ಚಟುವಟಿಕೆಗಳಿಗೂ ಇದು ಅನ್ವಯಿಸುತ್ತದೆ. ಸಮಗ್ರ ಭಾರತದಲ್ಲಿ ಈ ಎಲ್ಲ ಪ್ರಗತಿಗೂ ಬೇಕಾದಷ್ಟು ಅವಕಾಶವಿದೆ. ಆ ಅವಕಾಶ ವಿಭಜಿತ ಭಾರತದಲ್ಲಿ ದೊರೆಯಲಾರದು.
ಭಾರತವು ಒಂದು ಸ್ವತಂತ್ರ ಪ್ರಗತಿಪರ ರಾಷ್ಟ್ರವಾಗಿ ಉಳಿಯಬೇಕಾದರೆ ಪಾಕಿಸ್ತಾನ ಬರಲಿ, ಬಾರದೆ ಇರಲಿ ಅಖಿಲಭಾರತದ ದೃಷ್ಟಿಯಿಂದ ಕೆಲವು ಮುಖ್ಯ ಮೂಲ ಕೆಲಸ ಆಗಬೇಕಾದ್ದು ಅತ್ಯವಶ್ಯಕ. ಇಲ್ಲದಿದ್ದರೆ ಛಿದ್ರಗೊಂಡು, ಕ್ಷೀಣಿಸಿ ಕೊಳೆತು, ಪಾಚಿಗಟ್ಟಿ, ಭಾರತದ ಮತ್ತು ವಿಭಜಿತ ಭಾಗಗಳ ರಾಜಕೀಯ ಮತ್ತು ಆರ್ಥಿಕ ಸ್ವಾತಂತ್ರ್ಯ ಕಳೆದುಕೊಳ್ಳುವುದೇ ಉಳಿದ ಮಾರ್ಗ, ಒಬ್ಬ ಸುಪ್ರಸಿದ್ದ ರಾಜಕಾರಣಿ ಹೇಳಿರುವಂತೆ “ಭಾರತಕ್ಕೆ ಯುಗಧರ್ಮ ತೋರುವುದು ಎರಡು ಪರಸ್ಪರ ತೀರ ವಿರುದ್ಧ ಸ್ಪಷ್ಟ ದಾರಿಗಳು, ಒಂದು ಐಕಮತ್ಯ, ಮತ್ತು ಸ್ವಾತಂತ್ರ್ಯ, ಇನ್ನೊಂದು ವಿಭಜನೆ ಮತ್ತು ದಾಸ್ಯ.” ಆ ಐಕಮತ್ಯ ಯಾವರೀತಿ ಇರಬೇಕು, ಒಕ್ಕೂಟ ಎನ್ನೋಣವೇ? ಬೇರೆ ಏನಾದರೂ ಹೆಸರಿನಿಂದ ಕರೆಯಬೇಕೆ ?- ಹೆಸರುಗಳಿಗೆ ತಮ್ಮದೇ ಒಂದು ಪ್ರಾಧಾನ್ಯತೆ ಮತ್ತು ಮೌಲ್ಯ ಇದ್ದರೂ ಅದೇ ಮುಖ್ಯವಲ್ಲ. ಮುಖ್ಯ ವಿಷಯವೆಂದರೆ ಕೆಲವು ಬೇರೆಬೇರೆ ಕಾಲ್ಯಾಚರಣೆಗಳು ಅಖಿಲಭಾರತದ ದೃಷ್ಟಿಯಿಂದ ಒಟ್ಟಿನಲ್ಲಿ ನಡೆಯಬೇಕು. ಪ್ರಾಯಶಃ ಅವುಗಳಲ್ಲಿ ಕೆಲವು ಅಂತರ ರಾಷ್ಟ್ರೀಯ ಆಡಳಿತಕ್ಕೆ ಸೇರ ಬಹುದು. ಪ್ರಪಂಚವೇ ಸಂಕುಚಿತವಾಗುತ್ತಿದೆ. ಅದರ ಸಮಸ್ಯೆಗಳು ಎಲ್ಲ ರಾಷ್ಟ್ರಗಳ ಸಮಸ್ಯೆಯಾಗಿವೆ. ಮೂರುದಿನಗಳಿಗಿಂತ ಕಡಮೆ ಕಾಲದಲ್ಲಿ ಪ್ರಪಂಚದ ಯಾವ ಸ್ಥಳದಿಂದ ಹೊರಟರೂ ವಿಮಾನದಲ್ಲಿ ಭೂಪ್ರದಕ್ಷಿಣೆ ಮಾಡಬಹುದು. ವಾಯುಮಂಡಲದಾಚೆಯ ಪ್ರಯಾಣ ಸಾಧ್ಯವಾದರೆ ಈ ಪ್ರದಕ್ಷಿಣೆ ಇನ್ನೂ ಅತ್ಯಲ್ಪ ಕಾಲದಲ್ಲಿ ಮುಗಿಯಬಹುದು. ಪ್ರಪಂಚದ ವಿಮಾನ ಯಾನ ಸೌಕರ್ಯದಲ್ಲಿ ಭಾರತವು ಒಂದು ಪ್ರಮುಖ ಕೇಂದ್ರವಾಗಬೇಕು. ಪಶ್ಚಿಮ ಏಷ್ಯ ಮತ್ತು ಯೂರೋಪಿಗೂ, ಆಕಡೆ ಬರ್ಮ, ಚೀನಾಗಳಿಗೂ ರೈಲುಮಾರ್ಗವಾಗಬೇಕು. ಹಿಮಾಲಯದಾಚೆ ಭಾರತದಿಂದ ಉತ್ತರದಲ್ಲಿ ಅನತಿ ದೂರದಲ್ಲಿ ಕೈಗಾರಿಕೋದ್ಯಮದಲ್ಲಿ ಅಸಾಧ್ಯ ಪ್ರಗತಿ ಸಾಧಿಸಿ, ಭವಿಷ್ಯದಲ್ಲಿ ಇನ್ನೂ ಮಹತ್ಸಾಧನೆ ಮಾಡಬಲ್ಲ ಶಕ್ತಿಯಿರುವ ಸೋವಿಯಟ್ ರಷ್ಯ ಇದೆ. ಇದರ ಪ್ರಭಾವದಿಂದ ಭಾರತ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ; ಅನೇಕ ಕ್ರಿಯೆ ಪ್ರತಿಕ್ರಿಯೆಗಳಾಗುತ್ತಲಿವೆ.
ಐಕಮತ್ಯವೇ ಅಥವ ಪಾಕಿಸ್ಥಾನವೇ ಎಂಬ ಪ್ರಶ್ನೆಯನ್ನು ತಾತ್ವಿಕ ದೃಷ್ಟಿಯಿಂದ ಮತ್ತೆ ಭಾವಾ ವೇಶದಿಂದ ನೋಡತಕ್ಕದ್ದಲ್ಲ, ಇಂದಿನ ಪ್ರಪಂಚವನ್ನು ಕಣ್ಣು ತೆರೆದು ನೋಡಿ ವ್ಯವಹಾರ ದೃಷ್ಟಿಯಿಂದ ವಿಷಯ ಪ್ರವೇಶಮಾಡಬೇಕಾಗಿದೆ. ಆ ಪ್ರವೇಶದಿಂದ ನಾವು ಕೆಲವು ತೀರ್ಮಾನಕ್ಕೆ ಬರುತ್ತೇವೆ. ಸಮಗ್ರ ಭಾರತ ದೃಷ್ಟಿಯಿಂದ ಕೆಲವು ಮುಖ್ಯ ಕಾರ್ಯಕ್ರಮ ಮತ್ತು ವಿಷಯಗಳಲ್ಲಿ ನಮ್ಮನ್ನು ಒಟ್ಟುಗೂಡಿಸುವ ಒಂದು ಲೇಪ ಇಂದು