ವಿಷಯಕ್ಕೆ ಹೋಗು

ಪುಟ:ಯಕ್ಷ ಪ್ರಭಾಕರ.pdf/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪೀಠಿಕೆ

ಕದ್ರಿ ನವನೀತ ಶೆಟ್ಟಿ ಯಕ್ಷಧುವ ಪಟ್ಲ ಪ್ರಕಾಶನ
ಕದ್ರಿ ನವನೀತ ಶೆಟ್ಟಿ
ಯಕ್ಷಧುವ ಪಟ್ಲ ಪ್ರಕಾಶನ


ಪ್ರತಿಷ್ಠಿತ ಪಟ್ಲ ಪ್ರಶಸ್ತಿಯನ್ನು ಪಟ್ಲ ಸಂಭ್ರಮದ ವೇದಿಕೆಯಲ್ಲಿ ಕಳೆದ ಮೂರು ವರ್ಸಗಳಿಂದ ನೀಡಲಾಗುತ್ತಿದೆ. ಈ ಪೂರ್ವದಲ್ಲಿ ಪಟ್ಲ ಪ್ರಶಸ್ತಿ ಮಾನ್ಯರಾದವರು - ವೇಷಧಾರಿ ಶ್ರೀ ಪೆರುವಾಯಿ ನಾರಾಯಣ ಶೆಟ್ಟಿ, ಶ್ರೀ ಬಲಿಪ ನಾರಾಯಣ ಭಾಗವತ ಮತ್ತು ಛಂದೋಬ್ರಹ್ಮ ಡಾ. ಶಿಮಂತೂರು ನಾರಾಯಣ ಶೆಟ್ಟಿಯವರು. ಡಾ. ಮಾಳ ಪ್ರಭಾಕರ ಜೋಶಿಯವರನ್ನು 2019ರ ಸಾಲಿನ ಪಟ್ಲ ಪ್ರಶಸ್ತಿಗೆ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಪಟ್ಲ ಭಾಗವತರ ಹಿತೈಷಿ, ಮಾರ್ಗದರ್ಶಕರಾದ ಜೋಶಿಯವರು ಪಟ್ಲ ಹವ್ಯಾಸಿ ಘಟಕದ ಹಿರಿಯ ಮಾರ್ಗದರ್ಶಕರು. ಕಲೆ ಮತ್ತು ಕಲಾವಿದರ ಬಗ್ಗೆ ವಿಶೇಷ ಕಾಳಜಿ, ಪ್ರೀತಿ, ಗೌರವ ಇರಿಸಿಕೊಂಡಿರುವ ಜೋಶಿಯವರು ಕೇವಲ ಯಕ್ಷಗಾನ ಕ್ಷೇತ್ರದ ಹಿರಿಯ ವಿದ್ವಾಂಸರಷ್ಟೇ ಅಲ್ಲ, ವಿವಿಧ ಕ್ಷೇತ್ರಗಳಲ್ಲಿ ಅನುಪಮ ಸಾಧನೆ ಮಾಡಿದ ಕ್ರಿಯಾಶೀಲರು. ಕೊಡದ ನೀರನ್ನು ತಂಬಿಗೆಗಳಲ್ಲಿ ತುಂಬಿಸಿ ಕೊಡುವುದು ಸುಲಭ. ತುಂಬಿಕೊಂಡಷ್ಟು ಮತ್ತೆ ತುಳುಕುವ ನೀರಿನ ಝರಿಯಂತಹ ವ್ಯಕ್ತಿತ್ವ ಜೋಶಿಯವರದ್ದು. ಜೋಶಿಯವರ ಬಗ್ಗೆ ಈಗಾಗಲೇ ನಾಲೈದು ಪರಿಚಯ ಗ್ರಂಥಗಳು ಪ್ರಕಟವಾಗಿವೆ. ಇನ್ನೂ ಹತ್ತಾರು ಅಭಿನಂದನಾ ಗ್ರಂಥಗಳಿಗಾಗುವಷ್ಟು ವಿಷಯಗಳು 'ಜೋಶಿ' ಎನ್ನುವ ಅದ್ಭುತ ವ್ಯಕ್ತಿಯಲ್ಲಿ ನಿಕ್ಷೇಪಿಸಲ್ಪಟ್ಟಿದೆ. ಯಕ್ಷಗಾನದ ಮಟ್ಟು-ತಿಟ್ಟುಗಳ ಬಗ್ಗೆ ಆಟ-ಕೂಟಗಳ ಬಗ್ಗೆ, ಹಿಮ್ಮೇಳ, ಬಣ್ಣಗಾರಿಕೆ, ವೇಷಗಾರಿಕೆ, ಚೌಕಿ, ರಂಗಸ್ಥಳ, ಪ್ರಸಂಗ ಸಾಹಿತ್ಯ, ನೃತ್ಯ, ಅಭಿನಯ, ಮಾತುಗಾರಿಕೆ, ಪ್ರೇಕ್ಷಕ, ವಿಮರ್ಶಕ, ಯಜಮಾನ ಹೀಗೆ ಎಲ್ಲ ಅಂಗಗಳ ಬಗ್ಗೆಯೂ ವಿದ್ವತ್ತೂರ್ಣವಾಗಿ ಮಾಹಿತಿ, ವಿಮರ್ಶೆ, ಸಲಹೆ ನೀಡಬಲ್ಲ ಅಗಾಧ ಪಾಂಡಿತ್ಯದ ನಿಧಿ ನಮ್ಮ ಜೋಶಿಯವರು. 'ಯಕ್ಷ ಪ್ರಭಾಕರ' ಎನ್ನುವ ಈ ಪುಟ್ಟ ಕೃತಿಯು ಪಟ್ಲ ಪ್ರಕಾಶನದಿಂದ ಪ್ರಕಾಶಿಸಲ್ಪಡುತ್ತಿದೆ. ಪ್ರಸಂಗ ಸಾಹಿತ್ಯಗಳು ಯಕ್ಷಗಾನ ಕಲಾವಿದರಿಗೆ ಅನುಕೂಲವಾಗುವಂತೆ ಈ ಕೃತಿಯು 'ಪ್ರಭಾಪಟಲ'ವಾಗಿ ಯಕ್ಷಾಂಗಣದಲ್ಲಿ ಕಂಗೊಳಿಸಲಿ. ಈ ಕೃತಿ ಪ್ರಕಾಶನದ ಪ್ರಾಯೋಜಕ ಶ್ರೀ ಸವಣೂರು ಸೀತಾರಾಮ ರೈ ಅವರಿಗೆ, ಲೇಖನಗಳನ್ನು ಒದಗಿಸಿಕೊಟ್ಟ ಎಲ್ಲ ಲೇಖಕರಿಗೆ ಮತ್ತು ಸೀಮಿತ ಅವಧಿಯಲ್ಲಿ 'ಯಕ್ಷ ಪ್ರಭಾಕರ ಕೃತಿಯನ್ನು ಸಿಂಗರಿಸಿದ ಕಲ್ಲೂರು ನಾಗೇಶರಿಗೆ ಹಾರ್ದಿಕ ನಮನಗಳು.

6