ಪುಟ:ರಂಗಣ್ಣನ ಕನಸಿನ ದಿನಗಳು.pdf/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೪

ರಂಗಣ್ಣನ ಕನಸಿನ ದಿನಗಳು

ಈ ದಿನ ಬೆಂಗಳೂರಲ್ಲಿ ಏನು ಮೀಟಿಂಗು ? ಕೇಳಿದನು.

ತಿಮ್ಮರಾಯಪ್ಪ ! ಏನೋ ಹಾಳು ಮಾಟಿಂಗು- ಅನ್ನು , ನಮ್ಮ ಇಲಾಖೆಯ ಜನವೋ - ಆ ಕಮಿಟಿಯ ಮೆ೦ಬರುಗಳೋ ! ಸಾಕಪ್ಪ ಅವರ ಸಹವಾಸ !!

ಅದೇಕೆ ಹಾಗೆ ಹೇಳುತ್ತೀಯೆ ?”

ಇನ್ನೇನು ಮಾಡಲಿ ಹೇಳದೆ ? ಉಪಾಧ್ಯಾಯರಿಗೆ ಸರಿಯಾದ ತಿಳಿವಳಿಕೆಯಿಲ್ಲ ; ಪಠ್ಯ ಪುಸ್ತಕಗಳಿಗೆಲ್ಲ ಒಂದೊಂದು ಕೈಪಿಡಿಯನ್ನು ತಯಾರಿಸಿಕೊಡಬೇಕು ; ಪ್ರತಿ ಪಾಠಕ್ಕೂ ಹಾಕಿಕೊಳ್ಳಬೇಕಾದ ಪೀಠಿಕೆ, ಉಪಯೋಗಿಸಬೇಕಾದ ಉಪಕರಣಗಳು, ಬೋಧನಕ್ರಮ, ಕೇಳಬೇಕಾದ ಪ್ರಶ್ನೆಗಳು, ಮಂದಟ್ಟು ಮಾಡಿಸಬೇಕಾದ ವಿಷಯ- ಇವುಗಳನೆಲ್ಲ ತಿಳಿಸುವ ಸೂಚನೆಗಳಿರಬೇಕು-ಎಂದು ನಾನು ಹೇಳಿದರೆ, ಒಬ್ಬೊಬರು ಒಂದೊಂದು ರೀತಿಯಾಗಿ ಹರಟಿದರು ಉಪಾಧ್ಯಾಯರ ಸ್ವಾತಂತ್ರ್ಯಕ್ಕೆ ಭಂಗ ತರಬಾರದು, ಅವರ ಮೇಧಾಶಕ್ತಿಗೆ ಸಂಪೂರ್ಣ ಅವಕಾಶ ಕೊಡಬೇಕು, ಒಂದೇ ಅಚ್ಚಿನಲ್ಲಿ ಎರಕ ಹೊಯ್ದಂತೆ ಈ ಕೈಪಿಡಿಯ ಸಲಹೆಗಳು ಬೇಡ ಎಂದು ಒಬ್ಬ ಮಹಾರಾಯ ! ಇಂಗ್ಲೆಂಡಿನಲ್ಲಿ ಉಪಾಧ್ಯಾಯರೆಲ್ಲ ಬಹಳ ಚಾಕಚಕ್ಯದಿಂದ ತಂತಮ್ಮ ಕೈಪಿಡಿಗಳನ್ನು ತಾವೇ ಸಿದ್ಧಗೊಳಿಸಿಕೊಳ್ಳುತ್ತಾರೆ ; ನಮ್ಮ ದೇಶದ ಉ ಪ್ಯಾಧ್ಯಾಯರೂ ಹಾಗೆಯೇ ರಚಿಸಿಕೊಳ್ಳಲಿ ; ನಾವು ಕೈಪಿಡಿ ಮಾಡಿ ಕೊಟ್ಟರೆ ಉಪಾಧ್ಯಾಯರ ಬುದ್ದಿ ಮಂದವಾಗುತ್ತದೆ - - ಎಂದು ಮತ್ತೊಬ್ಬ ಹ್ಯಾಟಿನ ದೊಡ್ಡ ಮನುಷ್ಯ ! ಕೈಪಿಡಿಗಳು ಬೇಕಾಗಿದ್ದರೆ ಖಾಸಗಿ ಸಂಸ್ಥೆಗಳು ತಯಾರಿಸಿ ಕೊಡುತ್ತವೆ. ನಮಗೇಕೆ ಆ ಜವಾಬ್ದಾರಿ ? ಎಂದು ಮಗುದೊಬ್ಬ ಬೃಹಸ್ಪತಿ ! ಅವರ ಪೈಕಿ ಒಬ್ಬರಾದರೂ ನಮ್ಮ ಮೇಷ್ಟರ ಮುಖ ನೋಡಿದವರಲ್ಲ. ನಾನು ಪುನಃ,' ಕನಿಷ್ಠತಮವಾದ ಸಲಹೆಗಳನ್ನು ನಾವು ಕೊಡೋಣ; ಹೆಚ್ಚಿನ ವಿಷಯಗಳನ್ನು ಉಪಾಧ್ಯಾಯರು ತಮ್ಮ ಕಲ್ಪನಾಶಕ್ತಿಯನ್ನು ಉಪಯೋಗಿಸಿ ತಿಳಿಸಲಿ. ಈಗ ಹಲವರು ಉಪಾಧ್ಯಾಯರು ತಪ್ಪು ತಪ್ಪಾಗಿ