ವಿಷಯಕ್ಕೆ ಹೋಗು

ಪುಟ:ಮುಡಿ.pdf/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮುಡಿ

81

ಎಂದು ಹಲವರು ಹೇಳಿದ್ದಾರೆ. ಆದರೆ, ಈ ವಾದಕ್ಕೆ ಪುಷ್ಟಿ ಸಾಲದು. ಕಾರಣ - ಯಕ್ಷಗಾನ ಎಂಬುದು ಮೂಲತಃ ಗಾನೋದ್ದಿಷ್ಟವಾದ ರಚನೆಯ, ಪ್ರಬಂಧದ ಹೆಸರು, ಗಾನ-ಎಂದರೆ ಹಾಡು ಎಂದೂ ಆಗುತ್ತದೆ. (ಹಿಂದಿಯಲ್ಲೂ, ಗಾನಾ, ಗಾನಾ) ರಂಗ ಪ್ರದರ್ಶನಕ್ಕೆ ಅಂದರೆ ಆಟ-ಕೂಟಗಳಿಗೆ ಯಕ್ಷಗಾನ ಎಂಬ ಹೆಸರು ಬಂದದ್ದು ಈಚೆಗೆ, ಬಹುಶಃ, 70-80 ವರ್ಷಗಳಿಂದ ಇರಬಹುದು. ತೆಲುಗು, ತಮಿಳುಗಳಲ್ಲೂ 'ಯಕ್ಷಗಾನ' ಎಂದರೆ ಸಾಹಿತ್ಯದ ಪ್ರಕಾರ, ಪ್ರಬಂಧಜಾತಿ, ನಾವು 'ಪ್ರಸಂಗ' ಎಂದ ಹಾಗೆ.
ಯಕ್ಷಗಾನವು ಭಕ್ತಿ ಚಳವಳಿಯ ಒಂದು ಉತ್ಪನ್ನ, ಅದರಲ್ಲಿ ಭಕ್ತಿ ಪಂಥದ ಕಾವ್ಯಗಳು, ದಾಸ ಸಾಹಿತ್ಯದ ಪ್ರಭಾವ, ಭಜನೆ - ಪುರಾಣ ಪ್ರವಚನ, ಪ್ರಾದೇಶಿಕ ಸಾಂಸ್ಕೃತಿಕ ವಿವರ, ಉಡುಪು ತೊಡಪು, ಆರಾಧನಾ ರಂಗಭೂಮಿ - ಎಲ್ಲ ಸೇರಿಕೊಂಡಿವೆ. ಒಂದೊಂದನ್ನೆ ಹಿಡಿದುಕೊಂಡು ನೋಡಿದರೆ, ಅದೇ ಸರ್ವತ್ರ ಕಾಣಬಹುದು. ಆದರೆ ವಸ್ತುಸ್ಥಿತಿಯು ಹಾಗಿಲ್ಲ.
ಯಕ್ಷಗಾನಕ್ಕೆ ಭೂತಾರಾಧನೆಯ ಮೂಲ ಎಂಬ ವಾದವನ್ನು ನೋಡೋಣ. ಕಿರೀಟದ ಪಟ್ಟಿ, ನಟನ ಆರ್ಭಟ, ಬೊಬ್ಬೆ, ಬಾರಣೆ ಮೊದಲಾದ ಸಾಮ್ಯಗಳಿವೆ ನಿಜ. ಆದರೆ ವ್ಯತ್ಯಾಸಗಳೂ ಬೇಕಾದಷ್ಟಿವೆ. ಜಗತ್ತಿನ ಎಲ್ಲಾ ಧಾರ್ಮಿಕ, ಲೌಕಿಕ ರಂಗಭೂಮಿಗಳಿಗೂ ಮತೀಯ ರಂಗಭೂಮಿ (ರಿಚುವಲ್ ಥಿಯೇಟರ್, ಅನುಷ್ಠಾನ ವಿಧಾನ- ರಂಗ)ವೆ ಮೂಲವೆಂದೂ ಒಂದ ಮತ ಇದೆ. ಆದರೆ ಅದು ವಿಶ್ವ ಸಾಮಾನ್ಯವೆ ಹೊರತು, ಪ್ರದೇಶಕ್ಕೆ ವಿಶೇಷವಲ್ಲ. ಅರದಾಳದಂತಹ ಬಣ್ಣದ ಬಳಕೆ ಭೂತದ ವೇಷಕ್ಕೂ ಇದೆ, ಯಕ್ಷಗಾನಕ್ಕೂ ಇದೆ ಎಂದರೆ ಆಗ ಲಭ್ಯವಿದ್ದ ಮುಖಲೇಪನ ಅದೇ ಹೊರತು ಅದು ಮೂಲ-ಜನ್ಮದ ಪ್ರಶ್ನೆ ಅಲ್ಲ. ಯಕ್ಷಗಾನ ರಂಗಭೂಮಿಗೆ ಪ್ರೇರಣೆ ನೀಡಿದ ಘಟಕಗಳಲ್ಲಿ ಭೂತಾರಾಧನೆಯೂ ಒಂದು ಹೊರತು, ಅದೊಂದೇ ಅಲ್ಲ.
ಭೂತಾರಾಧನೆಯೆ ನೇರವಾಗಿ ಯಕ್ಷಗಾನದ ಮೂಲವಾದರೆ ಭೂತದ ಕತೆಗಳ ಮೊದಲ ಕಥಾಪ್ರಸಂಗಗಳಾಗಿರಬೇಕಿತ್ತು. ಭೂತಾರಾಧನೆಯ ವಾದ್ಯಗಳು ಆಟದಲ್ಲಿರಬೇಕಿತ್ತು ಇತ್ಯಾದಿ ಪ್ರಶ್ನೆಗಳೇಳುತ್ತವೆ. ಪುರಾಣ ಪ್ರವಚನದ ವಿಸ್ತಾರವೆ ಯಕ್ಷಗಾನ ಎಂದು ಊಹಿಸಿ ಸಾಗಿದರೆ, ತದ್ವಿರುದ್ದ ಅಂಶಗಳೆಲ್ಲ ಬೇರೆ ಹೇಗೋ, ಸೇರಿದ್ದು ಅನ್ನಬಹುದು. ಇದೂ ಹಾಗೆಯ ಪಾರ್ಶ್ವಕ ನೋಟ.


• ಬಾರಣೆ ಎಂದರೆ ಕೆಲವು ವೇಷಗಳ ಆಹಾರ ಸ್ವೀಕಾರ ದೃಶ್ಯ. ಉದಾ.: ಕುಂಭಕರ್ಣ, ವೀರಭದ್ರ ಬಾರಣೆ ಇದು ಭೂತಗಳ ಬಾರಣೆಯಂತೆ ಇದೆ.

° ಡಾ. ಎಂ. ಪ್ರಭಾಕರ ಜೋಶಿ