ಪುಟ:ರಂಗಣ್ಣನ ಕನಸಿನ ದಿನಗಳು.pdf/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೬೬

ರಂಗಣ್ಣನ ಕನಸಿನ ದಿನಗಳು

ರಾಧವಾಗುವುದರಿಂದ ಆಯಾ ಮೇಷ್ಟರುಗಳಿಗೆ ಸಾಹೇಬರ ಟಿಪ್ಪಣಿಗಳನ್ನು ಕಳಿಸಿದ್ದಾಯಿತು. ಸ್ವಲ್ಪ ತಪ್ಪಿಗೆಲ್ಲ ಹೀಗೆ ಬಡಮೇಷ್ಟರುಗಳ ಹೊಟ್ಟೆಯಮೇಲೆ ಹೊಡೆದರೆ ಹೇಗೆ ? ಎಂದು ಚಿಂತಾಕ್ರಾಂತನಾಗಿ ರಂಗಣ್ಣನು ಎರಡು ದಿನ ಪೇಚಾಡಿದನು.

ಕೆಲವು ದಿನಗಳ ತರುವಾಯ ರಂಗಣ್ಣ ಸ್ಕೂಲುಗಳ ಭೇಟಿಗೆಂದು ಹೊರಟನು. ತಿಪ್ಪೇನಹಳ್ಳಿಯ ಮೇಷ್ಟು ನಿಜವಾಗಿಯೂ ರೂಲ್ಸಿಗೆ ವಿರುದ್ಧವಾಗಿ ನಡೆಯುತ್ತಿದಾನೆಯೆ ? ಇನ್ನೂ ಇತರರು ಯಾರು ಹಾಗೆ ದಾಖಲೆಯಿಲ್ಲದ ಮಕ್ಕಳನ್ನು ಸೇರಿಸಿಕೊಂಡಿದ್ದಾರೆ ? ನೋಡೋಣ ಎಂದು ಆಲೋಚಿಸುತ್ತ ತಿಪ್ಪೇನಹಳ್ಳಿಗೆ ಸುಮಾರು ಒಂಬತ್ತು ಗಂಟೆಯ ಹೊತ್ತಿಗೆ ಹೋದನು. ರಂಗಣ್ಣ ಬೈ ಸ್ಕೂಲ್ಲಿಂದ ಇಳಿದು, ಅದನ್ನು ಗೋಡೆಗೆ ಒರಗಿಸಿದನು. ಮೇಷ್ಟು ವೆಂಕಣ್ಣ ಭಯದಿಂದ ನಡುಗುತ್ತ ಹೊರಕ್ಕೆ ಬಂದು ನಮಸ್ಕಾರ ಮಾಡಿದನು. ಪಾಠ ಶಾಲೆಯ ಗೋಡೆಗೆ ನೋಟೀಸ್ ಬೋರ್ಡ್ ಒಂದನ್ನು ತಗುಲು ಹಾಕಿತ್ತು. ನೋಟೀಸು ಬೋರ್ಡಿನ ಮೇಲೆ, (೧) ಮಕ್ಕಳು ಸರಿಯಾದ ಹೊತ್ತಿಗೆ ಬರಬೇಕು. (೨) ಪಾಠ ಕಾಲದಲ್ಲಿ ಗ್ರಾಮಸ್ಥರು ಒಳಕ್ಕೆ ಬರಕೂಡದು. (೩) ದಾಖಲೆಯಿಲ್ಲದ ಮಕ್ಕಳನ್ನು ಒಳಕ್ಕೆ ಸೇರಿಸುವುದಿಲ್ಲ. (೪) ಸ್ಕೂಲಿನ ಒಪ್ಪಾರದಲ್ಲಿ ಗ್ರಾಮಸ್ಥರು ಯಾರೂ ಕುಳಿತು ಗಲಾಟೆ ಮಾಡಕೂಡದು- ಎಂದು ದಪ್ಪಕ್ಷರಗಳಲ್ಲಿ ಬರೆದಿತ್ತು. ರಂಗಣ್ಣ ಅವುಗಳನ್ನೆಲ್ಲ ನೋಡಿ ತೃಪ್ತಿಪಟ್ಟುಕೊಂಡನು. 'ಮೇಷ್ಟೆ ! ಹಿಂದೆ ಸಾಹೇಬರು ಬಂದಾಗ ಈ ನೋಟೀಸ್ ಬೋರ್ಡನ್ನು ಇಲ್ಲಿ ಹಾಕಿರಲಿಲ್ಲವೇ ?” ಎಂದು ಕೇಳಿದನು.

ಹಾಕಿದ್ದೆ ಸ್ವಾಮೀ ! ಎಲ್ಲವನ್ನೂ ಹಾಕಿದ್ದೆ ! ಏನು ಹಾಕಿದ್ದರೆ ಏನು ? ನನ್ನ ಗ್ರಹಚಾರ ! ತಮ್ಮ ಜುಲ್ಮಾನೆ ಆರ್ಡರು ನಿನ್ನೆ ನನ್ನ ಕೈಗೆ ತಲುಪಿತು ಸ್ವಾಮಿ ! ಅದನ್ನು ನೋಡಿ ಎದೆಯೊಡೆದು ಹೋಯಿತು. ಅನ್ನ ನೀರು ಮುಟ್ಟಿದ್ದರೆ ಕೇಳಿ ! ಆ ಸೂರ್ಯ ನಾರಾಯಣನ ಆಣೆ !

“ಹೌದು ಮೇಷ್ಟೇ ! ತಪ್ಪು ಮಾಡುತ್ತೀರಿ, ಜುಲ್ಮಾನೆ ಬೀಳುತ್ತದೆ. ನೋಟೀಸು ಹಾಕಿದ್ದೀರಿ, ದಾಖಲೆಯಿಲ್ಲದ ಮಕ್ಕಳನ್ನು ಒಳಕ್ಕೆ ಸೇರಿಸುತ್ತೀರಿ! ಸಾಹೇಬರು ತಾನೆ ಏನು ಮಾಡುತ್ತಾರೆ ? ನಾನು ತಾನೇ ಏನು ಮಾಡಬಲ್ಲೆ?'