ಪುಟ:ಮಿಂಚು.pdf/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 173

                                        ೧೮
   ಇಷ್ಟರೊಳಗೆ ರಂಗಧಾಮ ಸ್ವದೇಶಕ್ಕೆ ಮರಳ ಬೇಕಾಗಿತ್ತು, ಸುಳಿವು ಇಲ್ಲವಲ್ಲ ಎಂದು ಸೌದಾಮಿನಿ ಚಿಂತೆಗೀಡಾದಳು. ಎಳೆಗರುವಿನ ಕಿವಿಗೆ ಗಾಳಿ ಹೊಕ್ಕರೆ ಕುಣಿ ದಾಡುತ್ತಲ್ಲ, ಹಾಗೆ ಮಾಡಿರಬೇಕು ಈತ ಎಂದು, ಒಂದು ಸಾಲು ಹಲ್ಲನ್ನು 

ಇನ್ನೊಂದು ಸಾಲಿನಿಂದ ಸವರಿದಳು. ಟರ್ಬೈನುಗಳನ್ನು ಹೇರಿಕೊಂಡು ಹಡಗು ಹೊರಟಿರಬಹುದು: ಆದರೆ ಉಳಿದ ವ್ಯವಹಾರ ? ಮಂಗನಿಗೊಬ್ಬ ಸಿಂಗ. ವಿದ್ಯುಚ್ಛಕ್ತಿ ನಿಗಮದ ಅಧ್ಯಕ್ಷನಿಗಾದರೂ ಜವಾಬ್ದಾರಿ ಬೇಡವೆ? ಕತ್ತೆ ನನ್ಮಗ! ದಿಲ್ಲಿಯಲ್ಲಿರುವ ಏಜಂಟ ಆ ಭೂಪತಿಗಳಿಗೇ ಕೊಟ್ಟು ಕೈ ಮುಗಿದರೆ?

    ಆ ರಾತ್ರೆ ನಕುಲದೇವ್‍ಜಿಯವರ ಫೋನ್ ಬಂತು:
    “ರಂಗಧಾಮ್ ಇಲ್ಲಿದ್ದಾನೆ. ನಿನ್ನ ಕುಟೀರದಲ್ಲಿ. ನಿವೇಶನ ಮಂಜೂರಾಗಿದೆ. ಭವನದ ನಿರ್ಮಾಣ ಮುಂದೆ ಹೋಗ್ತಿದೆಯಲ್ಲ? ಏಜೆಂಟ್ ಕೊಟ್ಟ ಒಂದು ಕೈ ಇಲ್ಲಿಯೇ ಇಟ್ಟುಕೊಂಡಿದ್ದೇನೆ. ಇದರಿಂದ ಮುಂದಿನ ಐದು ತಿಂಗಳ ಕ್ವೋಟಾ ಜಮಾ ಆಯ್ತೂಂತ ತಿಳಕೋಬೇಡ. ಒಂದು ತಿಂಗಳಿನದು ಮಾತ್ರ ಕಳಿಸೋದು ಅಗತ್ಯವಿಲ್ಲ. ಅಷ್ಟೇ ನಿಮ್ಮ ಪಾಲು. ರಂಗಧಾಮ ನಿನ್ನ ಮೆಚ್ಚಿನ ಮಂತ್ರಿ ಅಲ್ಲವಾ ? ಸಹಜ,ಸಹಜ!"
    “ನಕುಲ್ ದೇವ್‍ಜಿ, ಹೀಗೆ ಯಾಕೆ ಮಾಡಿದಿರಿ? ಇಲ್ಲಿ ಕಷ್ಟವಾಗುತ್ತೆ. ಕೈಗಾರಿ ಕೋದ್ಯಮಗಳನ್ನ ಶುರುಮಾಡೋದಕ್ಕೆ ಇಲ್ಲಿಗೆ ಒಂದು ಹತ್ತಿಪ್ಪತ್ತು ಜನರನ್ನು ಕಳಿಸಿ.ಕಿಪ್ಕಿಂಧೆ ಬಡ ರಾಜ್ಯ.ಸಂಪದಭಿವೃದ್ಧಿಗೆ ಅವಕಾಶ ಕೊಡಿ. ಆದರೆ, ವ್ಯವಹಾರ

ಅಲ್ಲಿಯೇ ಕುದುರಿಸಿ ಬರೇ ಹೆಬ್ಬೆಟ್ಟು ಒತ್ತೋದಕ್ಕೆ ಇಲ್ಲಿಗೆ ದಾಟಿಸ್ಬೇಡಿ ಪ್ಲೀಸ್ !"

    “ತಾಳ್ಮೆ ತಪ್ಪಬಾರದು, ಮಾತಾಜಿ. ನಾನು ಯಾವಾಗಲೂ ನಿಮ್ಮ ಹಿತೈಷಿ,ಮರೀಬೇಡಿ."
    ...ಕೆಲ ದಿನಗಳ ಬಳಿಕ ರಂಗಧಾಮ ಕಲ್ಯಾಣನಗರ ತಲಪಿ, ಕೆಲ ಮಿನಿಟುಗಳಲ್ಲೆ ಮಾತಾಜಿಯ ಸನ್ನಿಧಿಯಲ್ಲಿ ಹಾಜರಾದ.
    “ಒಂದು ಯುಗವಾಯ್ತೇನೋ ನಿಮ್ಮನ್ನ ನೋಡಿ,” ಎಂದು ಸಲಿಗೆಯ ಮಾತನಾಡುತ್ತ,ರಂಗಧಾಮ ಮೇಜಿನ ಬಳಿಗೆ ಬಂದ.
 “ಫಾರೀನ್ನಲ್ಲಿ ಏನೇನು ಮುಟ್ಟಿದೀರೊ ಏನೊ....ಆದರೆ, ಸ್ನಾನ ಆಗಿದೆ ಅಲ್ವೆ ? ಕೈ ಜೋಡಿಸೋದಕ್ಕೇನು ಧಾಡಿ ?"
    “ಕ್ಷಮಿಸಿ. ನಮಸ್ತೆ."