ಪುಟ:ಮಿಂಚು.pdf/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಿಂಚು

ಅರ್ಜಿ ಕೊಟ್ಟು ಸಾಕಷ್ಟು ಕಾಲವಾಗಿತ್ತು. ಧನಂಜಯಕುಮಾರನಿಗೆ ಸಂದೇಹ;
ವಿಷಯ ಗೊತ್ತಾಗಿ ಬೇರೆ ವರ್ತಕರು ಅರ್ಜಿ ಹಾಕಿದ್ದರೆ? ಅಂಥದೇನೂ ಆಗಿರಲಿಲ್ಲ.
ಅರ್ಜಿಯ ಮೇಲೆ ಗುಮಾಸ್ತೆಯೊಬ್ಬ ಬೆಚ್ಚಗೆ ಕುಳಿತಿದ್ದ. ಬರಬೇಕಾದದ್ದು
ಬಂದಿರಲ್ಲಿಲ.
ಪರಶುರಾಮನಿಂದ ಗುಮಾಸ್ತೆಗೆ ಪ್ರಶ್ನೆ ಬಂತು.
“ಅರ್ಜಿ ಏನಾಯ್ತು? ಮಾತಾಜಿ ಕೇಳ್ತಿದಾರೆ.”
ನ್ಯಾಯವಾಗಿ ತನಗೆ ಬರಬೇಕಾದ್ದನ್ನು ಈ ಆಪ್ತ ಕಾರ್ಯದರ್ಶಿಯೇ ಎಲ್ಲಿ
ಗುಳುಂ ಮಾಡುತ್ತಿದಾನೋ ಎಂಬ ಸಂದೇಹ ಗುಮಾಸ್ತೆಗೆ. ತಾನೇ ಪರಶುರಾಮನ
ಬಳಿಗೆ ಹೋದ.
ರಾಗವೆಳೆದ: “ರೇಷ್ಮೆ ನಿಗಮದ ಅಧ್ಯಕ್ಷರು ಅರ್ಜಿನ ಪರಿಶೀಲಿಸ್ಬೇಕಲ್ಲ?"
ಆಪ್ತ ಕಾರ್ಯದರ್ಶಿ ಕನಲಿದ.
“ಎಷ್ಟ್ರೀ ಕೊಬ್ಬು ನಿಮಗೆ? ಅಧ್ಯಕ್ಷರಿಗೆ ನಾವು ಕಳಿಸ್ತೀವಿ. ಇನ್ನು ಕಾಲು
ಗಂಟೇಲಿ, ಇದು ಪರಿಶೀಲನಾರ್ಹ ಯೋಜನೆ-ಅಂತ ನೋಟ್ ಹಾಕಿ ಫೈಲ್ ನನಗೆ
ಕಳಿಸಿಕೊಡಿ."
(ಪರಶುರಾಮನಿಗೆ ವೈಯಕ್ತಿಕ ಕಾಣಿಕೆಯನ್ನು ಸಾಹುಕಾರ ಸಲ್ಲಿಸಿ ಆಗಿತ್ತು.
ನಗದಿನ ಜತೆಗೆ ಒಂದು ಸೀರೆ ಕೂಡ. ಹರಿಣಾಕ್ಷಿಗೆ ಇಷ್ಟವಾಗಿತ್ತು. “ಈಗ
ನಿಮ್ಮನ್ನೊಬ್ಬ ಅಧಿಕಾರಿ ಅಂತ ಕರೀಬಹುದು," ಎಂದಿದ್ದಳು. 'ಗೃಹಕಾರ್ಯಾಲಯ
ಅಂತ ಮಾತಾಜಿ ಜತೆ ತನ್ನ ಗಂಡ ಬಹಳ ಹೊತ್ತು ಇರುತ್ತಾನೆ' ಎಂಬ ಅವಳ ಸಂಕಟ
ಮಾತ್ರ ಶಮನವಾಗಲಿಲ್ಲ.)
“ಇವತ್ತು ಬರಲಾ?” ಎಂದು ಧನಂಜಯಕುಮಾರ ಫೋನ್ ಮಾಡಿದ್ದ.
“ಅಪರಾಹ್ನ ಬನ್ನಿ,” ಎಂದಿದ್ದ ಪರಶುರಾಮ.
ಈಗ ಕಾರ್ಯಸೌಧದ ಮೆಟ್ಟಲೇರಿದೊಡನೆ ಧನಂಜಯನ ನಡಿಗೆಗೊಂದು ಠೀವಿ
ಬರುತ್ತಿತ್ತು.
ಒಳನುಗ್ಗಲು ಕಾದಿದ್ದವರನ್ನು ಅಲ್ಲಿಯೇ ಇರಹೇಳಿ, ಧನಂಜಯಕುಮಾರ
ನೊಡನೆ ಪರಶುರಾಮ ಮುಖ್ಯಮಂತ್ರಿಯ ಚೇಂಬರನ್ನು ಪ್ರವೇಶಿಸಿದ. ಅವನ
ಕೈಯಲ್ಲಿತ್ತು ಗುಮಾಸ್ತೆ ఒಪ್ಪಿಸಿದ್ದ ಫೈಲು.
ಅದರಲ್ಲಿ ರೇಷ್ಮೆ ನಿಗಮದ ಅಧ್ಯಕ್ಷರಿಗೆ ಸೌದಾಮಿನಿ ತನ್ನ ಅನುಜ್ಞೆ ಬರೆದಳು:
“ಅರ್ಜಿ ಮಂಜೂರಾಗಿದೆ. ಸೂಕ್ತಕ್ರಮ ಕೈಗೊಳ್ಳಿ. ಆಜ್ಞೆ ಹೊರಡಿಸಿ ನನಗೆ
ತಿಳಿಸಿಬಿಡಿ."
ಕುಳಿತುಕೊಳ್ಳಲು ಮುಖ್ಯಮಂತ್ರಿ ಹೇಳಿರಲಿಲ್ಲ. ಆದರೂ ಅವರ ಹತ್ತಿರವೇ
ನಿಂತಿದ್ದ ಸಾಹುಕಾರ.