ವಿಷಯಕ್ಕೆ ಹೋಗು

ಪುಟ:ಮುಡಿ.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

40

ಮುಡಿ

{{}}ಯಕ್ಷಗಾನವು ಜಾನಪದದ ಸರಳತೆಗಿಂತ ಹೆಚ್ಚು ಸಂಕೀರ್ಣ. ಅದು ಶಾಸ್ತ್ರೀಯ ಮಾರ್ಗದಲ್ಲಿರುವ ಕಲೆಯಾದರೂ ಜಾನಪದ ಅಂಶಗಳೂ ಇವೆ. ಅದರ ಆಶುಭಾಷಣ ಸ್ವರೂಪವೂ ಜಾನಪದೀಯ ಸಮೃದ್ಧಿಗೆ ಕಾರಣ. ಅದರ ಸ್ವರೂಪದಲ್ಲಿರುವ ಬೆಳವಣಿಗೆ, ಸಾಮಗ್ರಿ, ಸಮೃದ್ಧಿಗಳಿಂದಾಗಿ ಅದು ಹೆಚ್ಚು ತಾಳಿಕೆ, ಬಾಳಿಕೆಗಳ ಗುಣ ಹೊಂದಿದೆ. ವಿಸ್ತಾರವಾಗಿರುವ ಜಾನಪದ ರಂಗದೊಂದಿಗೆ ಹೋಲಿಸಿ ನೋಡುವುದು, ದೊಡ್ಡ ಅಧ್ಯಯನ. ಆದರೆ ಇಷ್ಟನ್ನು ಹೇಳಬಹುದು. ನಮ್ಮ ಜಾನಪದ ರಂಗದ ಪ್ರಗತಿಗೆ ಸಂವೇದನಾಶೀಲತೆಗೆ ಒಂದು ಮಾದರಿಯನ್ನು 'ಮಾರ್ಗ'ವನ್ನು ಯಕ್ಷಗಾನ ರೂಪಿಸಿದಂತಿದೆ.
ಪ್ರಶ್ನೆ : ಯಕ್ಷಗಾನವು ಹಿಂದೂ ಧರ್ಮ ಪ್ರಚಾರಕ್ಕಾಗಿ ಇರುವಂತಹುದೆ ? ಹಾಗಿರಬೇಕೇ? ಇರುವುದು ಸರಿಯೇ ?
ಉತ್ತರ : ಹೆಚ್ಚಿನೆಲ್ಲಾ ಕಲೆಗಳೂ ಹುಟ್ಟಿದ್ದು ಆ ಆ ದೇಶಗಳ ಮತ-ಧರ್ಮ ಪ್ರಸಾರಗಳಿಗಾಗಿ, ಆಚರಣೆಗಳಿಗಾಗಿ, ಇದು ಜಗತ್ತಿನ ಕಲೆಗಳ ಇತಿಹಾಸದಲ್ಲಿ ಸ್ಥಾಪಿತವಾದ ಸಂಗತಿ. ಮತಧರ್ಮಗಳನ್ನು ಕಲೆಗಳು ವಿಶಾಲಗೊಳಿಸಿವೆ. ಇಂದಿಗೂ ಮತ, ಧರ್ಮ, ದರ್ಶನಗಳಿಂದ ಪ್ರೇರಣೆ ಪಡೆಯುವ ಕೋಟ್ಯಂತರ ಜನರೂ ಇದ್ದಾರೆ. ಹಾಗಾಗಿ -ಮತೀಯತೆ, ಧಾರ್ಮಿಕಗಳಲ್ಲಿ ಪ್ರಸ್ತುತಕ್ಕೆ ಬೇಕಾದ ಅಂಶಗಳೂ ಇವೆ. ಬೇಡವಾದುವೂ ಇವೆ. ಮನೋಜೀವನಕ್ಕೆ ಪ್ರಾಚೀನತೆಯ ಪ್ರೇರಣೆ ಇದ್ದೆ ಇರುತ್ತದೆ. ಧಾರ್ಮಿಕತೆ ಇದೆಯೆಂದು ರಾಮಾಯಣ ಇತ್ಯಾದಿಗಳನ್ನು ತಿರಸ್ಕರಿಸಬೇಕಾಗಿಲ್ಲ. ಹಿಂದೂ ಎಂಬುದು ವಿಶಾಲ ಮತಧರ್ಮ ಸಮುಚ್ಚಯ. ಹಿಂದೂ ಧರ್ಮ ಎಂದೊಡನೆ ಹೆದರಬೇಕಾಗಿಯೂ ಇಲ್ಲ.
ಕಲೆಯ ಸಂದೇಶವು ಕಾಲಾಧೀನ. ಅದನ್ನು ರೂಪಿಸಿ ನವೀಕರಿಸಬೇಕಾದುದು ನಮ್ಮ ಕಾಲದ ಹೊಣೆ.

ಡಾ. ಎಂ. ಪ್ರಭಾಕರ ಜೋಶಿ