ವಿಷಯಕ್ಕೆ ಹೋಗು

ಪುಟ:ಮುಡಿ.pdf/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಯಕ್ಷಗಾನ :
ಸಮೃದ್ಧಿ ಮತ್ತು ಗೊಂದಲ

ಯಕ್ಷಗಾನ ಕಲೆಯ ಒಟ್ಟು ಪರಿಸ್ಥಿತಿಯನ್ನು ಕಂಡಾಗ, ಎದ್ದು ಕಾಣುವ ಎರಡು ಸಂಗತಿಗಳೆಂದರೆ ಸಮೃದ್ಧಿ ಮತ್ತು ಗೊಂದಲ. ಇವು ಪರಸ್ಪರ ವಿರುದ್ಧವೆನಿಸಿದರೂ, ಈ ರೀತಿಯ ಒಂದು ಸ್ಥಿತಿಯು ಜೀವಂತವಾದ ಮತ್ತು ಧಾವಂತದಲ್ಲಿರುವ ಒಂದು ಸಾಂಸ್ಕೃತಿಕ ಪ್ರಕಾರದಲ್ಲಿ ಅಸಹಜವೇನಲ್ಲ. ಕಲೆಯ ವಸ್ತು, ಅದರ ಮಂಡನೆ, ಶೈಲಿ, ಪರಿಣಾಮ, ಸಿದ್ಧಿ, ಪೇಕ್ಷಕರ ಸ್ಪಂದನ, ಪ್ರಸಂಗ ರಚನೆ, ವ್ಯಾವಸಾಯಿಕ ಸ್ಥಿತಿ ಮತ್ತು ವಿಮರ್ಶೆ ಈಯೆಲ್ಲ ಅಂಗಗಳಲ್ಲೂ ಈಯೆರಡೂ ಸಂಗತಿಗಳು ಒಟೊಟ್ಟಾಗಿ ಇರುವುದನ್ನು ಕಾಣುತ್ತೇವೆ.
ಪ್ರವಾಹ
ಬೆಳವಣಿಗೆ ಎಂಬುದು, ಯಾವ ದಿಕ್ಕಿನಲ್ಲಿ ಸಂಭವಿಸಿದರೂ, ಅದು ಈ ಬಗೆಯ ದ್ವಂದ್ವಾತ್ಮಕ ಸ್ಥಿತಿಗಳನ್ನು ನಿರ್ಮಿಸುತ್ತದೆ. ಸಾಹಿತ್ಯ ಮೂಲದಿಂದ ಹೊರಟು, ಆ ಬಳಿಕ ಕುಣಿತ, ಮಾತುಗಳು ಸೇರಿ, ಆರಾಧನಾರೂಪದಿಂದ ಆಟವಾಗಿ, ಆಟವು ರಂಜನೆಯಾಗಿ, ಅಲ್ಲಿಂದಲೂ ಮುಂದೆ ಬೆಳೆದು ಕಸುಬಾಗಿ, ಸಾಮೂಹಿಕ ರಂಗಭೂಮಿಯಾಗಿ ಬೆಳೆದು ಈಗಿರುವಂತೆ ಇರುವ ಒಂದು ಕಲಾ ಪ್ರಕಾರದ ಇತಿಹಾಸವು ಸಹಜವಾಗಿ, ಏಳು ಬೀಳು,• ಡಾ. ಎಂ. ಪ್ರಭಾಕರ ಜೋಶಿ