ವಿಷಯಕ್ಕೆ ಹೋಗು

ಪುಟ:ಮುಡಿ.pdf/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮುಡಿ
23

ಇಂತಹ ರಂಗಪ್ರಕಾರವು ರೂಪಿತವಾಗಿ ಮೂಡುವುದೇ ಒಂದು ಸವಾಲಿಗೆ, ಅವಶ್ಯಕತೆಗೆ ಉತ್ತರವಾಗಿ, ದೇವಸ್ಥಾನ ಕೇಂದ್ರಿತವಾದ ನಮ್ಮ ಧಾರ್ಮಿಕ-ಮತೀಯತೆ, ವೈದಿಕಆಗಮಿಕ — ಪೌರಾಣಿಕ — ಜಾನಪದಗಳ ಸಮ್ಮಿಶ್ರವಷ್ಟೆ? ಅದನ್ನೂ, ಅಂತೆಯೆ ಭಾರತ ರಾಮಾಯಣ ಕಾವ್ಯ-ಪುರಾಣಗಳ ವಸ್ತು, ಆಶಯಗಳನ್ನೂ ಬಹುಜನಕ್ಕೆ ಸರಳ-ಸುಲಭರಂಜಕವಾಗಿ ತಲುಪಿಸುವುದು ಹೇಗೆ?

ಅದಕ್ಕಾಗಿ ಹೀಗೆ ನಾಟ್ಯ ಮಂದಿರದಿಂದ, ಹೊರಕ್ಕೆ ಚಾಚಿದ "ಬಾಹ್ಯ ಪ್ರಯೋಗ" (ನಾಟ್ಯ ಶಾಸ್ತ್ರದಲ್ಲಿ ಬಯಲಾಟಕ್ಕೆ ಈ ಹೆಸರು) ಬೆಳೆಯಿತು. ಭಕ್ತಿಯನ್ನು, ಅದರಲ್ಲೂ ಮುಖ್ಯವಾಗಿ ವೈಷ್ಣವ ಭಾಗವತ ಸಂಪ್ರದಾಯವನ್ನು, ಸಾರ್ವಜನಿಕ, ಸಾರ್ವತ್ರಿಕಗೊಳಿಸುವುದು ಹೇಗೆ? ಎಂಬುದಕ್ಕೆ ಉತ್ತರವಾಗಿ ಆಗಲೇ ರೂಪುಗೊಂಡಿರಬುದಾದ, ಕನ್ನಡ ಪದ್ಯ ಕಾವ್ಯಗಳ ರಚನೆ, ಓದುವಿಕೆ, ಪುರಾಣ ವಾಚನ ಪ್ರವಚನಗಳು, ಹರಿಕಥೆ, ವಿವಿಧ ಜಾನಪದ ಗಾಯನ ಪದ್ಧತಿಗಳು, ಬಹುರೂಪಿ, ನಟ್ಟುವ, ದೇವದಾಸಿ ನಾಟ್ಯ ಮೊದಲಾದುವುಗಳ ಹೆಚ್ಚು ಸಶಕ್ತ ಉತ್ತರಾಧಿಕಾರಿಯಾಗಿ ಇದು ರೂಪುಗೊಂಡಿತೆನ್ನಬಹುದು. ಹೀಗೆ ರೂಪ ತಾಳುವಾಗ ಅದು ತನ್ನ ಸುತ್ತ ಇದ್ದ ದೇವ ಮಂದಿರಗಳಿಂದ, ಭೂತಾರಾಧನೆಯಿಂದ, ಇನ್ನಿತರ ಆಚರಣಾ ಪ್ರಕಾರಗಳಿಂದ ಗಾನ, ವಾದ್ಯ, ವೇಷ, ತಂತ್ರಗಳನ್ನು ಅಂಶೋದ್ಧಾರ ರೂಪದಲ್ಲಿ ಪಡೆಯಿತು. ಹೀಗೆ ಪಡೆದು, ಅದು ಭಕ್ತಿ ಪಂಥದ ಒಂದು ವಾಹಕವಾಗಿ ಬೆಳೆಯಿತು. (ಮತಾಂತರದ ವಿರುದ್ಧ ಜನಜಾಗೃತಿಗಾಗಿ, ಸನಾತನ ಧಾರ್ಮಿಕ ವಿಸ್ತರಣವಾಗಿ ಇದು ಬೆಳೆದಿರಬಹುದಾದ ಒಂದು ಸಾಧ್ಯತೆಯನ್ನು ದಿ| ಮುಳಿಯ ಮಹಾಬಲ ಭಟ್ಟರು ಭಾಷಣವೊಂದರಲ್ಲಿ ಸೂಚಿಸಿದ್ದರು).

ಹೀಗೆ, ಕೆಲವರಿಂದ ಹಲವರೆಡೆಗೆ, ಹಲವರಿಂದ ಎಲ್ಲರೆಡೆಗೆ ಹೋಗುವ ಜನಾಭಿಮುಖ ಸಂವಹನದ ಪ್ರಕ್ರಿಯೆಯೇ ಓತಪ್ರೋತವಾಗಿ ಇಂದಿನವರೆಗೂ ಹರಿದಿದ್ದು, ಈ ದೃಷ್ಟಿಯಿಂದಲೆ ಯಕ್ಷಗಾನದ ಇತಿಹಾಸವನ್ನು ಸಂರಚಿಸಬಹುದು.

ಸುಮಾರು ಕ್ರಿ. ೧೩೦೦ ಹೊತ್ತಿಗೆ ರೂಪಿತವಾಗಿರಬಹುದಾದ, ದಶಾವತಾರ ಬಯಲಾಟಗಳೂ, ತತ್ಸಮಾನವಾದ ಪ್ರಾದೇಶಿಕ ಮತ್ತು ಅಖಿಲ ಭಾರತ ವ್ಯಾಪ್ತಿಯ ರಂಗಭೂಮಿಗಳೂ ಮುಂದೆ ಇದಿರಿಸಿದ ಸನ್ನಿವೇಶಗಳೂ, ಹಲವು ವಿಚಾರಗಳಲ್ಲಿ ಸಮಾನವಾಗಿದ್ದು, ಅವು ಕಂಡುಕೊಂಡ ಪರಿಹಾರಗಳೂ ಹಾಗೆಯೇ ಇವೆ. ಶಾಸ್ತ್ರವೂ,

* ಡಾ. ಎಂ. ಪ್ರಭಾಕರ ಜೋಶಿ