ವಿಷಯಕ್ಕೆ ಹೋಗು

ಪುಟ:ಮುಡಿ.pdf/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮುಡಿ

87
ಅಂದರೆ ನಮ್ಮ ಬಯಲಾಟಗಳ ಭಾಗವತ, ದೂತ (ದೂತಿ), ಹನುಮನಾಯಕ, ರಂಗಸ್ಥಳದ ಕೆಲಸಗಾರ- ಇವರು ಮಾಡುವ ಕೆಲಸಗಳನ್ನು ತೆರುಕೂತ್ತಿನಲ್ಲಿ ಹಾಡುಗಾರ, ಕಟ್ಟೆಯಂಕಾರನ್, ಕೋಮಾಳಿಗಳು ಸೇರಿ ಮಾಡುತ್ತಾರೆ. ಅಲ್ಲಿಯ ಹಾಡುಗಾರನಿಗೆ, ನಮ್ಮ ಭಾಗವತನಿಗಿರುವಷ್ಟು ಜವಾಬ್ದಾರಿ ಇಲ್ಲ. ಕಾರಣ ಅದರ ಒಂದಂಶ ಕೋಮಾಳಿ- ಕಟ್ಟಿಯಕ್ಕಾರರಿಗೆ ಸಲ್ಲುತ್ತದೆ. ಕೋಮಾಳಿ-ಕಟ್ಟಿಯಕ್ಕಾರರಿಗೂ ಸಂಭಾಷಣೆ ಜರಗುವುದುಂಟು. ಕೋಮಾಳಿಯ ವೇಷ, ವಿದೂಷಕನದು. ಅಂದರೆ, ಚಲ್ಲಣ ಅಂಗಿ, ನಾಮ, ಮುಂಡಾಸು, ವಿಚಿತ್ರ ವೇಷ ವಿನ್ಯಾಸ ಇತ್ಯಾದಿ. ಕಟ್ಟಿಯಕ್ಕಾರನದು ಸುಮಾರಾಗಿ ಮಂತ್ರಿಯಂತಹ ಗಂಭೀರ ವೇಷ. ಅವನೇ 'ದೂತಿ' ಪಾತ್ರವನ್ನು ನಿರ್ವಹಿಸಬೇಕಾದಾಗ, ಒಂದು ಸೆರಗನ್ನು ತಲೆಯ ಮೇಲಿಂದ ತಂದು 'ದೂತಿ'ಯಾಗುವುದು ಅಷ್ಟೆ, ನಮ್ಮ ಉತ್ತರ ಕರ್ನಾಟಕದ ಪಾರಿಜಾತ ಆಟಗಳಲ್ಲಿ ಇದ್ದ ಹಾಗೆ.
ಕೋಮಾಳಿ ಮತ್ತು ಕಟ್ಟಿಯಕ್ಕಾರ ಇವರಿಗೆ ರಂಗದಲ್ಲಿ ಹೆಚ್ಚು ಸ್ವಾತಂತ್ರ್ಯವಿದೆ. ಅವರು ಎಲ್ಲ ಪಾತ್ರಗಳನ್ನೂ ಪ್ರಶ್ನಿಸಬಹುದು, ಹಾಸ್ಯಕ್ಕೊಳಪಡಿಸಬಹುದು. ಪ್ರೇಕ್ಷಕ ಮತ್ತು ರಂಗಗಳಿಗೆ ಸೇತುವೆಯಾಗಿ ಅವರಿರುತ್ತಾರೆ. ಪಾತ್ರಗಳ ಸಂಭಾಷಣೆ ಹಾಡುಗಳಿಂದಲೇ ಹೆಚ್ಚು. ಮಾತು ಸ್ವಲ್ಪ ಮಾತ್ರ. ಪಾತ್ರಗಳು ಹಾಡುಗಳನ್ನು ಹಾಡುತ್ತ, ಸಾಹಿತ್ಯವನ್ನು ಹಿಂದೆ ಮುಂದೆ ಮಾಡಿ, ಪುನರಾವೃತ್ತಿ ಮಾಡುತ್ತವೆ. ಮಧ್ಯೆ, ಕೋಮಾಳಿ ಕಟ್ಟಿಯಕ್ಕಾರರು ಪ್ರಶ್ನೆ ಕೇಳುವುದೂ ನಡೆಯುತ್ತದೆ. ಈ ಪ್ರಕ್ರಿಯೆ ಸಂಕೀರ್ಣ ಮತ್ತು ನಾಜೂಕಾಗಿರುವಂತಹುದು. ಹಿಂದಿರುವ ಹಾಡುಗಾರನೂ, ಪಾತ್ರವೂ ಸೇರಿ ಹಾಡುತ್ತಾರೆ. ತೆರುಕೂತ್ತಿನ ಕುಣಿತದಲ್ಲಿ ಚುರುಕಾದ ಚಲನೆ, ಮಿತವಾದ ಪದ್ಯಾಭಿನಯದೊಂದಿಗೆ, ಆಗಾಗ ತಿರುಗಣೆ ಕುಣಿತಗಳಿವೆ. ಇವು ತೆಂಕುತಿಟ್ಟಿನಂತೆ ಇದ್ದರೂ ಬಿಡ್ತಿಗೆಗೆ ಮಾತ್ರ ಇರುವುದಲ್ಲ. ಪದ್ಯದ ಆರಂಭದಿಂದಲೇ ಶುರುವಾಗುತ್ತವೆ. ಕುಣಿತಕ್ಕೆ ನಿಶ್ಚಿತವಾದ ರಂಗಲೇಖ ಮತ್ತು ಡಿಸೈನ್‌ಗಳಿಲ್ಲ. ಅಭಿನಯದಲ್ಲಿ ವಿಶಿಷ್ಟ ಶೈಲೀಕೃತ ರೀತಿಯೂ, ಸಹಜ ಲೋಕ ಧರ್ಮಿಯೂ ಬೆರೆತು ಕೊಂಡಿವೆ. ಒಟ್ಟು ಅಭಿವ್ಯಕ್ತಿಯಲ್ಲಿ ಗಾಂಭೀರ್‍ಯ, ಶಾಸ್ತ್ರೀಯತೆಗಳ ಜೊತೆಗೆ ಜಾನಪದೀಯತೆ, ಗ್ರಾಮ್ಯಾಭಿರುಚಿಗಳೂ ಇವೆ. ನರಸಿಂಹ, ಭೀಮ ಮೊದಲಾದ ಪಾತ್ರಗಳಿಗೆ 'ಮೈಮೇಲೆ ಬರುವುದು', ಮೊದಲಾದವೂ ಇವೆ.

-5-

ತೆರುಕೂತ್ತಿಗೆ ವಿದ್ಯಾವಂತರ ಪ್ರೋತ್ಸಾಹ ದೊರೆತಿಲ್ಲ. ಶಾಸ್ತ್ರೀಯ ಸಂಗೀತ ಮತ್ತು ನೃತ್ಯಗಳಿಗೆ ಬಹಳ ಬೆಂಬಲ ನೀಡುವ ಅಲ್ಲಿಯ ರಸಿಕ ವರ್ಗ, ತೆರುಕೂತ್ತನ್ನು ಅಷ್ಟಾಗಿ

0 ಡಾ. ಎಂ. ಪ್ರಭಾಕರ ಜೋಶಿ