ಪುಟ:ರಂಗಣ್ಣನ ಕನಸಿನ ದಿನಗಳು.pdf/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೮೨

ರಂಗಣ್ಣನ ಕನಸಿನ ದಿನಗಳು

ಮಾಡಿದ್ದಾರೆ. ಈ ಬಾರಿಗೆ ವಜಾ ಮಾಡುತ್ತೇನೆ. ಆತ ರೇಂಜನ್ನು ಚೆನ್ನಾಗಿಟ್ಟು ಕೊಂಡಿದ್ದಾನೆ ! ಜೊತೆಗೆ ಆತನಲ್ಲಿ ಒಳ್ಳೆಯ ಸಭ್ಯ ಗುಣಗಳಿವೆ !? ಎಂದು ಹೇಳುತ್ತಾ, ' ಜುಲ್ಮಾನೆಗಳನ್ನು ಈ ಬಾರಿಗೆ ವಜಾ ಮಾಡಿದೆ. ಎಂದು ಆರ್ಡರು ಮಾಡಿದರು. 'ಕೂಡಲೇ ಇದನ್ನು ಟೈಪು ಮಾಡಿಸಿ ತನ್ನಿ, ಈಗಲೇ ಇದನ್ನು ಕಳಿಸಿಬಿಡಬೇಕು ' ಎಂದು ಅಸಿಸ್ಟೆಂಟರಿಗೆ ಹುಕುಂ ಮಾಡಿದರು, ಅದರಂತೆ ಸಾಹೇಬರು ತಮ್ಮ ಅಧಿಕಾರದಲ್ಲಿದ್ದಾಗಲೇ ಜುಲ್ಮಾನೆಗಳನ್ನು ವಜಾ ಮಾಡಿ, ಆ ಆರ್ಡರುಗಳನ್ನು ರಂಗಣ್ಣನಿಗೆ ಕಳಿಸಿಬಿಟ್ಟರು.

ತನ್ನ ಶಿಫಾರಸುಗಳು ಸಫಲವಾಗಿ ಜುಲ್ಮಾನೆಗಳು ವಜಾ ಆದುದನ್ನು ಕಂಡು ರಂಗಣ್ಣನಿಗೆ ಬಹಳ ಸಂತೋಷವಾಯಿತು. ಮೇಷ್ಟರುಗಳಿಗೆ ಆಗಿದ್ದ ಅನ್ಯಾಯಗಳು ಈಗ ಪರಿಹಾರವಾದುವಲ್ಲ ಎಂಬುದೊಂದು ಕಾರಣ, ತನ್ನ ಮಾತಿಗೆ ಸಾಹೇಬರು ಬೆಲೆ ಕೊಟ್ಟರಲ್ಲ ಎಂಬುದು ಮತ್ತೊಂದು ಕಾರಣ. ಸಾಹೇಬರು ತಾನು ಮೊದಲು ಭಾವಿಸಿದ್ದಷ್ಟು ನಿರ್ದಯರೂ ಅವಿವೇಕಿಗಳೂ ಅಲ್ಲ; ದರ್ಪದಮೇಲೆ ಆಡಳಿತ ನಡೆಸಬೇಕೆಂಬ ಮನೋಭಾವದವರು ಇರಬಹುದು ಎಂದು ತನ್ನ ಅಭಿಪ್ರಾಯವನ್ನು ಬದಲಾಯಿಸಿಕೊಂಡನು. ಈ ಆರ್ಡರುಗಳ ವಿಚಾರವನ್ನು ತನ್ನ ಹೆಂಡತಿಗೆ ತಿಳಿಸಿದಾಗ ಆಕೆ, 'ನಿಮ್ಮ ಸಾಹೇಬರಿಗೆ ಅವರ ಹೆಂಡತಿ ವಿವೇಕ ಹೇಳಿರಬೇಕೆಂದು ತೋರುತ್ತದೆ ! ಹೇಗಾದರೂ ಆಗಲಿ, ಜುಲ್ಮಾನೆಗಳು ವಜಾ ಆದುವಲ್ಲ. ನನಗೂ ಬಹಳ ಸಂತೋಷ' ಎಂದು ಹೇಳಿದಳು.

ಆ ಹೊತ್ತಿಗೆ ಆವಲಹಳ್ಳಿಯ ದೊಡ್ಡ ಬೋರೇಗೌಡರು ರಂಗಣ್ಣನನ್ನು ನೋಡಲು ಮನೆಗೆ ಬಂದರು, ರಂಗಣ್ಣ ತನ್ನ ಹೆಂಡತಿಗೆ, 'ಗೌಡರು ಆಪರೂಪವಾಗಿ ನಮ್ಮ ಮನೆಗೆ ಬಂದಿದ್ದಾರೆ. ಕಾಫಿ ತಿಂಡಿ ಏನಾದರೂ ಸರಬರಾಜು ಮಾಡು, ನೋಡೋಣ' ಎಂದು ಹೇಳಿ, ಕೊಟಡಿಯಿಂದ ಎದ್ದು ಬಂದು ಗೌಡರನ್ನು ಸ್ವಾಗತಿಸಿದನು. ಕೊಟಡಿಯಲ್ಲಿ ಇಬ್ಬರೂ ಕುಳಿತುಕೊಂಡರು.

ಏನು ಸ್ವಾಮಿ ತಮ್ಮ ಹೆಸರು ಎಲ್ಲ ಕಡೆಗಳಲ್ಲಿ ಬಹಳ ಪ್ರಖ್ಯಾತವಾಗಿದೆಯಲ್ಲ !' ಎಂದು ನಗುತ್ತಾ ಗೌಡರು ಹೇಳಿದರು.