ಪುಟ:ರಂಗಣ್ಣನ ಕನಸಿನ ದಿನಗಳು.pdf/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಕರಣ ೧೯

ಉತ್ಸಾಹಭಂಗ

ರಂಗಣ್ಣ ತಿಮ್ಮರಾಯಪ್ಪನಿಗೆ ಕಾಗದವನ್ನು ಬರೆದು ಎಲ್ಲವನ್ನೂ ವಿವರಿಸಿದನು ; ತನಗೆ ಹಾಳು ಇನ್ ಸ್ಪೆಕ್ಟರ್‌ಗಿರಿ ಸಾಕಾಯಿತೆಂದು ತಿಳಿಸಿದನು. ಆ ಮೇಲೆ ಆ ಹೊಸ ಸಾಹೇಬರನ್ನು ಕಂಡು ಮಾತನಾಡಿಕೊಂಡು ಬರಬೇಕೆಂದೂ ಅವರ ಸಹಾಯ ಮತ್ತು ಸಹಕಾರಗಳಿಂದ ಮುಂದಿನ ತೊಂದರೆಗಳನ್ನು ನಿವಾರಿಸಿಕೊಳ್ಳಬೇಕೆಂದೂ ನಿಶ್ಚಿಸಿದನು. ಹೊಸದಾಗಿ ಬಂದವರು ತನಗೆ ಚೆನ್ನಾಗಿ ತಿಳಿದವರು ; ತನ್ನಲ್ಲಿ ವಿಶ್ವಾಸ ಮತ್ತು ಗೌರವಗಳನ್ನು ಇಟ್ಟಿರತಕ್ಕವರು ಆದ್ದರಿಂದ ಅವರಿಗೆ ಎಲ್ಲವನ್ನೂ ತಿಳಿಸುವುದು ಒಳ್ಳೆಯದೆಂದು ಆಲೋಚನೆ ಮಾಡಿ ಪ್ರಯಾಣಕ್ಕೆ ಸಿದ್ಧನಾಗುತ್ತಿದ್ದಾಗ ಜನಾರ್ದನಪುರದ ಫೈಮರಿ ಸ್ಕೂಲು ಹೆಡ್ ಮಾಸ್ಟರು ಬಂದು ಕೈ ಮುಗಿದನು. ಆ ಮನುಷ್ಯನ ಮುಖ ದುಗುಡದಿಂದ ತುಂಬಿತ್ತು. ಆತನ ಕೈಯಲ್ಲಿ ಒಂದು ಉದ್ದವಾದ ಲಕೊಟೆ ಇತ್ತು.

“ ಏನು ಹೆಡ್‌ಮೇಷ್ಟೆ ? ಏನು ಸಮಾಚಾರ ? ಈಗ ನಾನು ಪ್ರಯಾಣದ ತರಾತುರಿಯಲ್ಲಿದ್ದೆನಲ್ಲ ! ಹೆಚ್ಚು ಕಾಲ ಮಾತುಕತೆಗಳಲ್ಲಿ ಕೂಡಲಾರೆ' ಎಂದು ರಂಗಣ್ಣ ಹೇಳಿದನು.

ಸ್ವಾಮಿಯವರಿಗೆ ಯಾವಾಗಲೂ ಪ್ರಯಾಣ, ಯಾವಾಗಲೂ ಸರ್ಕೀಟು, ಯಾವಾಗಲೂ ಕೆಲಸದ ತರಾತುರಿ ಇದ್ದೇ ಇರುತ್ತೆ ! ಬಡ ತಾಪೇದಾರರ ಅಹವಾಲನ್ನು ಸಹ ಸ್ವಲ್ಪ ಕೇಳಿ ಸ್ವಾಮಿ !'

ನಿಮಗೇನು ತೊಂದರೆ ಬಂದಿದೆ ? ನಿಮ್ಮ ಅಹವಾಲು ಎಂಥದು ಹೆಡ್ ಮೇಷ್ಟೆ ?

ಈ ಹೆಡ್‌ಮೇಷ್ಟ ಪಟ್ಟ ಸಾಕು ಸ್ವಾಮಿ ! ನನ್ನನ್ನು ಇಲ್ಲಿಂದ ವರ್ಗ ಮಾಡಿಬಿಟ್ಟರೆ ಬದುಕಿಕೊಳ್ಳುತ್ತೇನೆ. ಇಲ್ಲದಿದ್ದರೆ ಇನ್ನು ಕೆಲವು ದಿನ ಗಳೊಳಗಾಗಿ ನನ್ನ ಸಾವು ಖಂಡಿತ ! ಖಂಡಿತ ಸ್ವಾಮಿ !”