ವಿಷಯಕ್ಕೆ ಹೋಗು

ಪುಟ:ಮುಡಿ.pdf/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮುಡಿ

97

ಇಲ್ಲಿ ಪ್ರಾತ್ಯಕ್ಷಿಕೆಯೆ ಸಮ್ಮೇಳನ, ಸಮ್ಮೇಳನವೆ ಪ್ರಾತ್ಯಕ್ಷಿಕೆ. ಇದು ಕಲಾ ವಿವೇಚನೆ, ಕಲಾಶಿಕ್ಷಣ ಎರಡನ್ನೂ ಸಾಧಿಸುವ ರೀತಿ, ಇಲ್ಲಿ ಸಮ್ಮೇಳನಗಳ ಸಂಯೋಜಕರಿಗೂ ಗೋಷ್ಠಿಗಳನ್ನು ಹೇಗೆ ಸಂಘಟಿಸಬೇಕು ಎಂಬುದರ ಪ್ರಾತ್ಯಕ್ಷಿಕೆಯೂ ಸಿಕ್ಕಿದೆ.
ಪ್ರದರ್ಶನ ಕಲೆಯ ಪ್ರಾತ್ಯಕ್ಷಿಕೆಯೆಂಬುದು ಒಂದು ಹೊಣೆಗಾರಿಕೆಯ ಕೆಲಸ. ಹಲವು ಬಾರಿ ಪ್ರಾತ್ಯಕ್ಷಿಕೆಗಳನ್ನು ನೋಡುವಾಗ, ಉದ್ದೇಶರಹಿತ ಚಟುವಟಿಕೆಯ ಹಾಗೆ ಕಾಣುವುದುಂಟು. ಅಥವಾ, ಅದೂ ಒಂದು ತುಣುಕು ಪ್ರದರ್ಶನದಂತೆ, ಅಥವಾ ಆಟವೊಂದರ ತುಣುಕು ಎಂಬಂತೆ ಕಾಣುವುದಿದೆ. ಪ್ರಾತ್ಯಕ್ಷಿಕೆ ಎಂದರೇನು, ಎಂಬ ಸ್ಪಷ್ಟ ಕಲ್ಪನೆಯಿಲ್ಲದಾಗ ಹೀಗಾಗುತ್ತದೆ. ಪ್ರಾತ್ಯಕ್ಷಿಕೆ ಎಂಬುದು ಹಲವು ವಿಧವಾಗಿ ಇರಬಹುದು. ಅದರ ಸ್ವರೂಪವು, ಅದರ ಸಂದರ್ಭ ಮತ್ತು ಉದ್ದೇಶಗಳನ್ನು ಹೊಂದಿದೆ. ಯಕ್ಷಗಾನದ ಮೌಲಿಕವಾದ (basics) ರಾಗ, ತಾಳ, ಹೆಜ್ಜೆ, ಚಲನೆಗಳ ಕುರಿತ ತಿಳಿವು ಮೂಡಿಸುವ ಪ್ರಾತ್ಯಕ್ಷಿಕೆ ಒಂದು ತರಹ. ಆಯ್ದ ಸನ್ನಿವೇಶ, ಅಥವಾ ತಂತ್ರದ ಪ್ರಾತ್ಯಕ್ಷಿಕೆ ಒಂದು ಬಗೆ. ಪ್ರೌಢವಾದುದೊಂದು. ವಿವರಣಾತ್ಮಕ ಇನ್ನೊಂದು. ವೇಷ ಸಹಿತ, ವೇಷ ರಹಿತ, ವಸ್ತು ವಿವರಣೆ - ಹೀಗೆ ಹಲವು ತರಹ ಇರಬಹುದು. ಆದರೆ ಉದ್ದೇಶ ಮತ್ತು ವಿಧಾನ ನಮಗೆ ಸ್ಪಷ್ಟ ಇರಬೇಕು. ಯೋಜಿತವೂ ಇರಬೇಕು.
ಹಾಗೆಯೆ ಪ್ರಾತ್ಯಕ್ಷಿಕೆ ಯಾರಿಗಾಗಿ, ಎಂಬ ವಿಚಾರವೂ ಮುಖ್ಯ. ಯಕ್ಷಗಾನ ಕ್ಷೇತ್ರ ಪ್ರದೇಶದ ಒಳಗಿನವರಿಗೊ, ಹೊರಗಿನವರಿಗೊ ಎಂಬ ವಿಚಾರ, ವಿದ್ಯಾರ್ಥಿ ಮಟ್ಟದವರಿಗೊ, ಹಿರಿಯರಿಗೊ, ರಂಗ ವಿದ್ಯಾರ್ಥಿಗಳಿಗೊ, ಸಾಮಾನ್ಯ ಮಿಶ್ರಿತ ಪ್ರೇಕ್ಷಕರಿಗೊ ಎಂಬ ವಿಚಾರಗಳು ಗಣನಾರ್ಹ. ಈ ಕುರಿತ ಖಚಿತ ಕಲ್ಪನೆ ಇಲ್ಲದಾಗ ಪ್ರಾತ್ಯಕ್ಷಿಕೆ ಒಂದು ಪ್ರದರ್ಶನ ಕುತೂಹಲ ಮಾತ್ರ ಆಗುತ್ತದೆ. ಈ ಸಮ್ಮೇಳನವು ಹಾಗಾಗದೆ, ಖಚಿತವಾದ ಒಂದು ಪರಿಕಲ್ಪನೆಯಿಂದ ಯೋಜಿಸಲ್ಪಟ್ಟಿರುವುದು ಸಂತೋಷದ ಸಂಗತಿ.
ಪ್ರಾತ್ಯಕ್ಷಿಕೆಗಳು, ಕಲೆಯ ಪರಿಚಯಕ್ಕೆ ಅದರ ಲಕ್ಷಣಗಳ ಅಂಗೋಪಾಂಗಗಳ ಪ್ರಯೋಜನವನ್ನು ತಿಳಿಸುವ ಕೆಲಸಕ್ಕೆ ಪ್ರಯೋಜನಕರ ಮತ್ತು ಒಂದು ಶೈಲಿ ಬದ್ಧ ಕಲೆಯಲ್ಲಿ


ಈ ಸಮ್ಮೇಳನದಲ್ಲಿ ಪ್ರಾತ್ಯಕ್ಷಿಕೆಗಳನ್ನು, ಶ್ರೀ ಮುರಳಿ ಕಡೆಕಾರ್, ಯಕ್ಷಗಾನ ಕಲಾರಂಗ, ಉಡುಪಿ, ಇವರು ಸಂಯೋಜಿಸಿದ್ದು, ಉಡುಪಿ ಎಂ.ಜಿ.ಎಂ. ಕಾಲೇಜಿನ ಯಕ್ಷಗಾನ ಕೇಂದ್ರ (ಗುರು ಬನ್ನಂಜೆ ಸಂಜೀವ ಸುವರ್ಣರ ನೇತೃತ್ವ) ಮತ್ತು ಶ್ರೀ ಧರ್ಮಸ್ಥಳ ಯಕ್ಷಗಾನ ಕೇಂದ್ರ (ಗುರು ಕೆ. ಗೋವಿಂದ ಭಟ್ಟರ ನೇತೃತ್ವ)ಗಳ ಕಲಾವಿದರು ಭಾಗವಹಿಸಿ ನಡೆಸಿಕೊಟ್ಟರ

0 ಡಾ. ಎಂ. ಪ್ರಭಾಕರ ಜೋಶಿ