ಪುಟ:ರಂಗಣ್ಣನ ಕನಸಿನ ದಿನಗಳು.pdf/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೮೮

ರಂಗಣ್ಣನ ಕನಸಿನ ದಿನಗಳು

ಸಹಕರಿಸುವಂತೆ ಅವರೂ ಸಹಕರಿಸಿದರೆ ಎಷ್ಟು ಚೆನ್ನಾಗಿರುತ್ತದೆ ! ನನ್ನ ಮನಸ್ಸಿಗೂ ಎಷ್ಟೊಂದು ನೆಮ್ಮದಿಯುಂಟಾಗುತ್ತದೆ ! ಒಳ್ಳೆಯ ಕೆಲಸಕ್ಕೂ ಹೀಗೆ ಅಡಚಣೆಗಳು ಬಂದರೆ ಹೇಗೆ ? ಎಂದು ನಾನು ನೊಂದು ಕೊಂಡಿದ್ದೇನೆ.'

'ಸ್ವಾಮಿ ! ತಾವು ನೊಂದುಕೊಳ್ಳಬೇಡಿ. ಆ ಮುಖಂಡರ ವಿಚಾರವೆಲ್ಲ ನನಗೆ ಗೊತ್ತಿದೆ. ಅವರಿಗೆ ಸರಕಾರದ ಅಧಿಕಾರಿಗಳನ್ನು ತಮ್ಮ ಹತೋಟಿಯಲ್ಲಿಟ್ಟು ಕೊಳ್ಳಬೇಕು, ತಾವು ಹೇಳಿದಂತೆ ವರ್ಗಾವರ್ಗಿಗಳನ್ನೂ ಪ್ರಮೋಷನ್ನುಗಳನ್ನೂ ಅಧಿಕಾರಿಗಳು ಮಾಡುತ್ತಿರಬೇಕು, ರಸ್ತೆ ಕಾಮಗಾರಿಯ ಕಂಟ್ರಾಕ್ಟೋ, ಕಟ್ಟಡಗಳನ್ನು ಕಟ್ಟುವುದರ ಕಂಟ್ರಾಕ್ಟೋ ಇದ್ದರೆ ಅವು ತಮಗೋ ತಮ್ಮ ಕಡೆಯವರಿಗೋ ದೊರೆಯಬೇಕು- ಮುಂತಾದ ದುರಾಕಾಂಕ್ಷೆಗಳಿವೆ. ತಾವು ಈ ರೇಂಜಿಗೆ ಬಂದಮೇಲೆ ತಾವೇ ನೇರವಾಗಿ ಉಪಾಧ್ಯಾಯರೊಡನೆ ವ್ಯವಹರಿಸಿ ಎಲ್ಲವನ್ನೂ ಮಾಡಿಕೊಂಡು ಹೋಗುತ್ತಿದ್ದಿರಿ ; ಮುಖಂಡರ ಕೈಗೊಂಬೆಯಾಗಿ ತಾವು ಏನನ್ನೂ ನಡೆಸುತ್ತಿಲ್ಲ. ಅವರನ್ನು ತಾವು ಅನುಸರಣೆ ಮಾಡಿಕೊಂಡು ಹೋಗುತ್ತಿಲ್ಲ. ಅವರ ಪ್ರತಿಷ್ಠೆಗೆ ಈಗ ಸ್ವಲ್ಪ ಕುಂದುಕ ಬಂದಿದೆ. ತಮಗೆ ಕಿರುಕುಳಗಳನ್ನು ಕೊಡುತ್ತಾರೆ. ಅಲ್ಪ ಜನ ! ಸ್ವಾರ್ಥಿಗಳು ! ತಾವು ಮನಸ್ಸಿಗೆ ಹಚ್ಚಿಸಿಕೊಳ್ಳಬೇಡಿ. ನಿಮ್ಮ ಕೆಲಸವನ್ನು ನಾವುಗಳೆಲ್ಲ ನೋಡುತ್ತಿದ್ದೇವೆ. ಜನರೆಲ್ಲ ನೋಡಿ ಸಂತೋಷ ಪಡುತ್ತಿದಾರೆ ; ಉಪಾಧ್ಯಾಯರಂತೂ ತಮ್ಮಲ್ಲಿ ಭಕ್ತಿ ವಿಶ್ವಾಸಗಳನ್ನು ಬಹಳವಾಗಿ ಇಟ್ಟಿದ್ದಾರೆ. ಈ ರೇ೦ಜಿನಲ್ಲಿ ದಂಡನೆಯೇ ಇಲ್ಲದೆ ಎಲ್ಲರನ್ನೂ ತಾವು ಕಾಪಾಡಿಕೊಂಡು ಹೋಗುತ್ತಿದ್ದೀರಿ ; ಮೇಷ್ಟ್ರುಗಳಿಂದ ಚೆನ್ನಾಗಿ ಕೆಲಸ ತೆಗೆಯುತ್ತಿದ್ದೀರಿ ; ಮಕ್ಕಳಲ್ಲಿ ವಿದ್ಯಾಭಿವೃದ್ಧಿಯನ್ನುಂಟುಮಾಡುತ್ತಿದ್ದೀರಿ.'

'ತಮ್ಮಂಥ ದೊಡ್ಡ ಮನುಷ್ಯರ, ರೈತಮುಖಂಡರ ಪ್ರೋತ್ಸಾಹವೇ ನನಗೆ ಸ್ಫೂರ್ತಿಯನ್ನೂ ಶಕ್ತಿಯನ್ನೂ ಕೊಡುತ್ತಿವೆ. ನನ್ನ ಕೆಲಸವನ್ನು ನಿರ್ವಂಚನೆಯಿಂದ ಮಾಡಿಬಿಡುತ್ತೇನೆ. ಕೀರ್ತಿ ಅಪಕೀರ್ತಿಗಳು ದೈವಕೃಪೆ !!