ವಿಷಯಕ್ಕೆ ಹೋಗು

ಪುಟ:ಮುಡಿ.pdf/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
130
ಮುಡಿ


ಇಡಿಯ ಪ್ರಕರಣದ ಚರ್ಚಾತ್ಮಕ ವಿಮರ್ಶೆ ಭೀಷ್ಮನ ವರ್ತನೆಯ ಬಗೆಗಿನ ಚರ್ಚೆ ಜರಗುವುದು ಪರಶುರಾಮ-ಭೀಷ್ಮ ಸಂವಾದದಲ್ಲಿ. ಇದುವೆ ಔಚಿತ್ಯಪೂರ್ಣವಾದ ಸಂಗತಿ. ಪ್ರಸಂಗದ ಕೊನೆಯಲ್ಲಿರುವ ಸನ್ನಿವೇಶವಾದುದರಿಂದ ಇಲ್ಲಿ ಆ ಚರ್ಚೆ ಉಚಿತ. ಪರಶುರಾಮನು ಗುರುವಾಗಿ ಭೀಷ್ಮನನ್ನು ವಿಚಾರಿಸಲು, ಅಂಬೆಯ ಪಕ್ಷೀಯನಾಗಿ ಆಕ್ಷೇಪಿಸಲೂ ತಕ್ಕ ಪಾತ್ರ.
ಒಟ್ಟು, ಪ್ರಬಂಧದಲ್ಲಿ ಯಾವುದು ಎಲ್ಲಿ ಬರಬೇಕು, ಯಾವ ಪ್ರಮಾಣದಲ್ಲಿ ಬರಬೇಕು ಎಂಬ ನೋಟವಿಲ್ಲದೆ ಚರ್ಚೆ ಬೇಕು, ವಾದ ಬೇಕು ಎಂದು ನಿರೀಕ್ಷಿಸಿದರೆ ಅರ್ಥಗಾರಿಕೆಯ ತಿಳಿವಾಗದು. ಪ್ರಸಂಗದ ಅರ್ಥೈಸುವಿಕೆಯೂ ಆಗಲಾರದು. ಪ್ರಸಂಗವೊಂದರ ಪ್ರದರ್ಶನದಲ್ಲಿ ಸಮಗ್ರ ದೃಷ್ಟಿ ಮುಖ್ಯ. ಇಡಿಯ ಪ್ರಸಂಗವು ಸಾಗುವಾಗ ವಿಭಿನ್ನ ಘಟ್ಟಗಳಲ್ಲಿ ವಸ್ತುವಿನ ಬೇರೆ ಬೇರೆ ಮುಖಗಳು ಪ್ರಕಾಶಿಸುತ್ತ ಹೊಗಬೇಕು. ಈ ಅನಾವರಣ ಕೊನೆಯವರೆಗೂ ಸಾಗುತ್ತಿರಬೇಕು. ಪುನರಾವರ್ತನೆ ಇರುವ ಕತೆಯಾದರೆ ಈ ಕುರಿತು ಹೆಚ್ಚಿನ ಎಚ್ಚರ ಅಗತ್ಯ. ಬದಲಾಗಿ ಪರಶುರಾಮನ ಸನ್ನಿವೇಶದಲ್ಲಿ ಬರಬೇಕಾದ ಅರ್ಥ, ಅರ್ಥೈಸುವಿಕೆ, ವಾದಮುಖಗಳೆಲ್ಲ ಮೊದಲೇ ಅಂಬೆಯಿಂದಲೇ ಬಂದರೆ, ಪರಶುರಾಮನ ಬರುವಿಕೆಯು ಅನಗತ್ಯವೆಂಬಂತಾಗುತ್ತದೆ. ಪಾತ್ರ-ಸಂದರ್ಭಗಳ ಔಚಿತ್ಯ, ಪ್ರಬಂಧ ಔಚಿತ್ಯ ನಷ್ಟವಾಗುತ್ತದೆ.
ಹೀಗೆ ನೋಡಿದರೆ ಭೀಷ್ಮ ವಿಜಯ ಪ್ರಸಂಗದಲ್ಲಿ ಭೀಷ್ಮ-ಅಂಬೆಯರಲ್ಲಿ ವಾದಾಂಶವು ತೀರ ಮಿತವೆಂಬುದು ಸ್ಪಷ್ಟವಾಗುತ್ತದೆ. ವಾದದ ನಿರೀಕ್ಷೆಯೆಂಬುದು ಕೃತಕ ಮತ್ತು ಕಾಲಿಕ, ನೈಜವಲ್ಲ, ನ್ಯಾಯವಾದುದಲ್ಲ.





• ಡಾ. ಎಂ. ಪ್ರಭಾಕರ ಜೋಶಿ