿ ಶತಮಾನಗಳಿಂದ ಅದರ ಜೀವ ಸತ್ವವನ್ನೇ ಕ್ಷೀಣಿಸುತ್ತಿರುವ ಪ್ರಬಲ ಜನ್ಮಾಂತರ ಅಂತರ್ಗತ ರೋಗದಿಂದ ನರಳುತ್ತಿರುವ ಭಾರತದ ಭೀಕರ ವಾಸ್ತವ ಚಿತ್ರ. ಆ ರೋಗ ನಿರ್ಮೂಲನ ಚಿಕಿತ್ಸೆಗೆ ನಮ್ಮ ಸರ್ವಶಕ್ತಿ ಉಪಯೋಗಿಸದಿದ್ದರೆ ಆ ರೋಗ ಇನ್ನೂ ಉಲ್ಬಣಿಸಿ ಇನ್ನೂ ವಿಪತ್ತಾರಕ ಸ್ವರೂಪ ತಾಳಬಹುದು. ವಿಭಜಿತ ಭಾರತದ ಪ್ರತಿಯೊಂದು ಭಾಗವೂ ತನ್ನ ಪಾಡು ತಾನು ನೋಡಿಕೊಂಡು ಇತರ ಭಾಗಗಳೊಂದಿಗೆ ಸಹಕರಿಸದೆ ಅಲಕ್ಷ್ಯಮಾಡಿದರೆ ಈ ರೋಗ ಇನ್ನೂ ವಿಷಮಿಸಿ ನಿರಾಶೆಯ ನಿಸ್ಸಹಾಯಕತೆಯ ಗೋಳಿನ ಪರಂಪರೆ ಅನುಭವಿಸಬೇಕಾಗುತ್ತದೆ. ಈಗಾಗಲೇ ಕಾಲ ಮಿಂಚಿ ಹೋಗಿದೆ, ಇನ್ನಾದರೂ ಮುಂದುವರಿಯಬೇಕು. ಬಂಗಾಲ ಕ್ಷಾಮದಿಂದ ಸಹ ನಮಗೆ