ವಿಷಯಕ್ಕೆ ಹೋಗು

ಪುಟ:ಮುಡಿ.pdf/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
122
ಮುಡಿ

ಬಲ್ಲರು" ಎಂಬ ಅತಿಕಾಯನ ಒಂದು ಬಗೆಯ ಒಪ್ಪಿಗೆಗೂ ವಿರೋಧವಾಗುತ್ತದೆ. ಇಲ್ಲಿ ಸೇತುಬಂಧನ ಪ್ರಸಂಗದ (ವಿಭೀಷಣ ನೀತಿ) ವಿಭೀಷಣನಿಗಿರುವ ಸ್ವಾತಂತ್ರವು ಅತಿಕಾಯನಿಗಿಲ್ಲ ಅನ್ನಬಹುದು. ಭೀಷ್ಮ ವಿಜಯ ಪ್ರಸಂಗದಲ್ಲಿ, ಭೀಷ್ಮನು ಅಂಬೆಯನ್ನು ಬಲಾತ್ಕಾರವಾಗಿ ತಂದು, ಆ ಬಳಿಕ ತಾನೇ ವಿವಾಹವಾಗದಿರುವುದು ಸರಿಯೆ ಎಂಬ ಬಗ್ಗೆ ಅಂಬೆ-ಭೀಷ್ಮರ ಮೊದಲ ಸಂವಾದದಲ್ಲಿ ಪ್ರಸ್ತಾವವಷ್ಟೆ ಬರಬೇಕಾದುದು ಹೆಚ್ಚು ಸೂಕ್ತ; ಕಾರಣ, ಮುಂದೆ ಈ ವಿಚಾರ ಪುನರಾವರ್ತನೆ ಆಗಲಿಕ್ಕಿದ್ದು, ಭೀಷ್ಮನನ್ನು ಪ್ರಶ್ನಿಸುವ ಅಧಿಕಾರಿಯಾದ ಪರಶುರಾಮನು ಅದನ್ನು ವಿವರವಾಗಿ ಪರಿಶೀಲಿಸಲಿಕ್ಕಿದೆ. ಮಧ್ಯೆ ಕಿರಾತನೂ ಅದನ್ನೆ ಪ್ರಶ್ನಿಸಿದರೂ, ಭೀಷ್ಮನು ಅದನ್ನು ಆ ಮಟ್ಟದಲ್ಲಿ ಉತ್ತರಿಸುವುದಿಲ್ಲ, ಉತ್ತರಿಸಿಲೂ ಬಾರದು. ಎಲ್ಲ ಸಂವಾದಗಳು ಸೇರಿ ಪ್ರಸಂಗದ ಸ್ವರೂಪ ಮತ್ತು ಅದರ ಪ್ರದರ್ಶನವು ನಾಟಕವಾಗಿ ನಿರ್ವಹಣೆಯಾಗುವಂತಹುದಷ್ಟೆ? 'ಕರ್ಣ ಪರ್ವ' ಪ್ರಸಂಗದ ಕೊನೆಯಲ್ಲಿ ಬರುವ ಕರ್ಣನ ಜೀವನದ ದುರಂತ ಕಥನವನ್ನು ಮೊದಲಿನ ಸನ್ನಿವೇಶಗಳಲ್ಲಿ ಸ್ಪುಟವಾಗಿ ಹೇಳುತ್ತ ಹೋದರೆ, ಅದು ಪಾತ್ರದ ಅರ್ಥವೇನೋ ಆದೀತು, ಪ್ರಸಂಗದ ಅರ್ಥವಾಗದು.

ಪ್ರಸಂಗದ ಅರ್ಥೈಸುವಿಕೆಗೆ ಹಲವು ಮುಖಗಳುಂಟು. ಪುರಾಣದ ಸರಳ ಆಶಯಗಳಾದ ಭಕ್ತವಿಜಯ, ದುಷ್ಯಶಿಕ್ಷಣ, "ರಾಮಾದಿವತ್ ನತು ರಾವಣಾದಿವತ್," -ಎಂಬಂತಹ ಆಶಯಗಳೇ ಚಿತ್ರಿತವಾಗಬೇಕೆಂದಿಲ್ಲ. ಸರಳವಾದ, ಕೆಲವೊಮ್ಮೆ ಮುಗ್ಧವಾದ, ಮೌಲ್ಯ ಪ್ರಪಂಚವನ್ನುಳ್ಳ ಪ್ರಸಂಗಗಳನ್ನಾಧರಿಸಿ, ಸಂಕೀರ್ಣವಾದ ಮತ್ತು ಗಹನವಾದ ಚಿತ್ರಣವುಳ್ಳ ಅರ್ಥವು ಅರ್ಥಗಾರಿಕೆಯಲ್ಲಿ ಹೊರಹೊಮ್ಮಬಹುದು.

ಅರ್ಥದ ಅರ್ಥ

ನಾವು ಒಂದು ಸನ್ನಿವೇಶಕ್ಕೆ 'ಅರ್ಥ ಕಲ್ಪಿಸುತ್ತೇವೆ'. ಕಲಾಕೃತಿಯನ್ನು 'ಅರ್ಥಮಾಡಿಕೊಳ್ಳುತ್ತೇವೆ'. ಸಾಹಿತ್ಯ ಕೃತಿಯನ್ನು 'ಅರ್ಥವಿಸುತ್ತೇವೆ', ನಿಜ. ಹಾಗೆಯೆ

ಪಾತ್ರಧಾರಿಯು ಪ್ರಸಂಗಕ್ಕೆ ಅರ್ಥಮಾಡಿ, ಅದನ್ನು ಮಾತಾಡುತ್ತಾನೆ ಸರಿ. ಇಲ್ಲಿ ಯಾವ ಅರ್ಥ? ನಾವು ಮಾಡಿದ ಅರ್ಥವೆಂದರೆ, ನಮ್ಮ ಅರ್ಥ. ಅರ್ಥದ ಅರ್ಥವೇನು? (Meaning of Meaning)ಎಂದರೆ ವಿಚಿತ್ರವೆನಿಸಬಹುದಾದರೂ, ಹಾಗೂ ದುಂಟು. ಯಾವುದೇ ಅರ್ಥವಿಸುವಿಕೆಗೂ 'ನಾವು ಕಂಡಂತೆ' ಎಂದು ಸೇರಿಸಬೇಕು. ಇದು ನಮ್ಮ ನಮ್ಮ ಅಭ್ಯಾಸ, ಸಂಸ್ಕಾರ, ಪ್ರತಿಭೆಗಳಿಗೆ ಸಂಬಂಧಿಸಿ ಅನಂತವಾಗಿರುತ್ತದೆ. ಅರ್ಥವು ಕಲಾಕೃತಿಯಲ್ಲಿದೆ, ಮಾತ್ರವಲ್ಲ, ನಮ್ಮೊಳಗೆ ಇದೆ. ಕೆಲವೊಮ್ಮೆ ಇದು ಪ್ರಬಲವಾಗಿ, ಅದು ದುರ್ಬಲವಾಗಬಹುದು.

• ಡಾ. ಎಂ. ಪ್ರಭಾಕರ ಜೋಶಿ