ವಿಷಯಕ್ಕೆ ಹೋಗು

ಪುಟ:ಮುಡಿ.pdf/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮುಡಿ
45


–ಅಲ್ಲದೆ, ಪ್ರದರ್ಶನದ ಪರಿಣಾಮವು ಸಂಯುಕ್ತವಾದುದು. ಪದ್ಯ, ಚೆಂಡೆ, ಮದ್ದಲೆ,ವೇಷ, ಕುಣಿತ, ರಂಗಕ್ರಮ, ಇವೆಲ್ಲ ಸೇರಿ ಒಟ್ಟು ಪರಿಣಾಮ ಬೀರುವುದು ಎಲ್ಲರ ಅನುಭವದಲ್ಲಿರುವ ವಿಚಾರ, ಸಾಹಿತ್ಯವೇ ಪ್ರಧಾನವೆಂದಲ್ಲ.

–ಇಲ್ಲಿ ಇನ್ನೊಂದು ಮಾತನ್ನು ಹೇಳಬಹುದು. ಒಂದು ಕಥಾ ಸನ್ನಿವೇಶವು ಮಾತಿಲ್ಲದೆಯೆ ಬರಿಯ ನೃತ್ಯ, ನೃತ್ಯಗಳಿಂದಲೆ ಸಾಗುವುದುಂಟು. ಉದಾ - ಮಹಿಷಾಸುರನ ಪ್ರವೇಶದ ನರ್ತನ, ಪ್ರವೇಶ ದೃಶ್ಯ, ಅವನ ಯುದ್ಧ, ಕೊನೆಯಲ್ಲಿ ಅವನು ಅನುಭವಿಸಿದಂತೆ ಕಾಣಿಸುವ ಒಂದು ಬಗೆಯ ಅರಿವಿನ ದ್ವಂದ್ವ - ಇವು ಬರಿಯ ಹಿಮ್ಮೇಳ - ಕುಣಿತಗಳಿಂದ ಮಾಡುವ ಪರಿಣಾಮ ಅಸಾಮಾನ್ಯ. ಇಂಥಲ್ಲಿ ಮಾತು ಆ ಕೆಲಸ ಮಾಡಲಾರದು.

–ಮಾತುಗಾರಿಕೆಯಿಲ್ಲದ, ವಿವರವಾದ ಮುದ್ರೆಗಳ ಚಿತ್ರಾಭಿನಯವೂ ಇಲ್ಲದ ಪಾರಂಪರಿಕ ನಾಟಕ ಪ್ರಕಾರಗಳಿವೆ. ಅಲ್ಲಿ ಹಿಮ್ಮೇಳ, ವೇಷ, ಕುಣಿತಗಳೇ ಇರುವುದು. ಜೊತೆಗೆ ಮುಖವಾಡಗಳು ಮುಖವನ್ನು ಮುಚ್ಚಿರುತ್ತವೆ. ಉದಾ - ಚೈನೀಸ್ ಅಪೇರಾ, ಚೌ (ಛಾವು)

-ಇವುಗಳಲ್ಲಿ ಪೌರಾಣಿಕ ಕಥೆಗಳ ಪರಿಣಾಮಕಾರಿ ಸಂವಹನ, ಮೌಲ್ಯಪ್ರಸರಣ ಆಗುತ್ತದೆಯಷ್ಟೆ ? ಯಕ್ಷಗಾನದ ಪ್ರಕಾರಾಂತರವೇ ಆಗಿರುವ ಭಾಗವತ ಮೇಳಂನಲ್ಲೂ ಮಾತು ಮಿತ, ರಂಗಕೃತಿಯ ಪರಿಣಾಮವು ಅಸಾಧಾರಣ. ಭರತನಾಟ್ಯಂ ಮೂಲಕ ನಮ್ಮ ಅನೇಕಾನೇಕ ಪೌರಾಣಿಕ ವಸ್ತುಗಳು ಸಂವಹನಗೊಳ್ಳುವುದಂತೂ - ಪ್ರಸಿದ್ಧ ವಿಚಾರ.ಹೀಗಾಗಿ ಮಾತಿಲ್ಲದೆ ವಸ್ತು ಸಂವಹನ ಪರಿಣಾಮಕಾರಿಯಲ್ಲ ಎಂಬ ವಾದವು ಸರಿಯಲ್ಲ.

ಕಲೆ : ಶಾಬ್ದಿಕ ಮತ್ತು ಆಶಾಬ್ದಿಕ ಆಕೃತಿಗಳು

ಯಕ್ಷಗಾನವು ವಾಚಿಕಾಭಿನಯ ಪ್ರಧಾನವೆ ? ಸಾಹಿತ್ಯ ಪ್ರಧಾನವೆ ? ಎಂಬ ಹಿಂದಿನ ಚರ್ಚೆಯನ್ನು ಮುಂದುವರಿಸುತ್ತ, ಸಂವಹನಕ್ಕೆ, ಕಲಾಸೃಷ್ಟಿಗೆ ಸಂಬಂಧಿಸಿ ತಾತ್ತ್ವಿಕವಾಗಿ ಕೆಲವು ವಿಚಾರಗಳನ್ನೀಗ ಪರಿಶೀಲಿಸಬಹುದು.

ಕಲೆಯನ್ನಾಗಲಿ, ಸಾಮಾನ್ಯ ವಸ್ತುವನ್ನಾಗಲಿ ನಾವು ಅನುಭವಿಸುವಾಗ, ನಮಗೆ ಅದು ಶಬ್ದರೂಪದಲ್ಲಿ ಅರ್ಥವಾಗುತ್ತದೆ ಎಂದು ಹೇಳಲು ಬರುವುದಿಲ್ಲ. ಅನುಭವವು ನೇರವಾಗಿ ಬರುತ್ತದೆ. ಅದಕ್ಕೆ ಶಬ್ದವೆಂಬ ಭಾಷಿಕ ಆಕಾರವನ್ನು ನೀಡಿ ನಾವು ವಿವರಿಸುತ್ತೇವೆ. ಆದರೆ, ಅರ್ಥವಾದುದರ ವಿವರಣೆ ಶಬ್ದ ಮೂಲಕವೇ ಆಗಬೇಕಿಲ್ಲ. ಎಲ್ಲವನ್ನು ಶಬ್ದ ಮೂಲಕ ಹೇಳಲೂ ಬರುವುದಿಲ್ಲ. ಶಾಬ್ದಿಕ ಭಾಷೆಗೆ ಮಿತಿಗಳಿವೆ, ಅದನ್ನು ಮೀರಿ, ವಿಷಯವನ್ನು ಅದ್ಭುತವಾಗಿ ಹೇಳುವ ಶಕ್ತಿ ಬೇರೆ ಮಾಧ್ಯಮಗಳಿದೆ. ಅದು ನಾದ, ಬಣ್ಣ, ಚಲನೆ, ಶರೀರ ಭಾಷೆ

* ಡಾ. ಎಂ. ಪ್ರಭಾಕರ ಜೋಶಿ