ವಿಷಯಕ್ಕೆ ಹೋಗು

ಪುಟ:ಮುಡಿ.pdf/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮುಡಿ
27

ಯಕ್ಷಗಾನದಲ್ಲೂ ಆಗಿದೆ. ವಸ್ತು, ಸಂಘಟನೆ, ವೇಷ ವಿಧಾನಗಳಲ್ಲಿ ಆ ಕಾಲದಲ್ಲಿ ಬೀಜರೂಪವಾಗಿ ಕಾಣಿಸಿಕೊಂಡ ಬದಲಾವಣೆಗಳೆಲ್ಲ ೧೯೫೦ ಮತ್ತು ೧೯೭೦ರ ಎರಡು ಮುಖ್ಯ ಪರಿವರ್ತನ ಪರ್ವಗಳಲ್ಲಿ ಪ್ರಕರ್ಷದಿಂದ ಅಭಿವ್ಯಕ್ತವಾಗಿವೆ 1920ರ ಬಳಿಕ, ಬಹುಶಃ ನೂತನ ಶಾಲಾ ಶಿಕ್ಷಣದ ಪ್ರಭಾವ ಪಸರಿಸಿದ ಬಳಿಕ, ತಾಳಮದ್ದಳೆ ಕ್ಷೇತ್ರದ ಕೇಳುಗರಲ್ಲುಂಟಾದ ಪರಿಷ್ಕಾರದಿಂದಾಗಿ, ಈ ಪ್ರಕಾರವೂ ಪರಿವರ್ತನೆಯನ್ನು ಮಾಡಬೇಕಾಗಿ ಬಂತು. ಸರಳ ಅನುವಾದ ರೀತಿಯ ಅರ್ಥಗಾರಿಕೆ, ಪೌರಾಣಿಕ ವಿವರಗಳ ಕಥನ ("ಅನುಭವ ಹೇಳುವುದು") ಜಗಳದಂತಹ ಚರ್ಚೆಗಳು, ಸಮಗ್ರ ಪ್ರಸಂಗದ ಅಳವಡಿಕೆ, ಆಟದಂತೆಯೆ ಇದ್ದ ಸಾಭಿನಯ ಪ್ರದರ್ಶನ - ಇವುಗಳಿಂದ ಕೂಡಿದ ಸಾಮಾನ್ಯ ಅಭಿರುಚಿಯ ರಂಗವಾಗಿದ್ದ ತಾಳಮದ್ದಲೆಗೆ, ಈ ಕಾಲದಲ್ಲಿ ಒಮ್ಮೆಗೆ ಹಲವು ವಿದ್ವತ್ ಕಲಾವಿದರ ಪ್ರವೇಶವಾಗಿ, ಆಯ್ದ ಪ್ರಸಂಗಗಳ ಅಳವಡಿಕೆ, ಪ್ರತ್ಯೇಕ ವೇದಿಕೆ, ವಿಷಯ ಪ್ರಧಾನ ಅರ್ಥಗಾರಿಕೆ - ಮೊದಲಾದವು ಪ್ರವೇಶಿಸಿದುವು. ಪಾತ್ರಗಳ ಚಿತ್ರಣ, ವಾಗ್ವಾದ, ಚರ್ಚೆಗಳ ಸ್ವರೂಪ ಹೆಚ್ಚು ಪ್ರಗಲ್ಪವಾಯಿತು. ಇದು ಕಾಲಿಕವಾಗಿ, ಬಂದೊದಗಿದ ಅಪೇಕ್ಷೆಗೆ ಸೂಕ್ತವಾದ ಪ್ರತಿಸ್ಪಂದನವಾಗಿತ್ತು. ೧೯೫೦ರ ಬಳಿಕ ಯಕ್ಷಗಾನವು ಕಂಡ ಬದಲಾವಣೆಗಳ ಆರಂಭ ೧೯೩೦ರ ಸುಮಾರಿಗೆ ಆಗಿತ್ತು.


೧೯೫೦ರ ಸುಮಾರಿಗೆ, ಹರಕೆ ಬಯಲಾಟಗಳು, ಒಬ್ಬೊಬ್ಬ ಪ್ರೋತ್ಸಾಹಕನನ್ನು ಅವಲಂಬಿಸುವುದನ್ನೂ, ಅಂತೆಯೆ ಆಟಗಳಿಗೆ ಹೆಚ್ಚು ಜನರನ್ನು ಕರೆತರಲು ವ್ಯವಸ್ಥಿತ ಆಸನಾದಿ ವ್ಯವಸ್ಥೆಗಳ ಅವಶ್ಯಕತೆಗಳನ್ನು ಮನಗಂಡು - ಮೊತ್ತಮೊದಲ ಡೇರೆ ತಿರುಗಾಟ ಮೇಳಗಳು ಆರಂಭವಾದವು. ತೆಂಕು ತಿಟ್ಟಿನಲ್ಲಿ ಇವು ಯಕ್ಷಗಾನ ಸಂಘಟನೆಯಲ್ಲಿ ಕ್ರಾಂತಿಯನ್ನೆ ತಂದುವು. (ಬಡಗು ತಿಟ್ಟಿನಲ್ಲಿ ೧೯೬೭ರ ಸುಮಾರಿನ ಸಾಲಿಗ್ರಾಮ ಮೇಳವು ಆರಂಭದವರೆಗೂ ಡೇರೆ ಮೇಳ ಪುನರುಜ್ಜಿವನಗೊಳ್ಳದಿದ್ದುದು ಒಂದು ಆಶ್ಚರ್ಯಕರ ಸಂಗತಿ), ಒಬ್ಬ ಹರಕೆದಾರನ ಬದಲು, ಪ್ರೇಕ್ಷಕರ ಪ್ರೋತ್ಸಾಹದ ಕಡೆಗೆ ಬಯಲಾಟವು ಸಾಗಿತು. ನೆಲದ ಬದಲು ಆಸನ ವ್ಯವಸ್ಥೆ ಬಂದಂತೆಯೆ, ಕಡಿಮೆ ಮೊತ್ತ ತೆರಬಲ್ಲವನಿಗೆ ಚಾಪೆ, ನೆಲ ಇದ್ದೆ


ತಾಳಮದ್ದಳೆ = ವೇಷ, ನೃತ್ಯಗಳಿಲ್ಲದ ಬೈಠಕ್ ರೂಪದ ಪ್ರದರ್ಶನ.
ದಿ. ಕಲ್ಲಾಡಿ ಕೊರಗ ಶೆಟ್ಟರ ಇರಾ ಸೋಮನಾಥೇಶ್ವರ (ಕುಂಡಾವು) ಮೇಳ, ಶ್ರೀ ನಾಗೋಡಿ ವಿಠಲದಾಸ ಕಾಮತರ ಕೊಲ್ಲೂರು ಮೇಳ

* ಡಾ. ಎಂ. ಪ್ರಭಾಕರ ಜೋಶಿ