ವಿಷಯಕ್ಕೆ ಹೋಗು

ಪುಟ:ಮುಡಿ.pdf/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
124
ಮುಡಿ

ಕಾವ್ಯವಾಗಲಿ, ಅದರ ವಿವರವಾಗಲಿ, ಪದ್ಯ - ಪದ - ಶಬ್ದಗಳಾಗಲಿ, ಹಿಂಜಿ ಚರ್ಚಿಸಬೇಕಾದ ದಸ್ತಾವೇಜುಗಳಲ್ಲ. ಅವು ಕಲಾಸಾಮಗ್ರಿಗಳು, ಅವುಗಳ ಬಳಕೆಗೆ ಕಲಾವಿವೇಕವೇ ಆಧಾರವಾಗಬೇಕಲ್ಲದೆ, ಅಧ್ಯಯನದ ಪ್ರದರ್ಶನ ಅಥವಾ ಶುಷ್ಕವಾದ ತರ್ಕವಲ್ಲ. ಇಲ್ಲಿ ಪಾತ್ರದ ಮತ್ತು ಪ್ರಸಂಗದ ನೋಟವೇ ಮುಖ್ಯ.
ಒಳಗಿನಿಂದ ಮೀರಬೇಕು
ಪದ್ಯಗಳನ್ನು ಅನುವಾದ ಮಾಡಿದರಷ್ಟೆ ಅರ್ಥಗಾರಿಕೆಯಾಗುವುದಿಲ್ಲ. ಹಾಗೆಂದು 'ಪದ್ಯವನ್ನು ಬಿಟ್ಟು ಹೋಗುವ' ಅರ್ಥಗಾರಿಕೆಯೂ ಸೊಗಸದು. ಪದ್ಯವೆಂಬುದು ಹಂದರ. ಅದಕ್ಕೆ ತುಂಬಿಸುವ ವಸ್ತು-ಸಾಹಿತ್ಯ, ಭಾವ, ಉಕ್ತಿ, ಸೌಂದಯ್ಯ, ಅನುಭವ, ಅಧ್ಯಯನ, ಕಲ್ಪನೆ ಮುಂತಾದ ವ್ಯಂಜನಗಳು-ಸೇರಿ ಅರ್ಥ.
ಪ್ರಸಂಗವನ್ನು ಅರ್ಥದಾರಿ ಮೀರಬಾರದು ಎಂಬುದು ಒಂದು ನಿಯಮ. ಒಂದು ಹಂತದಲ್ಲಿ ಇದು ಸರಿ. ಇನ್ನೊಂದು ಮಟ್ಟದಲ್ಲಿ ಪ್ರಸಂಗವನ್ನು ಮೀರಿ ಹೋಗದೆ ಅರ್ಥಗಾರಿಕೆ ಸೃಷ್ಟಿ ಮತ್ತು ಸೃಷ್ಟಿಶೀಲ (Creation and creative) ಆಗುವುದಿಲ್ಲ. ಹಾಗಾಗಿ ಅರ್ಥವು ಪ್ರಸಂಗವನ್ನು ಮೀರಬೇಕು, ಮೀರದಿರಬೇಕು- ಇದೇ ಅರ್ಥಗಾರಿಕೆಯ ಗುಟ್ಟು, ಅರ್ಥರಹಸ್ಯ. ಅದೇ ಅನರ್ಥ ರಹಸ್ಯ ಕೂಡ ಹೌದು.
ಉದಾ: ಭಾನು ತನುಜ ಭಳಿರೆಯನುಜ ಬಂದೆಯಾಮಮ ॥...(ವಾಲಿವಧೆ ಪ್ರಸಂಗ)
ವಾಲಿ (ಶೇಣಿಯವರು) ಯಾರು? ಓ, ಇದು ನೀನು. ನೀನು ..... ಭಾನುತನುಜನೇನೋ ನೀನು? ಸರಿ, ಹೌದು ನೀನು ಭಾನು ತನುಜ. ಸೂರ್ಯ ನ ಮಕ್ಕಳಾದ ಯಮ, ಶನಿ. ಇಬ್ಬರೂ ತಾಗಿದ್ದಾರೀಗ ನಿನಗೆ, ಯಮ ಎಳೆಯುತ್ತಾನೆ, ಶನಿ ತಳ್ಳುತ್ತಿದ್ದಾನೆ. ಅಲ್ಲವಾದರೆ ನಿನಗೆ ಆ ಎರಡೂ ಆಗಿರುವ ನನ್ನ ಇದಿರು ಬಂದಿದ್ದಿಯಲ್ಲಾ, ಏನು ಧೈರ್ಯವೋ ನಿನಗೆ?
ಇದು ಪದ್ಯದ ಅರ್ಥ, ಆದರೆ ಪದ್ಯದ ಅರ್ಥವಲ್ಲ. ಹೀಗೆ ಹೇಳುವ ಮೊದಲು, ಇದಕ್ಕೆ ಹೀಗೆ ಅರ್ಥವಾಗುತ್ತದೆ ಎಂಬ ಕಲ್ಪನೆ ಬರುವುದಿಲ್ಲ. ಕವಿಗಂತೂ ಈ ಭಾವದ ಸ್ವಪ್ನವೂ ಇತ್ತೋ ಇಲ್ಲವೊ. ಆದರೆ, ಇದು ಪದ್ಯ ನಿಷ್ಠವಾದ "ಒಳಗಿನ ಮೀರುವಿಕೆ" ಇದೇ ನಿಜವಾದ creativity.

ದಿ। ದೇರಾಜೆ ಸೀತಾರಾಮಯ್ಯನವರ ಮಾತಿನಲ್ಲಿ ಹೇಳುವುದಾದರೆ ಹೀಗೆ ಅರ್ಥ ಹೇಳಿದರೆ, - "ಪ್ರಸಂಗದ ಕವಿಯು ಸ್ವರ್ಗದಲ್ಲಿದ್ದು, ಕೇಳಿ, ಹಾಲು ಕುಡಿಯುತ್ತಾನೆ."■

• ಡಾ. ಎಂ. ಪ್ರಭಾಕರ ಜೋಶಿ