ನಮಗೆ ಬೇಕಾಗಿದೆ. ಅದು ಒಂದು ಉಳಿದು ಒಕ್ಕೂಟದ ಅಂಗಗಳಿಗೆ ಆದಷ್ಟು ಹೆಚ್ಚು ಸ್ವಾತಂತ್ರ್ಯವಿರತಕ್ಕದ್ದು. ಈ ಎರಡರ ಮಧ್ಯೆ ಒಟ್ಟಾಗಿ ಮತ್ತು ಪ್ರತ್ಯೇಕವಾಗಿ ನಡೆಸಬಹುದಾದ ಕೆಲವು ಅಧಿಕಾರಗಳಿರತಕ್ಕದ್ದು. ಈ ಅಧಿಕಾರವ್ಯಾಪ್ತಿ ಎಲ್ಲಿ ಮುಗಿಯುತ್ತದೆ, ಎಲ್ಲಿ ಆರಂಭವಾಗುತ್ತದೆ ಎಂಬ ವಿಷಯ ಭಿನ್ನಾಭಿಪ್ರಾಯ ಬರಬಹುದು. ಆ ಭಿನ್ನಾಭಿಪ್ರಾಯಗಳನ್ನು ವ್ಯವಹಾರ ದೃಷ್ಟಿಯಿಂದ ಪರಿಶೀಲಿಸಿದರೆ ಪರಿಹಾರವು ಸಾಮಾನ್ಯವಾಗಿ ಸುಲಭಸಾಧ್ಯವಾಗಬಹುದು.
ಇದೆಲ್ಲಕ್ಕೂ ಸ್ವಯಂಪ್ರೇರಿತ ಸಹಕಾರ ಭಾವನೆ, ಒತ್ತಾಯವಿಲ್ಲವೆಂಬ ನಂಬಿಕೆ ಮತ್ತು ಪ್ರತಿಯೊಂದು ಅಂಗ ಮತ್ತು ವ್ಯಕ್ತಿಗೆ ಸ್ವಾತಂತ್ರ್ಯ ಇದೆ ಎಂಬ ಅರಿವು ಅತ್ಯವಶ್ಯಕ. ಹಳೆಯ ಪಾಳೆಯಪಟ್ಟುಗಳು ಹೋಗಬೇಕಲ್ಲದೆ ಹೊಸ ಪಾಳೆಯ ಪಟ್ಟುಗಳು ನಿರ್ಮಾಣ ಆಗದಿರುವುದೂ ಅಷ್ಟೇ ಮುಖ್ಯ. ಕೆಲವು ಸಲಹೆಗಳಂತೆ ಪಂಗಡ ಎಂಬ ತಾತ್ವಿಕ ಭಾವನೆಯಿಂದ, ಆ ಪಂಗಡದ ವ್ಯಕ್ತಿಗಳನ್ನೇ ಮರೆತು ಒಂದು ಪಂಗಡದ ಒಬ್ಬನನ್ನು ಬೇರೊಂದು ಪಂಗಡದ ಎರಡು ಅಥವ ಮೂರು ಜನರಿಗೆ ಸಮಮಾಡಿದರೆ ಹೊಸ ಪಾಳೆಗಾರಿಕೆ ಸೃಷ್ಟಿಸಿದಂತಾಗುತ್ತದೆ. ಅದರಿಂದ ಅಸಮಾಧಾನವೂ ಅಭದ್ರತೆಯೂ ವಿಶೇಷ ಹೆಚ್ಚುತ್ತದೆ.
ಒಂದು ನಿರ್ದಿಷ್ಟ ಪ್ರದೇಶ ಯಾವುದೇ ಇರಲಿ ಸಂಯುಕ್ತ ಭಾರತ ಅಥವ ಭಾರತದ ಒಕ್ಕೂಟದಿಂದ ಬೇರೆಯಾಗಲು ಸ್ವತಂತ್ರವಿರಬೇಕು ಎಂದು ವಾದ ಹೂಡಿ ಸೋವಿಯಟ್ ರಷ್ಯದ ಉದಾಹರಣೆ