ಪುಟ:ರಂಗಣ್ಣನ ಕನಸಿನ ದಿನಗಳು.pdf/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೬೦

ರಂಗಣ್ಣನ ಕನಸಿನ ದಿನಗಳು

ತ್ತಾಳೆ. ಸರಿಯಾಗಿ ಸಿದ್ಧತೆ ಮಾಡಿಕೊಂಡು ಸ್ಕೂಲಿಗೆ ಬರುವುದಿಲ್ಲ ! ನೀವೇನು ಅವಳಿಗೆ ಶಿಫಾರಸು ಮಾಡುತ್ತೀರಿ !'

ಒಂದು ವೇಳೆ ತಪ್ಪಿದರೆ ನಾನು ತಿದ್ದುತ್ತೇನೆ. ಉಪಾಧ್ಯಾಯಯರು ತಪ್ಪುಗಳನ್ನು ಮಾಡುತ್ತಲೇ ಇರುತ್ತಾರೆ. ನಾವು ತಿದ್ದಬೇಕು.'

ನೀವು ಯಾವಾಗಲೂ ಪಕ್ಕದಲ್ಲಿದ್ದು ಕೊಂಡು ತಿದ್ದುತ್ತೀರೋ? ಪುಸ್ತಕವನ್ನೇ ನೋಡದವರಿಗೆ ಪುಸ್ತಕವನ್ನು ತೆರೆದು ಕೈಗೆ ಕೊಡುತ್ತೀರೋ? ಇವರಿಗೆಲ್ಲ ಏನು ಕೆಲಸ ? ಸರಿಯಾಗಿ ಓದಿಕೊಂಡು ಬಂದು ಪಾಠ ಮಾಡ ಬೇಡವೇ ? ವಿದ್ಯಾಭಿವೃದ್ಧಿಯಿಲ್ಲದೆ ದೇಶ ಹಾಳಾಗಿರುವುದಕ್ಕೆ ಈ ಹಾಳು ಮೇಷ್ಟ್ರುಗಳೇ ಕಾರಣರು! ಸರಿಯಾಗಿ ಪಾಠ ಮಾಡುವುದಿಲ್ಲ ಏನೂ ಇಲ್ಲ! ಯಾವಾಗಲೂ ಕಳ್ಳಾಟ ಆಡುತ್ತಿರುತ್ತಾರೆ !'

ಹೆಚ್ಚು ಸಂಬಳ ತಿನ್ನುವ ದೊಡ್ಡ ದೊಡ್ಡ ಅಧಿಕಾರಿಗಳಿಗೇನೇ ಸರಿಯಾಗಿ ಕನ್ನಡ ಬರೆಯವುದಕ್ಕೆ ಬರದು ! ಆಡುವುದಕ್ಕೆ ಬರದು ! ಈ ದಿನ ನಾನು ಉಕ್ತಲೇಖನ ಹೇಳಿ ಬರೆಸಿದರೆ ತೇರ್ಗಡೆಯಾಗುವ ಅಧಿಕಾರಿಗಳು ಸೇಕಡ ಹತ್ತು ಕೂಡ ಇರುವುದಿಲ್ಲ! ಆ ಬಡವಿ, ವಿಧವೆ, ಹದಿನೇಳು ರೂಪಾಯಿ ಸಂಬಳದ ಹೆಣ್ಣು ಮೇಷ್ಟು ತಮ್ಮ ದೃಷ್ಟಿಯಲ್ಲಿ ದೊಡ್ಡ ಅಪರಾಧಿನಿಯೆ ಸಾರ್ ?'

ನೀವು ಹುಚ್ಚು ಹುಚ್ಚಾಗಿ ಮಾತನಾಡುತ್ತಿದ್ದೀರಿ ! ಇಲಾಖೆಯ ದೊಡ್ಡ ಅಧಿಕಾರಿಗಳನ್ನು ಟೀಕಿಸುತ್ತಿದ್ದೀರಿ ! ನಿಮಗೆ ಎಚ್ಚರಿಕೆ ಕೊಡಬೇಕಾಗಿದೆ!

ರಂಗಣ್ಣನಿಗೆ ಒಂದು ಕಡೆ ರೋಷ ಹುಟ್ಟಿತು ; ಇನ್ನೊ೦ದು ಕಡೆ ವ್ಯಸನವಾಯಿತು. ಮೋಟಾರು ನಿಲ್ಲಿಸುವಂತೆ ಹೇಳಿ ಇಳಿದು ಹೊರಟು ಹೋಗಬೇಕೆಂದು ಒಂದು ಕ್ಷಣ ಹೊಳೆಯಿತು, ಇಳಿದುಬಿಟ್ಟರೆ ಜನಾರ್ದನ ಪುರ ಹನ್ನೆರಡು ಮೈಲಿ ದೂರವಿದೆ! ಬೈಸ್ಕಲ್ ಕೂಡ ಹತ್ತಿರ ಇಲ್ಲ. ಹೇಗೆ ಹೋಗುವುದು ? ಜೊತೆಗೆ, ತಾನು ಹಾಗೆ ಇಳಿದು ಬಿಟ್ಟರೆ ಸಾಹೇಬರಿಗೂ ತನಗೂ ಬಹಿರಂಗವಾಗಿ ವ್ಯಾಜ್ಯವೇ ಆಗುತ್ತದೆಯಲ್ಲ ! ಅದರ ಪರಿಣಾಮ ಹೇಗಾಗುವುದೋ ?- ಎಂದು ಆಲೋಚನೆಗಳು ತಲೆದೋರಿ, ಮೌನವೇ ಪರಮೋಪಾಯ ಎಂದು ನಿರ್ಧಾರ ಮಾಡಿ