ಪುಟ:ರಂಗಣ್ಣನ ಕನಸಿನ ದಿನಗಳು.pdf/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೫೮

ರಂಗಣ್ಣನ ಕನಸಿನ ದಿನಗಳು

ಎಸ್ಟಿಮೇಟನ್ನು ಬದಲಾಯಿಸಬೇಕು ! ಈಗ ಹೆಚ್ಚು ಹೆಂಚುಗಳು ಹಾರಿ ಹೋಗಿವೆ!- ಎಂದು ಕೊಂಡು ಹೊರಟು ಹೋದರು. ಇನ್ನೂ ಏನೂ ಆಗಿಲ್ಲ.'

“ಈ ಸಣ್ಣ ಪುಟ್ಟ ರಿಪೇರಿಗಳನೆಲ್ಲ ಪಂಚಾಯತಿಯವರಿಂದ ಮಾಡಿಸಬೇಕು ಹೆಡ್ ಮೆಷ್ಟೇ' ಎಂದು ಸಾಹೇಬರು ಹೇಳಿದರು.

“ಇದು ಸರಕಾರಿ ಕಟ್ಟಡ ಸ್ವಾಮಿ ! ಪಂಚಾಯತಿಯವರು ರಿಪೇರಿ ಮಾಡೋದಿಲ್ಲ. ಪಂಚಾಯತಿ ರೂಲ್ಸಿನಲ್ಲಿಲ್ಲ, ಹೋಗಿ ಹೆಡ್ ಮೇಷ್ಟೆ! ಎಂದು ಗದರಿಸುತ್ತಾರೆ. ಪುನಃ ಸ್ಯಾನಿಟರಿ ಇನ್ ಸ್ಪೆಕ್ಟರ್ ಬರೋ ಹೊತ್ತಿಗೆ ಮತ್ತೆ ಕೆಲವು ಹೆಂಚುಗಳು ಎಲ್ಲಿ ಹಾರಿ ಬೀಳುತ್ತವೆಯೋ ! ಪುನಃ ಎಸ್ಟಿಮೇಟನ ಬದಲಾವಣೆ ಆಗಿ ಎಷ್ಟು ಕಾಲ ನಾವು ಕಾಯಬೇಕೋ ? ಎಂದು ಯೋಚನೆ ಸ್ವಾಮಿ ನನಗೆ.'

ಸಾಹೇಬರು ಅಲ್ಲಿ ಹತ್ತು ನಿಮಿಷಗಳ ಕಾಲ ಇದ್ದು ಮೇಷ್ಟ್ರುಗಳ ಟಿಪ್ಪಣಿ ಮತ್ತು ಡೈರಿಗಳನ್ನು ನೋಡಿಕೊಂಡು ಹುಡುಗಿಯರ ಪಾಠಶಾಲೆಗೆ ಬಂದರು. ಅಲ್ಲಿ ಸುಮಾರು ಹದಿನೇಳು ಹದಿನೆಂಟು ಹುಡುಗಿಯರಿದ್ದರು, ಉಪಾಧ್ಯಾಯಿನಿಯ ಹೆಸರು ಸೀತಮ್ಮ, ಆಕೆ ಹಳೆಯ ಕಾಲದ ವಿಧವೆ; ಆದ್ದರಿಂದ ತಲೆಗೆ ಮುಸುಕಿತ್ತು. ಚಿಕ್ಕಂದಿನಲ್ಲಿ ಯಾವಾಗಲೋ ಲೋವರ್ ಸೆಕೆಂಡರಿ ಪರೀಕ್ಷೆಗೆ ಕಟ್ಟಿದ್ದು ತೇರ್ಗಡೆ ಹೊಂದದೆ ಇದ್ದವಳು, ಆಮೇಲೆ ಗಂಡ ಸತ್ತು ಹೊಟ್ಟಿಗೆ ಗತಿಯಿಲ್ಲದೆ, ನೋಡಿಕೊಳ್ಳುವವರಾರೂ ಇಲ್ಲದೆ, ಇದ್ದ ನೆಂಟರು ತಲೆ ಬೋಳಿಸಿದ ಒಂದು ದೊಡ್ಡ ಉಪಕಾರ ಮಾಡಿ ಬೀದೀಗೆ ನೂಕಿದ್ದ ಹೆಂಗಸು ! ಹಿಂದೆ ಲೋವರ್ ಸೆಕೆಂಡರಿವರೆಗೆ ಓದಿದ್ದುದು ಆಕೆಯ ಕಷ್ಟ ಕಾಲಕ್ಕೆ ಸಹಾಯವಾಗಿ ಜೀವನೋಪಾಯಕ್ಕೆ ನೆರವಾಯಿತು. ಆಕೆಗೆ ಸುಮಾರು ಐವತ್ತು ವರ್ಷ ವಯಸ್ಸು.

ಸಾಹೇಬರೂ ರಂಗಣ್ಣನೂ ಒಳಕ್ಕೆ ಹೋಗುತ್ತಲೂ ಆಕೆ ನಮಸ್ಕಾರಮಾಡಿ ಭಯದಿಂದ ನಿಂತು ಕೊಂಡಳು. ಹುಡುಗಿಯರು ಮೌನವಾಗಿ ಎದ್ದು ನಿಂತರು. ಸಾಹೇಬರು ಕುರ್ಚಿಯಮೇಲೆ ಕುಳಿತರು. ಮೇಜಿನ ಮೇಲೆ ಎರಡನೆಯ ಪುಸ್ತಕ ಇತ್ತು. ಅದನ್ನು ನೋಡಿ, 'ಮುಂದಕ್ಕೆ ಪಾಠ ಮಾಡಿ ಎಂದು ಆಕಗೆ ಸಾಹೇಬರು ಹೇಳಿದರು. ಆದರೆ ಆಕೆ