ಪುಟ:ಮಿಂಚು.pdf/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

4

ಮಿಂಚು

ಮುಂದಿನ ಸ್ಟೇಷನಿನಲ್ಲಿ ಅವರೆಲ್ಲ ಇಳಿಯಬೇಕು. ಹೊಸ ಸ್ಥಳ ವಿತರಣೆಯಲ್ಲಿ ಕಾಲು ಚಾಚುವುದು ಸಾಧ್ಯ. ಯಾರು ದೊಂಗ ? ಟಿಕೆಟ್‌ರಹಿತ ಪ್ರಯಾಣಿಕನೊ? ಅದನ್ನು ಇದನ್ನು ಎಗರಿಸುವ ಕಳ್ಳನೊ ? ಹೊರಗೆ ಮುಂದಿನ ಸ್ಟೇಷನಿನಲ್ಲಿ 'ಟಿ.ಸಿ' ಏನು ಮಾಡುವ ? ಹೆದರಿಸಿ ಇದ್ದು ಬದ್ದುದನ್ನು ದೋಚುವನೊ ? 'ಸಬ್ ಚೋರ್ ಹೈ', ಯಾರು ಹೀಗೆ ಮೊದಲು ಹೇಳಿದವರು ? ಎಷ್ಟು ಹಳೆಯದು ಈ ಮಾತು ?
ರೈಲು ನಿಂತಿತು. ಮುಂದೆ ಚಲಿಸಿತು.
ಸೀಟಿನ ಮೇಲೆ ಈಗ ಅವಳ ತಲೆ ಆಚೆಗೆ ; ತನ್ನದು ಈಚೆಗೆ, ಅವಳ ಅಣ್ಣ ಕೆಳಗೆ ಹಾಸಿಕೊಂಡ__ತಂಗಿಯ ರಕ್ಷಕ ? ಬೊಗಳೆ ?
ತನ್ನ ಬಾಯಿಯಿಂದ ಮಾತು :
“ದಾರೀಲಿ ಮಲಕೊಳ್ಳೋವರು ಬದೀಲಿ ಸ್ವಲ್ಪ ಜಾಗ ಬಿಡೀಪ್ಪ, ಟಾಯ್ಲೆಟಿಗೆ ಹೋಗುವವರಿಗೆ ಅಡ್ಡಿ ಮಾಡ್ಬೇಡಿ.”
ಮೇಲ್ಗಡೆ ಪವಡಿಸಿದ ಆದಿಶೇಷನಿಗೆ ಈ ರಾತ್ರೆ ಶಯನಸ್ವಪ್ನ. ತನಗೆ ನಿದ್ದೆ ಬರುವುದೊ ಇಲ್ಲವೊ ?
ಹುಡುಗ ಮುಂಡೇವು ನಮಸ್ಕರಿಸಿ ಬೀಳ್ಕೊಟ್ಟಿದ್ದುವು. ದೊಡ್ಡ ನಮಸ್ಕಾರ. ಕೊನೆಯದೆ ? ಅಥವಾ ಗೆಲುವಿನತ್ತ ತನ್ನನ್ನು ಎತ್ತಿ ಒಯ್ಯಲು ಒಂದು ಸೋಪಾನ?
ಟಾಯ್ಲೆಟಿಗೆ ಹೋಗಿಬಂದೆ. ಚಪ್ಪಲಿ ಯಾರಿಗೋ ತುಸು ತಗಲಿರಬೇಕು. ಸದ್ಯಃ ಆತ ಕಿರಿಚಲಿಲ್ಲ. ಇನ್ನು ಬೆಳಗಾಗುವವರೆಗೂ ನಿರಾತಂಕ.....
“....ಈ ಕೆಲ ತಿಂಗಳಲ್ಲಿ ತಾನು ಪಡಬಾರದ ಪಾಡುಪಟ್ಟೆ. ಸ್ವಾಮಿಾಜಿಯ ಆಸರೆಯಲ್ಲಿ ಏಕಾಂತ ದೊರೆಯದೆ ಇರುತ್ತಿದ್ದರೆ ತನಗೆ ಹುಚ್ಚೇ ಹಿಡಿಯುತ್ತಿತ್ತು. ಅಥವಾ ಆಗಲೇ ಹಿಡಿದಿದ್ದ ಒಂದು ಬಗೆಯ ಮರುಳನ್ನು ಸ್ವಾಮಿಾಜಿ ಬಿಡಿಸಿದರೆಂದ?
“ನೀನು ಬಳಲಿದ್ದೀಯಾ. ನಿನ್ನ ಮನಸ್ಸಿಗೆ ನೆಮ್ಮದಿ ಬೇಕು, ವಿಶ್ರಾಂತಿ ಬೇಕು”
__ಎಂದಿದ್ದರು ಸ್ವಾಮಿಾಜಿ, ಆ ರಾತ್ರಿ ಕಳೆದು ಬೆಳಗಾದ ಮೇಲೆ.
ಎಲ್ಲರಂತೆಯೇ ಇವರು ಎಂದು ಇರುಳು ಬಹಳ ಹೊತ್ತು ಕಾದಿದ್ದೆ. ವಿಚಿತ್ರ. ಸ್ವಾಮಿಾಜಿ ಬರಲಿಲ್ಲ. ಬೆಳಗಾದ ಮೇಲೆ, ದೇವರಪೂಜೆ ಮುಗಿದ ಬಳಿಕ ಸ್ವಾಮೀಜಿ ಕರೆದರು. ಅಳಲನ್ನು ತೋಡಿಕೊಂಡೆ.
“ನೊಂದ ಜೀವ” ಎಂದರು, ಯಾವುದೋ ಟಿಪ್ಪಣಿ ಮಾಡಿಕೊಂಡಂತೆ.
ಎಳಸು. ಸಂದೇಹವಿರಲಿಲ್ಲ.
ಕಣ್ಣುಗಳಿಂದ ತೊಟ್ಟಿಕ್ಕಿದ ಎರಡು ಹನಿಗಳನ್ನು ರೂಡಿಸಿ ತಾನು ರಾಗವೆಳೆದಿದ್ದೆ.
“ತಮ್ಮದು ಧರ್ಮಮಠ.”
“ಹೌದು. ಮಧ್ಯಪ್ರದೇಶದ ಧಮೇಂದ್ರಬಾಬಾ ಇದರ ಸ್ಥಾಪಕರು.”
“ಮುಂಬಯಿಯಲ್ಲಿದ್ದಾಗ ಅವರನ್ನು ಕಾಣುವ ಬಯಕೆಯಾಗಿತ್ತು. ಕಲ್ಯಾಣ ನಗರಕ್ಕೆ ಬೇಗನೆ ಹೊರಡಬೇಕಾಗಿ ಬಂದದ್ದರಿಂದ ಆ ಬಯಕೆ ಈಡೇರಲಿಲ್ಲ.