ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕರಾವಳಿ ಯಕ್ಷಗಾನ-ನೈಸರ್ಗಿಕ ಹಿನ್ನೆಲೆ


ಮಾನವ ಜೀವನದ ಪ್ರತಿಯೊಂದು ಅಂಗವೂ ವಿಭಿನ್ನ ಪ್ರಭಾವ, ಪರಿಸರಗಳಿಂದ ರೂಪಿತವಾಗುವಂತಹದು. ಸಂಸ್ಕೃತಿ, ಸಮಾಜ ರಚನೆ, ಆಹಾರ ವಿಹಾರ, ವೇಷಭೂಷಣ, ಕಲೆ, ಕ್ರೀಡೆ, ಕೃಷಿ ವಿಧಾನ, ದೇಹರಚನೆ ಹೀಗೆ ಭೌತಿಕ, ಮಾನಸಿಕ ಅಂಶಗಳೆಲ್ಲ ಬೇರೆ ಬೇರೆ ರೀತಿಯಲ್ಲಿ, ನಾಲ್ಕಾರು ಪ್ರಧಾನ ಪ್ರಭಾವಿ ಶಕ್ತಿಗಳ ಸಮ್ಮಿಶ್ರವಾದ ಸಮ್ಮಿಲನದ ಫಲಿತಗಳು. ಮತ್ತು ಅಂತಹ ಫಲಿತಗಳಾದ ಸಂಸ್ಕೃತಿ ಮುಂತಾದವುಗಳ ಒಂದೊಂದರ ಇತಿಹಾಸವೂ ಇಂತಹ ಪ್ರಭಾವಿ ಶಕ್ತಿಗಳ ಪರಸ್ಪರ ಕೊಡುವಿಕೆ, ಸಂಘಟನೆಗಳ ರೂಪವಾಗಿಯೇ ರೂಪಿತವಾಗುತ್ತದೆ. ಹೀಗೆ ಮಾನವ ಜೀವನದ ವಿಭಿನ್ನ ಅಂಗಗಳನ್ನೂ, ವಿಭಿನ್ನ ಘಟ್ಟಗಳನ್ನೂ, ಇತಿಹಾಸವನ್ನೂ ರೂಪಿಸುವ ಪ್ರಮುಖ ಶಕ್ತಿಗಳೆಂದರೆ ಮತ ಧರ್ಮಗಳು, ಆರ್ಥಿಕ ಸಾಮಾಜಿಕ ರಚನೆ, ಕಾಲ ದೇಶಗಳು, ಮತ್ತು ಪ್ರಕೃತಿ ಅರ್ಥಾತ್ ನೈಸರ್ಗಿಕ ಶಕ್ತಿ. ಇವುಗಳ ಪ್ರಭಾವವೂ ಸ್ವತಂತ್ರವೆಂದೇನಲ್ಲ. ಈ ನಾಲ್ಕು ಪರಸ್ಪರ ಪ್ರಭಾವಗೊಳ್ಳುತ್ತ, ಒಂದನ್ನೊಂದು ಪ್ರಭಾವಗೊಳಿಸಿ ಪರಿವರ್ತಿಸುತ್ತ ಇರುತ್ತವೆ. (ಇನ್ನೊಂದು ಪ್ರಧಾನ ಅಂಶವಾದ ಜ್ಞಾನ ವಿಜ್ಞಾನವನ್ನು ಸೌಲಭ್ಯಕ್ಕಾಗಿ ಈ ನಾಲ್ಕರಲ್ಲಿ ಅಂತರ್ಗತವನ್ನಾಗಿ ಗ್ರಹಿಸಿದೆ). ಹೀಗೆ ಪ್ರಕೃತಿ ಅಥವಾ ನಿಸರ್ಗ ಮಾನವ ಜೀವನದ, ಮಾನವ ಚರಿತ್ರೆಯ ಒಂದು ಪ್ರಧಾನ ಚಾಲಕ ಪ್ರೇರಕ ಶಕ್ತಿ, ಅಂತೆಯೇ ಇತರ ಜೀವಜಾಲಗಳ ಸಂಬಂಧದಲ್ಲಿ ಕೂಡ, ಮಾನವನ ದೃಷ್ಟಿ ಯಿಂದ ಪ್ರಕೃತಿಯೆಂದರೆ ಭೂಗೋಲ, ಪರ್ವತ, ನದೀನದ, ಹವಾಮಾನ, ಸಸ್ಯವರ್ಗಗಳ ಜತೆಗೆ ಪಶುಪಕ್ಷಿಗಳೂ ಸೇರಿ ಬರುತ್ತವೆ.

ಇವುಗಳೊಂದಿಗಿನ ಸಂಪರ್ಕ, ಸಂಘರ್ಷ, ಸಮನ್ವಯಗಳಿಂದ ಮನುಷ್ಯನ ಬದುಕಿನ ವಿವಿಧ ಅಂಗಗಳು, -ಆಚರಣೆ, ನಂಬಿಕೆ, ಕಲೆ, ಆಹಾರ,


ಈ ಲೇಖನದ ಒಂದು ಭಾಗವು 'ಜಾನಪದ ಗಂಗೋತ್ರಿ' (ಜಾನಪದ ಯಕ್ಷಗಾನ ಅಕಾಡೆಮಿ) ಅಕ್ಟೋಬರ್ 1988ರಲ್ಲಿ ಪ್ರಕಟವಾಗಿದೆ.