ಪುಟ:ರಂಗಣ್ಣನ ಕನಸಿನ ದಿನಗಳು.pdf/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತಿಮ್ಮರಾಯಪ್ಪನ ಬುದ್ಧಿವಾದ

೧೦೫

ಹೇಳಿಕೊಡುತ್ತಿದ್ದಾರೆ, ನಮ್ಮಲ್ಲಿ ಟ್ರೈನಿಂಗ್ ಆಗಿಲ್ಲದ ಉಪಾಧ್ಯಾಯರು ಹಲವರಿದ್ದಾರೆ. ಟ್ರೈನಿಂಗ್ ಆಗಿಲ್ಲದವರನ್ನೇ ಮೊದಮೊದಲು ನೇಮಕ ಮಾಡುತ್ತೀರಿ. ಆಮೇಲೆ ಯಾವಾಗಲೋ ಟ್ರೇನಿಂಗಿಗೆ ಕಳಿಸಿಕೊಡುತ್ತೀರಿ, ಟ್ರೈನಿಂಗ್ ಸಹ ಸಮರ್ಪಕವಾಗಿಲ್ಲ. ಆದ್ದರಿಂದ ಇಂಗ್ಲೆಂಡನ್ನೂ ನಮ್ಮ ದೇಶವನ್ನೂ ಹೋಲಿಸುವುದು ಬೇಡ ಎಂದು ಹೇಳಿದರೂ ಅವರು ಕೇಳಲಿಲ್ಲ ' ಸಿಟ್ ಡೌನ್ –ಕುಳಿತುಕೊಳ್ಳಿ' ಎಂದು ಹೇಳಿ ನನ್ನನ್ನು ಕೂಡಿಸಿ ಬಿಟ್ಟರು. ಇಂಗ್ಲೆಂಡ್ ಮೊದಲಾದ ಕಡೆಗಳಲ್ಲಿ ಉಪಾಧ್ಯಾಯರ ಮಾತೃಭಾಷೆಯಲ್ಲೇ ಸಾವಿರಾರು ಪುಸ್ತಕಗಳು ದೊರೆಯುತ್ತವೆ. ಅವರಿಗೆ ಇತರ ಸೌಕರ್ಯಗಳೂ ಇವೆ. ನಮ್ಮಲ್ಲಿ ಮೇಷ್ಟರಿಗೆ ಇಂಗ್ಲೀಷು ಬರುವುದಿಲ್ಲ ; ಕನ್ನಡದಲ್ಲಿ ತಕ್ಕಷ್ಟು ಪುಸ್ತಕಗಳಿಲ್ಲ. ಇರುವ ಸ್ಥಿತಿಯನ್ನು ನಾವು ಹೇಳಲು ಹೋದರೆ ಆ ದೊಡ್ಡ ದೊಡ್ಡ ಸಾಹೇಬರುಗಳು ನಮ್ಮನ್ನು ಬಹಳ ಕೀಳಾಗಿ ಕಾಣುತ್ತಾರೆ. ನನಗೇಕೋ ಬಹಳ ಬೇಜಾರಾಗಿ ಹೋಯಿತು ತಿಮ್ಮರಾಯಪ್ಪ !?

ರಂಗಣ್ಣ ! ನನಗೆ ಇದೆಲ್ಲ ಗೊತ್ತು ಕಾಣಪ್ಪ , ಅದಕ್ಕೇನೇ ನಾನು ನಿನಗೆ ಹೇಳಿದ್ದು : ಯಾವುದನ್ನೂ ಹೆಚ್ಚಾಗಿ ಮನಸ್ಸಿಗೆ ಹಚ್ಚಿಸಿಕೊಂಡು ಹೋಗಬೇಡ ಎಂದು. ಶಿವನಾಣೆ ! ನಿನಗೆ ಹೇಳುತ್ತೇನೆ, ಕೇಳು, ದೇಶ ಉದ್ಧಾರವಾಗಬೇಕು, ಜನ ಮುಂದಕ್ಕೆ ಬರಬೇಕು- ಎಂದು ಯಾವ ಮಹಾರಾಯನಿಗೂ ಮನಸ್ಸಿನಲ್ಲಿಲ್ಲ. ತಾವು ತಾವು ನಾಲ್ಕು ಜನರ ಹತ್ತಿರ ಒಳ್ಳೆಯವರು ಎಂದು ಅನ್ನಿಸಿಕೊಂಡು, ಬೋರೇಗೌಡನ ಹಣವನ್ನು ದಾಮಾಷಾ ಪ್ರಕಾರ ಹಂಚಿಕೊಂಡು ಕಾಲ ಕಳೆಯಬೇಕು ಎಂಬುವುದೇ ಅವರ ಹಂಚಿಕೆ.'

ಅದು ಹೇಗೆ ಮನಸ್ಸಿಗೆ ಹಚ್ಚಿ ಸಿಕೊಳ್ಳದೇ ಇರುವುದು ? ಹೇಳು ತಿಮ್ಮರಾಯಪ್ಪ, ನಿನ್ನೆಯ ದಿನ ರೈಲಿನಲ್ಲಿ ನಿಮ್ಮ ಜನರ ಮುಖಂಡರೊಬ್ಬರು ಕಲ್ಲೇಗೌಡರು- ಕಾಲು ಕೆರೆದುಕೊಂಡು ಜಗಳಕ್ಕೆ ನಿಂತರು. ಅವರ ಕಟ್ಟಡವೊಂದನ್ನು ಸ್ಕೂಲಿಗೆ ಹತ್ತು ರುಪಾಯಿ ಬಾಡಿಗೆಗೆ ತೆಗೆದುಕೊಂಡಿದ್ದೆವೆ. ಕಟ್ಟಡ ಯುಗಾಂತರದ್ದು ; ರಿಪೇರಿ ಆದದ್ದು ಕ್ರಿಸ್ತ ಪೂರ್ವದಲ್ಲೋ ಏನೋ ! ಸ್ವಲ್ಪ ರಿಪೇರಿ ಮಾಡಿಸಿಕೊಡಿ ಎಂದರೆ