ವಿಷಯಕ್ಕೆ ಹೋಗು

ಪುಟ:ಮುಡಿ.pdf/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
34
ಮುಡಿ

ಯಕ್ಷಗಾನ ಕಲಾಸ್ವರೂಪದ ಜ್ಞಾನವುಳ್ಳ, ಸಮತೋಲವಾದ ಪ್ರಬಲ ವಿಮರ್ಶಾ ವಿಧಾನದ ಬೆಳವಣಿಗೆ ಇಂದಿನ ಇನ್ನೊಂದು ಅಗತ್ಯ.

ಯಕ್ಷಗಾನ ವ್ಯಾವಸಾಯಿಕತೆ, ವಾಣಿಜ್ಯೀಕರಣಗಳು ತಾವಾಗಿ ಅನುಚಿತವಲ್ಲ. ಯಾವುದೇ ಕಲೆ ವ್ಯವಸಾಯವಾದರೆ ಮಾತ್ರ ಅದು ನಿರಂತರತೆಯನ್ನು ಪರಿಣತಿಯನ್ನೂ ಹೊಂದಬಲ್ಲುದು. ಆದರೆ, ವ್ಯವಸಾಯ ವಾಣಿಜ್ಯಪರತೆಯು ಸಮತೋಲನವಾದ, ಕಲಾಪರವಾದ, ಗಂಭೀರವಾದ ಸೈದ್ಧಾಂತಿಕ ಧೋರಣೆಯ ಮೇಲೆ ಆಧರಿತವಾಗಬೇಕು. ಅದೇ ರೀತಿ ವ್ಯವಸಾಯ ಮೇಳಗಳೂ, ದೇವಾಲಯಗಳೂ, ಸರ್ಕಾರಿ ವ್ಯವಸ್ಥೆಯೂ, ಕಲಾವಿದ ರಂಗಕರ್ಮಿಗಳಿಗೆ ಆರ್ಥಿಕ ಭದ್ರತೆ, ಜೀವನಮಟ್ಟ ಸುಧಾರಣೆಗಾಗಿ ವ್ಯಾಪಕ ಯೋಜನೆಗಳನ್ನು ಜಾರಿಗೊಳಿಸಬೇಕು. ಯಕ್ಷಗಾನ ವ್ಯವಸಾಯವು ಬಲು ಕಠಿಣ ಕಸುಬು. ಅದೀಗ ಅಪಾಯದಲ್ಲೂ ಇದೆ.

ಮುಂದಿನ ದಶಕದಲ್ಲಿ, ಮೇಳಗಳ ಸಂಖ್ಯೆ ಕಡಿಮೆಯಾಗಲಿದೆ. ಸಂಘಟನಾ ಸ್ವರೂಪ ಬದಲಾಗಲಿದೆ. ಸಂಖ್ಯೆಯ ಇಳಿಕೆಯು ಗುಣವೃದ್ಧಿಗೆ ಕಾರಣವಾಗುವುದಾದರೆ ಸ್ವಾಗತಾರ್ಹವೇ ಆಗಿದೆ.

೧೨

ಬಲುವೇಗದ ಬದಲಿನ ಹುದಲಿನಲ್ಲಿ ನಾವೆಲ್ಲ ಇದ್ದೇವೆ. ಕಲೆಗಳ ಮುಂದೆ ಬರುವ ಮುಖಾಮುಖಿಗಳು ಬಹು ಸ್ವಾರಸ್ಯಕರ, ಮತ್ತು ವಿಚಿತ್ರ. ಈ ಗಾಳಿಗೆ ಹೊಟ್ಟಿನೊಡನೆ ಕಾಳು, ಗಿಡ ಮಾತ್ರವಲ್ಲ ನೆಲವೇ ಹಾರಿಹೋಗುವ ಕಾಲವಿದು. ಈ ಸನ್ನಿವೇಶಕ್ಕೆ ನಮ್ಮ ಪ್ರತಿಕ್ರಿಯೆಯು ಹೇಗಿರುತ್ತದೆ, ಹೇಗಿರಬೇಕು ಎಂಬ ಕುರಿತ ಮುಂದಣ ವಿಚಾರವು, ಉತ್ತರವಾದಿತ್ವವನ್ನೂ, ಉತ್ತರೋತ್ತರ ಉತ್ಕರ್ಷವನ್ನೂ ನಿರೀಕ್ಷಿಸುತ್ತದೆ. ಇದೆಲ್ಲವೂ ಈ ಕ್ಷೇತ್ರದ ಆಂತರಿಕ ವಿವೇಕದ, ನೇತೃತ್ವದ ಪ್ರಶ್ನೆ.
ಬಹುರಾಷ್ಟ್ರೀಯ ಕಂಪೆನಿಯೊಂದು ಯಕ್ಷಗಾನ ಮೇಳವನ್ನು ಪ್ರಾಯೋಜಿಸಿದರೆ, ವೀರಭೂಮಿಕೆ ವಹಿಸಿ ಒಲ್ಲೆ ಎನ್ನಬೇಕೆ, ಅಲ್ಲ, ಬರಲಿ, ಸಕ್ರಮವಾದ ಪೋಷಣೆ ಎಲ್ಲಿಂದ ಬಂದರೂ ಸ್ವಾಗತ ಎನ್ನಬೇಕೆ ? ಎಂಬಂತಹ ಪ್ರಶ್ನೆಯನ್ನು ಭವಿಷ್ಯದ ಸವಾಲುಗಳ ಮಾದರಿಯಾಗಿ ಇಲ್ಲಿ ಪ್ರಸ್ತಾವಿಸಬಹುದು.

ಬಹುಚರ್ಚಿತವಾಗಿ, ಈಗಾಗಲೇ ಅನೇಕ ವಾದ ಸಂವಾದಗಳನ್ನು ನಿರ್ಮಿಸಿರುವ -ಭೂಗೋಳೀಯಕರಣದ ಪರಿಣಾಮವೂ ನಮ್ಮ ಕಲೆಗಳ ಮೇಲಾಗಲಿದೆಯಷ್ಟೇ ? ಅದು ಬೇಕೆ ಬೇಡವೆ, ಎಂಬುದೀಗ ಪ್ರಶ್ನೆಯಿಲ್ಲ. ಹೇಗೆ ಬೇಕೆಂಬುದೇ ಪ್ರಶ್ನೆ.

*ಡಾ. ಎಂ. ಪ್ರಭಾಕರ ಜೋಶಿ