ಪುಟ:ರಂಗಣ್ಣನ ಕನಸಿನ ದಿನಗಳು.pdf/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಉತ್ಸಾಹಭಂಗ

೧೯೧

“ಅದೇನು ? ನೀವು ಸಾಯುವುದಕ್ಕೆ ಕಾರಣ ??

“ಆ ಉಗ್ರಪ್ಪನ ಕಾಟವನ್ನು ನಾನು ಸಹಿಸಲಾರೆ ಸ್ವಾಮಿ ! ಈಚೆಗಂತೂ ಮಾನ ಮರ್ಯಾದೆ ಬಿಟ್ಟು ಎಲ್ಲರೆದುರಿಗೂ ಹುಚ್ಚು ಹುಚ್ಚಾಗಿ ಬಯ್ಯುತ್ತಾನೆ. ಪಾಠಶಾಲೆಯಲ್ಲಿ ಪಾಠಗಳನ್ನು ಮಾಡುವುದೇ ಇಲ್ಲ. ಹಾಯಾಗಿ ಮೇಜಿನ ಮೇಲೆ ಕಾಲು ಸೀಟಿಕೊಂಡು ಕುರ್ಚಿಗೆ ಓರಗಿಕೊಂಡು ನಿದ್ದೆ ಮಾಡುತ್ತಾನೆ. ಸ್ವಾಮಿಯವರಿಗೆ ಹಿಂದೆಯೇ ಅರಿಕೆ ಮಾಡಿಕೊಂಡಿದ್ದೆ. ಚಿತ್ರಕ್ಕೆ ಬರಲಿಲ್ಲ.'

ರಂಗಣ್ಣನಿಗೆ ಮೇಷ್ಟು ಉಗ್ರಪ್ಪ ನ ವಿಚಾರ ಚೆನ್ನಾಗಿ ತಿಳಿದಿತ್ತು. ಕರಿಯಪ್ಪ ಮತ್ತು ಕಲ್ಲೇಗೌಡರ ಏಜೆಂಟು ಅವನು. ಹಿಂದೆ ಎರಡು ಬಾರಿ ಜನಾರ್ದನಪುರದ ರೇಂಜಿನಿಂದ ವರ್ಗವಾಗಿ ಪುನಃ ಆ ವರ್ಗದ ಆರ್ಡರು ರದ್ದಾಗಿ ಜನಾರ್ದನಪುರದಲ್ಲಿ ಪಾಳೆಯಗಾರನಾಗಿ ಮೆರೆಯುತ್ತಿರುವ ಸಿಪಾಯಿ ಮೇಷ್ಟು ? ಈಗ ಆವನು ಪುಂಡಾಟಕ್ಕೆ ಪ್ರಾರಂಭಮಾಡಿದ್ದಾನೆಂದು ತಿಳಿಯುತ್ತಲೂ- ತನಗೆ ಎಲ್ಲ ಕಡೆಗಳಿಂದಲೂ ತೊಂದರೆಕೊಡುವುದೂ ಅಪಮಾನಪಡಿಸುವುದೂ ಆ ಮುಖಂಡರ ಹಂಚಿಕೆಯೆಂದು ರಂಗಣ್ಣನಿಗೆ ಬೋಧೆಯಾಯಿತು. ರಂಗಣ್ಣ ಮೌನವಾಗಿದ್ದುದನ್ನು ನೋಡಿ, ಹೆಡ್ ಮೇಷ್ಟ್ಟ್ರು ತಾನೇ ಮಾತನ್ನು ಮುಂದುವರಿಸಿದನು.

“ಮೊನ್ನೆ ರಗತಿಯಿಂದ ಕೆಲವರು ಹುಡುಗರನ್ನೆಲ್ಲ ಹೊರಕ್ಕೆ ಕಳಿಸಿಬಿಟ್ಟು ನಿಮಗೆ ನಾನು ಪಾಠ ಮಾಡುವುದಿಲ್ಲ ! ಹೋಗಿ ನಿಮ್ಮ ಹೆಡ್ ಮಾಸ್ಟರ ಕೊಟಡಿಗೆ ! ಅಲ್ಲೇ ಕುಳಿತುಕೊಂಡು ಪಾಠ ಹೇಳಿಸಿಕೊಳ್ಳಿ!-ಎಂದು ಗಟ್ಟಿಯಾಗಿ ಕೂಗಾಡಿದ ಸ್ವಾಮಿ ಆತ. ನಾನು ಅಲ್ಲಿಗೆ ಹೋಗಿ ಉಗ್ರಪ್ಪನವರೇ ! ಹಾಗೆಲ್ಲ ಹುಡುಗರನ್ನು ಗದರಿಸಿ ಹೊರಕ್ಕೆ ಕಳಿಸಬೇಡಿ- ಎಂದು ವಿನಯದಿಂದ ಹೇಳಿದೆ. ನಾನು ಮುವ್ವತ್ತು ಜನಕ್ಕಿಂತ ಹೆಚ್ಚಿಗೆ ಹುಡುಗರಿಗೆ ಪಾಠ ಹೇಳೋದಿಲ್ಲ - ಎಂದು ಆತ ಹಟ ಮಾಡಿದ. ನಾನೇನು ಮಾಡಲಿ ಸ್ವಾಮಿ ? ಇತರ ಮೇಷ್ಟು ಗಳನ್ನು ಎತ್ತಿ ಕಟ್ಟ ಪಾಠಶಾಲೆಯಲ್ಲಿ ಕೆಲಸ ನಡೆಯದಂತೆ ಮಾಡಿದ್ದಾನೆ.'

“ನೀವು ಆತನಿಂದ ಸಮಜಾಯಿಷಿ ಕೇಳಿ. ಬರವಣಿಗೆಯಲ್ಲಿ ಏನೇನು ಹೇಳುತ್ತಾನೋ ನೋಡೋಣ.